ETV Bharat / state

ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಆರೋಪ: ಪ್ರಕರಣ ರದ್ದು ಕೋರಿ ಶಶಿಕಲಾ ಹೈಕೋರ್ಟ್‌ಗೆ ಅರ್ಜಿ

author img

By

Published : Jun 13, 2023, 6:40 AM IST

Updated : Jun 13, 2023, 9:11 AM IST

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ತಮಗೆ ವಿಶೇಷ ಆತಿಥ್ಯ ನೀಡಲಾಗಿದೆ ಎಂಬ ಆರೋಪದ ಮೇಲೆ ದಾಖಲಿಸಿರುವ ಪ್ರಕರಣ ರದ್ದು ಕೋರಿ ವಿ.ಕೆ ಶಶಿಕಲಾ ಮತ್ತು ಜೆ ಇಳವರಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

High Court, VK Sasikala
ಹೈಕೋರ್ಟ್‌, ವಿ.ಕೆ ಶಶಿಕಲಾ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ತಮಗೆ ವಿಶೇಷ ಆತಿಥ್ಯ ನೀಡಲಾಗಿದೆ ಎಂಬ ಆರೋಪದ ಮೇಲೆ ದಾಖಲಿಸಿರುವ ಪ್ರಕರಣ ರದ್ದು ಕೋರಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ ಶಶಿಕಲಾ ಮತ್ತು ಜೆ ಇಳವರಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಲೋಕಾಯುಕ್ತ ಪೊಲೀರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಶಶಿಕಲಾ ಹೇಳಿದ್ದೇನು?: ’‘ಪರಪ್ಪನ ಅಗ್ರಹಾರ ಜೈಲಿನಲ್ಲಿ ತನಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಆರೋಪಿಸಿದ್ದರು. ಆ ಬಳಿಕ ಸರ್ಕಾರದ ಆದೇಶದಂತೆ ತನಿಖೆ ನಡೆಸಿ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರ ನೇತೃತ್ವದ ಸಮಿತಿಯು 2017ರ ಅಕ್ಟೋಬರ್ 21ರಂದು ನೀಡಿದ ವರದಿಯನ್ನು ರಾಜ್ಯ ಸರ್ಕಾರ 2018 ರ ಫೆಬ್ರವರಿ 26ರಂದು ಒಪ್ಪಿಕೊಂಡಿದೆ. ಈ ವರದಿಯಲ್ಲಿ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ದಾಖಲಿಸಿರುವ ಪ್ರಕರಣಕ್ಕೆ ಪೂರಕವಾದ ಯಾವುದೇ ಅಂಶ ಪತ್ತೆಯಾಗಿಲ್ಲ. ಹಿರಿಯ ಐಪಿಎಸ್ ಅಧಿಕಾರಿಗಳಾದ ಸತ್ಯನಾರಾಯಣ ರಾವ್ ಮತ್ತು ಡಿ.ರೂಪಾ ಮೌದ್ಗಿಲ್ ನಡುವಿನ ಪ್ರತಿಷ್ಠೆಗಾಗಿ ನಮ್ಮನ್ನು ಕಾನೂನು ಹೋರಾಟದಲ್ಲಿ ಸಿಲುಕಿಸಲಾಗಿದ್ದು, ತಾವು ಮುಗ್ಧರಾಗಿದ್ದೇವೆ‘‘ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಸರ್ಕಾರಿ ಅಧಿಕಾರಿಗಳಾದ ಕೃಷ್ಣ ಕುಮಾರ್, ಬಿ ಸುರೇಶ್ ಮತ್ತು ಗಜರಾಜ ಮಾಕನೂರು ವಿರುದ್ಧ ಪ್ರಕರಣವನ್ನು ಈಗಾಗಲೇ ಹೈಕೋರ್ಟ್ ವಜಾ ಮಾಡಿದೆ. ಹೀಗಾಗಿ, ತಮ್ಮ ವಿರುದ್ಧ ಕಾನೂನು ಬಾಹಿರವಾಗಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಇರುವ ಪ್ರಕರಣವನ್ನು ವಜಾ ಮಾಡುವಂತೆ ಕೋರಲಾಗಿದೆ. ಈ ನಡುವೆ ಎರಡನೇ ಆರೋಪಿಯಾಗಿರುವ ಡಾ. ಆರ್ ಅನಿತಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.

ಪ್ರಕರಣದ ಹಿನ್ನೆಲೆ: 2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತು ಶಶಿಕಲಾ ಸೇರಿದಂತೆ ನಾಲ್ವರು ದೋಷಿಗಳು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ, ಶಶಿಕಲಾ ಅವರು 2017ರ ಫೆಬ್ರವರಿ 15ರಂದು ಪೊಲೀಸರಿಗೆ ಶರಣಾಗಿ, 2020ರ ಜನವರಿ 21ರ ವರೆಗೆ ಜೈಲು ಶಿಕ್ಷೆ ಪೂರೈಸಿದ್ದರು.

ಈ ಸಂದರ್ಭದಲ್ಲಿ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಅಪರಾಧಿಯಾಗಿರುವ ಶಶಿಕಲಾ ಮತ್ತು ಇತರರಿಗೆ ಅಧಿಕಾರಿಗಳ ನೆರವಿನಿಂದ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಲ್ಲಿ ಬಂಧಿಖಾನೆ ಡಿಜಿಪಿ ಸತ್ಯನಾರಾಯಣ ರಾವ್ ಅವರ ಪಾತ್ರವಿದೆ ಎಂದು ಅಂದಿನ ಡಿಐಜಿಯಾಗಿದ್ದ ಡಿ. ರೂಪಾ ಆರೋಪಿಸಿದ್ದರು. ಈ ಹಿನ್ನೆಲೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರ ನೇತೃತ್ವದ ಸಮಿತಿಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಇದಾದ ಬಳಿಕ ಅರ್ಜಿದಾರರು ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಆರೋಪ, ಮುಖ್ಯಅಧೀಕ್ಷಕ ಕೃಷ್ಣಕುಮಾರ್ ವಿರುದ್ಧ ಇದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Last Updated :Jun 13, 2023, 9:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.