ETV Bharat / headlines

PUCಯಲ್ಲಿ ಕಡಿಮೆ ಅಂಕ ಪಡೆದ ಚಿಂತೆಯೇ? ಈ ವೃತ್ತಿಪರ ಕೋರ್ಸ್​ ಆಯ್ದುಕೊಳ್ಳಿ; ಕೈತುಂಬ ಸಂಬಳ!

author img

By

Published : Jun 20, 2023, 5:12 PM IST

ವೈದ್ಯಕೀಯ- ಇಂಜಿನಿಯರಿಂಗ್​​​ ಹೊರತಾಗಿಯೂ ಅನೇಕ ಕೋರ್ಸ್​​ಗಳು ಕೈತುಂಬ ಸಂಬಳ ನೀಡುವ ಉದ್ಯೋಗ ಒದಗಿಸುತ್ತವೆ. ಆಯ್ಕೆ ಸೂಕ್ತವಾಗಿರಬೇಕು ಅಷ್ಟೇ.

Don't worry if you score low in PUC, choose this professional course
Don't worry if you score low in PUC, choose this professional course

ಇಂದು ದ್ವಿತೀಯ ಪಿಯು ಪೂರಕ ಫಲಿತಾಂಶ ಪ್ರಕಟಗೊಂಡಿದೆ. ಪಿಯುಸಿ ಬಳಿಕ ಅನೇಕರನ್ನು ಕಾಡುವ ಪ್ರಶ್ನೆ ಮುಂದೇನು? ಎಂಬುದು. ಪೂರಕ ಫಲಿತಾಂಶದ ಬಳಿಕ ತಮಗೆ ಆಯ್ಕೆಗಳು ಸೀಮಿತ ಎಂಬ ಕಲ್ಪನೆ ಹಲವರದ್ದು. ಆದರೆ, ವೃತ್ತಿಪರ ಕೋರ್ಸ್​​ಗಳ ಅವಕಾಶ ಯಥೇಚ್ಛವಾಗಿದ್ದು, ಉತ್ತಮ ವೇತನ ಲಭ್ಯವಾಗುವ ಕೋರ್ಸ್​ಗಳ ಲಭ್ಯತೆ ಬಗ್ಗೆ ಅರಿವು ಹೊಂದಿರಬೇಕು. ಅದರಲ್ಲೂ ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾರ್ಪೋರೇಟ್​ ಜಗತ್ತು ಆಳುವ ಅನೇಕ ಹುದ್ದೆಗಳಿಗೆ ಈ ಕೋರ್ಸ್​​ಗಳ ಮೂಲಕ ತಯಾರಿ ನಡೆಸಬಹುದು. ನಿರ್ದಿಷ್ಟ ವೃತ್ತಿಯ ಕುರಿತು ನಿಮಗೆ ಪ್ಯಾಷನ್​ ಇದ್ದಾಗ ಅದಕ್ಕೆ ಸಂಬಂಧಿಸಿದ ಕೋರ್ಸ್​​ಗಳನ್ನು ಪದವಿ ಹಂತದಲ್ಲೇ ಮುಗಿಸಬಹುದು. ಅಂತಹ ಕೆಲವು ಉದ್ಯೋಗ ಸಂಬಂಧಿ ಸಲಹೆಗಳು ಇಲ್ಲಿವೆ.

ಕಮರ್ಷಿಯಲ್​ ಪೈಲಟ್​,​ ಗಗನಸಖಿ​​: ಅನೇಕರಿಗೆ ಹಕ್ಕಿಯಂತೆ ಹಾರುವ ಕನಸಿರುತ್ತದೆ. ಇಂತಹ ಕನಸಿಗೆ ವೇದಿಕೆಯಾಗುತ್ತದೆ ಈ ಕೋರ್ಸ್​.​ ಅನೇಕ ಖಾಸಗಿ ಸಂಸ್ಥೆಗಳು ಕಮರ್ಷಿಯಲ್​ ಪೈಲಟ್​​ ಕೋರ್ಸ್​​ಗಳ ತರಬೇತಿ ನಡೆಸುತ್ತಿವೆ. ಇನ್ನು ಗಗನಸಖಿ ಕೋರ್ಸ್​ಗಳು ಕೂಡ ಸಾಕಷ್ಟು ಬೇಡಿಕೆಯ ಉದ್ಯಮವಾಗಿ ಇಂದು ರೂಪುಗೊಂಡಿದೆ. ಅನೇಕ ವಿಮಾನಯಾನ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿರುವ ತರಬೇತಿ ಸಂಸ್ಥೆಗಳು ಕೂಡ ಇದ್ದು, ಇವುಗಳನ್ನು ಆಯ್ಕೆ ಮಾಡಬಹುದು.

ಪ್ರವಾಸೋದ್ಯಮ ಮತ್ತು ಆತಿಥ್ಯ: ಬಿವೊಕ್​ ಎಂದು ಗುರುತಿಸಿಕೊಂಡಿರುವ ಈ ಕೋರ್ಸ್​ ಕೂಡ ಇಂದು ಸಾಕಷ್ಟು ಮನ್ನಣೆಗಳಿಸಿದೆ. ಪಿಯುಸಿಯಲ್ಲಿ ಶೇ 45ರಿಂದ 50ರಷ್ಟು ಫಲಿತಾಂಶ ಬಂದಿದ್ದರೂ ಈ ಕೋರ್ಸ್​​ಗೆ ಸೇರಬಹುದು. ಅನೇಕ ವಿಶ್ವವಿದ್ಯಾಲಯಗಳು ಈ ಸಂಬಂಧ ಈಗಾಗಲೇ ಅನೇಕ ಕೋರ್ಸ್​​ಗಳನ್ನು ಕಾಲೇಜಿನಲ್ಲಿ ಅಳವಡಿಸಿದೆ. ಹೆಚ್ಚಿನ ವೇತನ ಜೊತೆಗೆ ಸುತ್ತಾಟ, ಜನರೊಂದಿಗೆ ಸಂವಹನ, ಹೊಸ ತಾಣಗಳ ಆವಿಷ್ಕಾರಗಳನ್ನು ಇದರಲ್ಲಿ ಮಾಡಬಹುದು.

ಕಂಟೆಂಟ್​ ಕ್ರಿಯೇಟರ್​: ಇಂದು ಸಾಮಾಜಿಕ ಜಾಲತಾಣ ಜನರನ್ನು ಆಳುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ವಿಡಿಯೋಗಳನ್ನು ರೂಪಿಸುವ ಕೌಶಲ್ಯ ನಿಮಗಿದ್ದರೆ, ಜಾಹೀರಾತು ವಿಭಾಗ ಅಥವಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಬಹುದು. ಪದವಿ ಹಂತದಲ್ಲಿ ಸಮೂಹ ಸಂವಹನ ಕೋರ್ಸ್​​ಗಳನ್ನು ಆಯ್ಕೆ ಮಾಡಬಹುದು.

ಫ್ಯಾಷನ್​ ಡಿಸೈನಿಂಗ್​: ಸದಾ ಹೊಸತನ ಮತ್ತು ನವೀನತೆಯ ಕ್ಷೇತ್ರ ಫ್ಯಾಷನ್​ ಡಿಸೈನ್​ ಆಗಿದೆ. ಈ ಸಂಬಂಧ ಈಗಾಗಲೇ ಅನೇಕ ಡಿಪ್ಲೊಮಾ ಕೋರ್ಸ್​​ಗಳು ಪದವಿ ಹಂತದಲ್ಲಿ ಲಭ್ಯವಿದೆ. ಇದೂ ಕೂಡ ಸಾಕಷ್ಟು ಮನ್ನಣೆ ಮತ್ತು ಬಹುಬೇಡಿಕೆಯ ಕೋರ್ಸ್​​ ಆಗಿದೆ.

ಸಿನಿಮಾಟೋಗ್ರಫಿ: ಮನೋರಂಜನೆ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದ್ದರೆ ಸಿನಿಮಾಟೋಗ್ರಾಫಿ ಅತ್ಯುತ್ತಮ ಆಯ್ಕೆ. ಸಿನಿಮಾ​​ ಕ್ಷೇತ್ರದ ಜೊತೆಗೆ ಜಾಹೀರಾತು ಸೇರಿದಂತೆ ಹಲವು ಮಾದರಿಯ ವಿಡಿಯೋ ಮತ್ತು ಫೋಟೋಗ್ರಾಫಿ ಕಲಿಕೆ ಇದರಿಂದ ಸಾಧ್ಯ. ಈ ಸಂಬಂಧ ಫಿಲ್ಮ್​ ಅಂಡ್​ ಟೆಲಿವಿಷನ್​ ಇನ್ಸ್​ಟಿಟ್ಯೂಟ್​ ಪುಣೆ ಸೇರಿದಂತೆ ಹಲವು ಕಾಲೇಜಿನಲ್ಲಿ ಪದವಿ ಕೋರ್ಸ್​​ಗಳು ಲಭ್ಯವಿದೆ. ಅದರಲ್ಲೂ ಈಗಂತೂ ಫೋಟೋಗ್ರಾಫಿ ಕ್ಷೇತ್ರ ಸಾಕಷ್ಟು ಬೇಡಿಕೆ ಪಡೆಯುತ್ತಿದೆ.

ಪತ್ರಿಕೋದ್ಯಮ: ಇಂದು ಸುದ್ದಿ ಮಾಧ್ಯಮಗಳತ್ತ ಅನೇಕರು ಆಕರ್ಷಿತರಾಗುತ್ತಿದ್ದಾರೆ. ಕೇವಲ ಪತ್ರಿಕೆ, ಟಿವಿ ಹೊರತಾಗಿ ಅನೇಕ ಡಿಜಿಟಲ್​ ತಾಣಗಳಿದ್ದು, ಇದರಲ್ಲಿ ಕೂಡ ವೃತ್ತಿಯನ್ನು ಆರಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಇಂದು ಬಹುತೇಕ ಕಾಲೇಜುಗಳಲ್ಲಿ ಪದವಿ ಹಂತದಲ್ಲಿಯೇ ಕೋರ್ಸ್​​ಗಳಿವೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.