ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಆಕ್ಷನ್ ಅವತಾರದ ಬ್ಲಾಕ್ ಬಸ್ಟರ್ ಚಿತ್ರ ಪಠಾಣ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. 21 ದಿನಗಳಲ್ಲಿ ಚಿತ್ರ ವಿಶ್ವದಾದ್ಯಂತ 963 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 600 ಕೋಟಿ, ವಿದೇಶಗಳಲ್ಲಿ 363 ಕೋಟಿ ರೂಪಾಯಿ ಗಳಿಸಿದ್ದು, 1,000 ಕೋಟಿ ರೂಪಾಯಿ ಗಡಿಯಲ್ಲಿದೆ.
ಇನ್ನೂ ಥಿಯೇಟರ್ಗಳಲ್ಲಿ 'ಪಠಾಣ್' ಸಿನಿಮಾ ನೋಡದ ಶಾರುಖ್ ಖಾನ್ ಅಭಿಮಾನಿಗಳಿಗೆ ಮತ್ತು ಈ ಚಿತ್ರವನ್ನು ಥಿಯೇಟರ್ನಲ್ಲೇ ನೋಡಬೇಕೆಂದು ಬಯಸುವ ಸಿನಿ ಪ್ರಿಯರಿಗೆ ಚಿತ್ರತಂಡ ಗುಡ್ ಕೊಟ್ಟಿದೆ. ಚಿತ್ರದ ಟಿಕೆಟ್ ದರವನ್ನು ಇಳಿಕೆ ಮಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ ಚಿತ್ರದ ನಿರ್ಮಾಪಕರು.
ಪಠಾಣ್ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರೊಂದಿಗೆ ಒಳ್ಳೆಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಯಶ್ ರಾಜ್ ಬ್ಯಾನರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್, ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಪಠಾಣ್ ಡೇ ಇನ್ಕಮಿಂಗ್, ಪಠಾಣ್ ರಾಷ್ಟ್ರೀಯ ಬಾಕ್ಸ್ ಆಫೀಸ್ನಲ್ಲಿ ರೂ 500 ಕೋಟಿ ರೂ. ದಾಟಿದೆ. PVR, INOX ಸೇರಿದಂತೆ ಇತರೆ ಎಲ್ಲಾ ಚಿತ್ರಮಂದಿರಗಳಲ್ಲಿ ಕೇವಲ 110 ರೂಪಾಯಿಗೆ ಪಠಾಣ್ ಟಿಕೆಟ್ಗಳನ್ನು ಖರೀದಿಸುವ ಮೂಲಕ ಈ ಶುಕ್ರವಾರವನ್ನು ಆಚರಿಸೋಣ' ಎಂದು ಬರೆದಿದೆ.
ಬಾಲಿವುಡ್ ಬಹುಬೇಡಿಕೆ ನಟರಾದ ಶಾರುಖ್ ಖಾನ್, ದೀಪಿಕಾ ಪಡಿಕೋಣೆ, ಜಾನ್ ಅಬ್ರಹಾಂ ನಟನೆಯ ಪಠಾಣ್ ಚಿತ್ರ ಜನವರಿ 25 ರಂದು ತೆರೆ ಕಂಡಿತು. ಭಾರತದಲ್ಲಿ 600 ಕೋಟಿ, ವಿದೇಶಗಳಲ್ಲಿ 363 ಕೋಟಿ ರೂಪಾಯಿ ಸೇರಿ 21 ದಿನಗಳಲ್ಲಿ ಪಠಾಣ್ ವಿಶ್ವದಾದ್ಯಂತ 963 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿವಾದಗಳ ನಡುವೆ ತೆರೆಕಂಡ ಸಿನಿಮಾ ಗಳಿಕೆಯಲ್ಲಿ ದಾಖಲೆಗಳನ್ನು ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಗೂ ಮುನ್ನ ಬೇಶರಂ ರಂಗ್ ಹಾಡಿನ ವಿಚಾರವಾಗಿ ಸಾಕಷ್ಟು ಟೀಕೆಗೊಳಗಾಗಿತ್ತು. ಆದ್ರೆ ಚಿತ್ರ ಕಂಡ ಯಶಸ್ಸು ಮಾತ್ರ ಅಭೂತ ಪೂರ್ವ.