ಕರ್ನಾಟಕ

karnataka

ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಡಿಕೆಶಿಗೆ ಕೋರ್ಟ್ ಕುರಿತು ಅರ್ಥವಾಗಿದೆ: ಕೆ.ಎಸ್‌.ಈಶ್ವರಪ್ಪ

By

Published : Jan 13, 2022, 7:14 PM IST

Updated : Jan 13, 2022, 8:25 PM IST

minister ks eshwarappa criticize against dk shivakumar

ಜೈಲಿಗೆ ಹೋಗಿ ಬಂದ ಮೇಲೆ ಕೋರ್ಟ್ ಎಂದರೇನು ಅಂತ ಡಿಕೆಶಿ ಅವರಿಗೆ ಅರ್ಥ ಆಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗ: ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಕೋರ್ಟ್ ಎಂದರೇನು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅರ್ಥ ಆಗಿದೆ. ಹಾಗಾಗಿಯೇ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರಾಣ ಹೋದರೂ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದೀರಿ, ಈಗ್ಯಾಕೆ ಪಾದಯಾತ್ರೆ ನಿಲ್ಲಿಸಿದ್ರಿ?, ನಿಮ್ಮ ಪ್ರಾಣ ಹೋಯಿತೇ? ಎಂದರು.

'ಸಿದ್ದರಾಮಯ್ಯ ಮೊದಲ ದಿನ ಪಾದಯಾತ್ರೆಗೆ ಬಂದು ಹೋದರು. ಡಿ.ಕೆ.ಶಿವಕುಮಾರ್ ಒಬ್ಬರೇ ಹೀರೋ ರೀತಿಯಲ್ಲಿ ಪಾದಯಾತ್ರೆ ಮುಂದುವರಿಸಿದರು. ಸಿದ್ದರಾಮಯ್ಯ, ಡಿಕೆಶಿ ನಡುವೆ ಮುಖ್ಯಮಂತ್ರಿಯಾಗುವ ಸ್ಪರ್ಧೆ ಇದೆ. ಹಾಗಾಗಿಯೇ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿದ್ದರಾಮಯ್ಯನವರು ಆರೋಗ್ಯ ಸರಿ ಇಲ್ಲದಿದ್ದರೂ ಪಾದಯಾತ್ರೆಗೆ ಬಂದರು. ಆದ್ರೆ ಬರೆದಿಟ್ಟುಕೊಳ್ಳಿ, ಆಣೆ ಮಾಡಿ ಹೇಳುತ್ತೇನೆ, ಕರ್ನಾಟಕದಲ್ಲಿ ನಿಮ್ಮ ಸರ್ಕಾರ ಬರುವುದಿಲ್ಲ. ನೀವುಗಳ್ಯಾರೂ ಮುಖ್ಯಮಂತ್ರಿಯಾಗೋದಿಲ್ಲ. ಬಿಜೆಪಿಯವರೇ ಮುಖ್ಯಮಂತ್ರಿಯಾಗುತ್ತಾರೆ' ಎಂದು ಅವರು ಹೇಳಿದರು.

ಸಚಿವ ಕೆ.ಎಸ್. ಈಶ್ವರಪ್ಪ

'ಕೋವಿಡ್​ ನಿಯಂತ್ರಣಕ್ಕೆ ಸಹಕಾರ ನೀಡಲಿಲ್ಲ'

ಕೊರೊನಾ ನಿಯಂತ್ರಣದಲ್ಲಿ ವಿರೋಧ ಪಕ್ಷವಾಗಿ ಸಹಕಾರ ನೀಡದೇ ಈ ಪಾದಯಾತ್ರೆ ನಡೆಸಿ ಜನರನ್ನು ಹಾಳು ಮಾಡಿ, ತಾವೂ ಹಾಳಾಗುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹೈಕೋರ್ಟ್ ಹೇಳದಿದ್ದರೆ ಇವರು ಪಾದಯಾತ್ರೆ ನಿಲ್ಲಿಸುತ್ತಿರಲಿಲ್ಲ ಎಂದರು.

ಮೇಕೆದಾಟು ಯೋಜನೆ ನಮ್ಮ ಬದ್ಧತೆ:

ಮೇಕೆದಾಟು ಯೋಜನೆಯು ಕಾಂಗ್ರೆಸ್​​ನವರಿಗೆ ರಾಜಕೀಯ ಕುತಂತ್ರ, ಆದರೆ ನಮಗದು ಬದ್ಧತೆಯಾಗಿದೆ. ಯೋಜನೆ ಜಾರಿಗೆ ತಂದೇ ತರುತ್ತೇವೆ. ಆ ಭಾಗದ ಜನರಿಗೆ ಕುಡಿಯುವ ನೀರು ಅಗತ್ಯವಾಗಿದ್ದು, ತಮಿಳುನಾಡು ಸರ್ಕಾರ ಅಡ್ಡಬಂದರೂ ನಾವು ಬಿಡುವುದಿಲ್ಲ ಎಂದರು.

ಕೊರೊನಾ ನಿಯಂತ್ರಣಕ್ಕೆ ಕ್ರಮ:

ಕಳೆದ ಬಾರಿ ಕೊರೊನಾ ನಿಯಂತ್ರಣದಲ್ಲಿ ಇಡೀ ಪ್ರಪಂಚದಲ್ಲೇ ಭಾರತ ಮೊದಲ ಸ್ಥಾನದಲ್ಲಿತ್ತು. ಅದರಂತೆ ದೇಶದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಈ ಸಲವೂ ಕೋವಿಡ್​​ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಕೊರೊನಾ ಬರಲಿ ಅಂತ ಅವರು ಪಾದಯಾತ್ರೆ ನಡೆಸಿದರು: ಸಚಿವ ಬಿ.ಸಿ.ಪಾಟೀಲ್ ಆರೋಪ

Last Updated :Jan 13, 2022, 8:25 PM IST

ABOUT THE AUTHOR

...view details