ಕರ್ನಾಟಕ

karnataka

ಹೆಚ್.ಡಿ.ದೇವೇಗೌಡರು ಅವಕಾಶವಾದಿ ರಾಜಕಾರಣ ಮಾಡ್ತಾರೆ: ಆರ್. ಧ್ರುವನಾರಾಯಣ್ ಆರೋಪ

By

Published : Dec 6, 2021, 3:42 PM IST

Updated : Dec 6, 2021, 4:14 PM IST

ಹೆಚ್.ಡಿ. ದೇವೇಗೌಡರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ. ಇದಾಗಬಾರದು. ದೇವೇಗೌಡರು ವಿಸ್ತಾರವಾಗಿ ಬೆಳೆಯಬಹುದಿತ್ತು. ಆದರೆ, ಕುಟುಂಬಕ್ಕೆ ಸೀಮಿತವಾಗಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನು ತೆಗೆದುಕೊಂಡು ಬಂದು ಇಡೀ ಪಕ್ಷ ಕುಟುಂಬದ ಪಕ್ಷವಾಗಿದೆ. ಹಾಗಾಗಿಯೇ ಜೆಡಿಎಸ್​ನ ಮುಖಂಡರು ಕಾಂಗ್ರೆಸ್ ಕಡೆ‌ ಮುಖ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧೃವನಾರಾಯಣ್​ ಹೇಳಿದರು.

r-dhruvanarayan
ಧ್ರುವನಾರಾಯಣ್

ಮೈಸೂರು: ಹೆಚ್. ಡಿ. ದೇವೇಗೌಡರ ಬಗ್ಗೆ ಗೌರವ ಇದೆ. ಕಾಂಗ್ರೆಸ್ ಪಕ್ಷ ಎಂದಿಗೂ ಅವರನ್ನು ಬೆಂಬಲಿಸಿದೆ.‌ ಅವರನ್ನು ಶಕ್ತಿಹೀನ ಮಾಡಲು ಹೊರಟಿಲ್ಲ. ಆದರೆ, ಅವರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಗಂಭೀರವಾಗಿ ಆರೋಪಿಸಿದರು.

ಇಂದು ಪುರಭವನದ ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ. ಇದಾಗಬಾರದು. ದೇವೇಗೌಡರು ವಿಸ್ತಾರವಾಗಿ ಬೆಳೆಯಬಹುದಿತ್ತು. ಆದರೆ, ಕುಟುಂಬಕ್ಕೆ ಸೀಮಿತವಾಗಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನು ತೆಗೆದುಕೊಂಡು ಬಂದು ಇಡೀ ಪಕ್ಷ ಕುಟುಂಬದ ಪಕ್ಷವನ್ನಾಗಿಸಿದ್ದಾರೆ. ಹಾಗಾಗಿಯೇ ಜೆಡಿಎಸ್​ನ ಮುಖಂಡರು ಕಾಂಗ್ರೆಸ್ ಕಡೆ‌ ಮುಖ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಹೆಚ್.ಡಿ.ದೇವೇಗೌಡರ ಕುರಿತು ಆರ್. ಧ್ರುವನಾರಾಯಣ್ ಆರೋಪ

ಕುಟುಂಬ ರಾಜಕೀಯ ಕಾನೂನು: ಒಂದು ಕುಟುಂಬದ ಇಷ್ಟು ಮಂದಿ ಮಾತ್ರ ರಾಜಕಾರಣದಲ್ಲಿರಬೇಕೆಂದು ಕಾನೂನು ಮಾಡಲಿ ಎಂಬ ಹೆಚ್ ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಮಾಡಲಿ ಎಂದು ನಾನು ಹೇಳುವುದಿಲ್ಲ. ಜೆಡಿಎಸ್​ ಕುಟುಂಬದ ಬೆಳವಣಿಗೆ ಬದಲು ಎಲ್ಲರಿಗೂ ಅವಕಾಶ ಕೊಡಬಹುದಿತ್ತು. ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ನೀಡಿದ್ದೇವೆ. ಹಾಸನದಲ್ಲಿ ಮುಸ್ಲಿಂ ಗೆಲ್ಲಲು ಅವಕಾಶ ಇದ್ದಾಗ ಜೆಡಿಎಸ್ ನಿಂದ ಯಾಕೆ ಅವಕಾಶ ಕೊಡಬಾರದು. ಹಾನಗಲ್ ಸಿಂಧಗಿಯಲ್ಲಿ ಮುಸ್ಲಿಂ ಮತ ಡಿವೈಡ್ ಆಗಲಿ. ಕಾಂಗ್ರೆಸ್​ಗೆ ಸೋಲಾಗಲಿ ಎಂದು ಅವಕಾಶ ನೀಡಿದರು.‌ ಗೆಲ್ಲುವ ಕಡೆ ಅವಕಾಶ ಕೊಡಲ್ಲ. ಇದನ್ನೇ ಅವಕಾಶವಾದಿ ರಾಜಕಾರಣ ಎಂದು ಹೇಳಿದರು.

ಎನ್. ಮಹೇಶ್ ಸಿದ್ದಾಂತ ಬಿಟ್ಟು ಬಿಜೆಪಿಗೆ ಸೇರ್ಪಡೆ :ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರನ್ನು ಅವಕಾಶವಾದಿ ಎಂದು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನೂರಕ್ಕೆ ನೂರರಷ್ಟು ಹೌದು. ಬಿಎಸ್​​​ಪಿಯಿಂದ‌ ಉಚ್ಛಾಟನೆ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ.‌ ಅವರು ನೀ‌ ಎಲ್ಲಿದ್ದಿಯೋ ಅಲ್ಲೇ ಇರು ಅಂದ್ರು, ಅದಕ್ಕೆ ಅನಿವಾರ್ಯವಾಗಿ ಬಿಜೆಪಿ ಸೇರಿದೆ ಎಂದು ಮಹೇಶ್​ ಅವರೇ ಹೇಳಿದ್ದಾರೆ. ಸಿದ್ದಾಂತವನ್ನು ಬಿಟ್ಟು ಬಿಜೆಪಿಗೆ ಸೇರಿದ್ರು ಎಂದು ಟೀಕಿಸಿದರು.

ಕಳೆದ ಬಾರಿಯಂತೆ ಈ ಬಾರಿಯು 14 ಕ್ಷೇತ್ರದಲ್ಲಿ ಗೆಲುವು :ಇತರ ಪಕ್ಷಗಳಿಗಿಂತ‌ ಅತ್ಯಂತ ಹೆಚ್ಚಿನ ಮತದ ಅಂತರದಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮೈಸೂರು- ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಎರಡು ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಜೆಡಿಎಸ್​​​ಗೆ ನೆಲೆಯಿಲ್ಲ. ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ನೆಲೆಯಿಲ್ಲ.

ಒಟ್ಟಾರೆ ಎರಡು ಜಿಲ್ಲೆಯಲ್ಲಿ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಪಂಚಾಯತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಹಾಗಾಗಿ ಗೆಲುವಿಗೆ ಕುಂದಿಲ್ಲ.‌ ಮೊದಲನೇ ಸುತ್ತಿನಲ್ಲಿ ನಾವು ಗೆಲ್ಲುವ ನಿರೀಕ್ಷೆ ಇದೆ. ಕಳೆ ಬಾರಿ 25 ಕ್ಕೆ 14 ಸ್ಥಾನ ಗೆದ್ದಿದ್ದೇವೆ. ಈ ಬಾರಿಯೂ ಅದೇ ನಿರೀಕ್ಷೆ ಇದೆ.

ರಾಜ್ಯಾದ್ಯಂತ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಶ್ರಮ ವಹಿಸಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಜೊತೆಗೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದೇವೆ ಎಂದು ಆರ್. ಧ್ರುವನಾರಾಯಣ್ ತಿಳಿಸಿದರು.

ಕಾಂಗ್ರೆಸ್ ಗೆ ಜಿ.ಟಿ.ದೇವೇಗೌಡರ ಬೆಂಬಲ :ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್​​​ನಿಂದ ಗೆದ್ದಿರುವುದರಿಂದ ಸಮಯ ಸಂದರ್ಭಕ್ಕೆ ತಕ್ಕಂತೆ ಅವರು ನಮ್ಮ ಪಕ್ಷವನ್ನು ಸೇರುತ್ತಾರೆ. ಕಾಂಗ್ರೆಸ್ ಪರವಾಗಿ ಬೆಂಬಲ ಘೋಷಿಸಿದ್ದಾರೆ. ಪ್ರಚಾರಕ್ಕೆ ಬರುವುದಿಲ್ಲ. ಎಂದು ಹೇಳಿದರು.

ಬಿಜೆಪಿ, ಜೆಡಿಎಸ್​​​ಗೆ ಕಾಂಗ್ರೆಸ್ ಎಂದರೆ ಭಯ :ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಜೆಡಿಎಸ್​​​ನವರಿಗೆ ಭಯವಾಗಿದೆ. ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಗೂ ಜೆಡಿಎಸ್ ಶಾಸಕರು ಕಾಂಗ್ರೆಸ್​​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಮುಳುಗುತ್ತಿರುವುದರಿಂದ‌ ಬಿಜೆಪಿ‌ ಸಹಾಯ ಬೇಕೆಂಬುದು ಅನಿವಾರ್ಯವಾಗಿದೆ. ರಾಜ್ಯಾದ್ಯಂತ ಇರುವ ಕಾಂಗ್ರೆಸ್ ಪಕ್ಷದ ಅಲೆಗೆ ಭಯಪಟ್ಟು ಬಿಜೆಪಿ ಜೆಡಿಎಸ್ ಬೆಂಬಲ ಕೋರಿದೆ. ಜೆಡಿಎಸ್ ಮತ್ತು ಬಿಜೆಪಿಗೆ ಕಾಂಗ್ರೆಸ್ ಎಂದರೆ ಭಯ ಎಂದು ಹೇಳಿದರು.

ಬಿಜೆಪಿಗೆ ಹೇಳಿ ಆರ್​ಎಸ್ಎಸ್​ ಟೀಕೆ ಮಾಡಿದ್ರು: ಕುಮಾರಸ್ವಾಮಿ ಅವರು ಉಪ ಚುನಾವಣೆಯಲ್ಲಿ ಆರ್​ಎಸ್​ಎಸ್ ಬಗ್ಗೆ ಭಾರಿ ಟೀಕೆ ಮಾಡಿದ್ದರು.‌ ಅದು ಕೂಡ ಒಳ ಒಪ್ಪಂದ. ನಾನು ಟೀಕೆ ಮಾಡುತ್ತೇನೆಂದು ಹೇಳಿಯೇ ಮಾಡಿದ್ದಾರೆ. ಯಾಕೆಂದರೆ ಸಿಂಧಗಿ ಹಾಗೂ ಹಾನಗಲ್​​​​ನಲ್ಲಿ ಮುಸಲ್ಮಾನರ ಮತ‌ಬೇಕಿತ್ತು. ಆದರೆ, ಮುಸಲ್ಮಾನ ಬಾಂಧವರು ಬುದ್ದಿವಂತರಿದ್ದಾರೆ.

ಒಂದು ಸಾವಿರ ಮತ ಕೂಡ ಹಾನಗಲ್ ನಲ್ಲಿ ತೆಗೆದುಕೊಳ್ಳಲಾಗಲಿಲ್ಲ.‌ ಸಿಂಧಗಿಯಲ್ಲಿ ಹೆಚ್.ಡಿ ದೇವೇಗೌಡರು ಅವರೇ ಒಂದು ವಾರ ಉಪಸ್ಥಿತರಿದ್ದರು. ‌ಆದರೆ ಠೇವಣಿ ಕಳೆದುಕೊಂಡರು.‌ ಹಾಗಾಗಿ ಅವರಿಗೆ ನೆಲೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ‌ಆರ್.ಧ್ರುವನಾರಾಯಣ್ ವಿಶ್ಲೇಷಿಸಿದರು.

Last Updated :Dec 6, 2021, 4:14 PM IST

ABOUT THE AUTHOR

...view details