ಕರ್ನಾಟಕ

karnataka

ಐಟಿ ದಾಳಿ ಪ್ರಕರಣ: ಸಿಬಿಐ ಪ್ರತಿವಾದಿಯಾಗಿಸಲು ಕೋರಿ ಹೈಕೋರ್ಟ್​ಗೆ ಡಿಕೆಶಿ ಅರ್ಜಿ

By

Published : Jul 24, 2021, 1:11 AM IST

ಡಿಕೆಶಿ ನಿವಾಸಗಳ ಮೇಲಿನ ಮೇಲಿನ ಐಟಿ ದಾಳಿ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಇದೀಗ ಅರ್ಜಿಯಲ್ಲಿ ಸಿಬಿಐಯನ್ನೂ ಪ್ರತಿವಾದಿಯಾಗಿಸಲು ಡಿಕೆಶಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ

IT Raid Case
IT Raid Case

ಬೆಂಗಳೂರು: ತಮ್ಮ ಬೆಂಗಳೂರು ಹಾಗೂ ದೆಹಲಿ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಪೂರ್ವಾನುಮತಿ ನೀಡಿದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐಯನ್ನು ಕೂಡ ಪ್ರತಿವಾದಿಯಾಗಿ ಸೇರಿಸಲು ಅನುಮತಿ ನೀಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಡಿಕೆಶಿ ನಿವಾಸಗಳ ಮೇಲಿನ ಮೇಲಿನ ಐಟಿ ದಾಳಿ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಇದೀಗ ಅರ್ಜಿಯಲ್ಲಿ ಸಿಬಿಐಯನ್ನೂ ಪ್ರತಿವಾದಿಯಾಗಿಸಲು ಡಿಕೆಶಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಇಂದು ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದಿಸಿ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸಿಬಿಐಗೆ ಈಗಾಗಲೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಸಿಬಿಐ ನೋಟಿಸ್ ಜಾರಿ ಮಾಡಿ ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ಹೀಗಾಗಿ ಅರ್ಜಿದಾರರ ವಿರುದ್ಧ ನೋಟಿಸ್ ಜಾರಿ ಮಾಡದಂತೆ ಸಿಬಿಐಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ತಕರಾರು ಅರ್ಜಿಯಲ್ಲಿ ಸಿಬಿಐ ಪ್ರತಿವಾದಿಯಲ್ಲ. ಇದೀಗ ಪ್ರತಿವಾದಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಈ ಅಂಶವನ್ನು ಪರಿಗಣಿಸಬೇಕು. ಅರ್ಜಿ ಸಂಬಂಧ ಯಾವುದೇ ಆದೇಶ ಹೊರಡಿಸುವ ಮುನ್ನ ಸಿಬಿಐ ವಾದ ಆಲಿಸಿದ ನಂತರವೇ ಆದೇಶ ಹೊರಡಿಸಬೇಕೆಂದು ಕೋರಿದರು.

ಅಲ್ಲದೆ, ಹೈಕೋರ್ಟ್ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ಹೊರಡಿಸಿದೆಯೇ ವಿನಃ ವಿಚಾರಣೆ ನಡೆಸಬಾರದು ಎಂದು ಹೇಳಿಲ್ಲ. ಬಲವಂತದ ಕ್ರಮ ಕೈಗೊಳ್ಳುತ್ತಿಲ್ಲ. ಬಂಧಿಸಲೂ ಮುಂದಾಗಿಲ್ಲ. ಹಾಗಿದ್ದೂ ಅರ್ಜಿದಾರರ ಮನವಿ ಮೇರೆಗೆ ನೋಟಿಸ್ ನೀಡದಂತೆ ಸಿಬಿಐಗೆ ಸೂಚಿಸಿದರೆ, ತನಿಖೆಯನ್ನೇ ತಡೆಹಿಡಿದಂತೆ ಆಗಲಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಕೋರ್ಟ್​ಗಳು ತಡೆಯಾಜ್ಞೆ ನೀಡುವುದಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 19ರಲ್ಲಿ ನಿರ್ಬಂಧವಿದೆ. ಹೀಗಾಗಿ, ಅರ್ಜಿದಾರರ ಮನವಿ ಪರಿಗಣಿಸಬಾರದು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2017ರ ಆಗಸ್ಟ್​​ನಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರು ಮತ್ತು ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಹಣ ಹಾಗೂ ದಾಖಲೆ ವಶಪಡಿಸಿಕೊಂಡಿದ್ದರು. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸರ್ಕಾರ 2019ರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ 2020ರ ಸೆಪ್ಟೆಂಬರ್​​ನಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಡಿಕೆಶಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ನೀಡಿತ್ತು.

ABOUT THE AUTHOR

...view details