ಕರ್ನಾಟಕ

karnataka

ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ; ನೆರೆಯ ದೇಶಗಳಲ್ಲಿ ಭಾರಿ ಏರಿಕೆ

By ETV Bharat Karnataka Team

Published : Dec 20, 2023, 4:32 PM IST

ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

petrol-diesel-prices-cut-in-india-huge-rise-in-neighbouring-countries
petrol-diesel-prices-cut-in-india-huge-rise-in-neighbouring-countries

ನವದೆಹಲಿ:ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಕಡಿಮೆಯಾಗಿದ್ದರೆ, ನೆರೆಯ ಮತ್ತು ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲಿ ಅವುಗಳ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಭಾರತದಲ್ಲಿ ಪೆಟ್ರೋಲ್ ಬೆಲೆ ಶೇಕಡಾ 11.82 ರಷ್ಟು ಮತ್ತು ಡೀಸೆಲ್ ಬೆಲೆ ಶೇಕಡಾ 8.94 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಗ್ರಾಫ್ ತೋರಿಸಿದೆ. ಮತ್ತೊಂದೆಡೆ, ಪೆಟ್ರೋಲ್ ಬೆಲೆ ನೆರೆಯ ಶ್ರೀಲಂಕಾದಲ್ಲಿ ಶೇಕಡಾ 54.32ರಷ್ಟು ಮತ್ತು ಪಾಕಿಸ್ತಾನದಲ್ಲಿ ಶೇಕಡಾ 41.24ರಷ್ಟು ಏರಿಕೆಯಾಗಿದೆ. ಯುಎಸ್, ಕೆನಡಾ ಮತ್ತು ಯುಕೆಯಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ ಶೇಕಡಾ 9.32, ಶೇಕಡಾ 7.3 ಮತ್ತು ಶೇಕಡಾ 11.36ರಷ್ಟು ಹೆಚ್ಚಾಗಿದೆ.

"ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಸವಾಲನ್ನು ಎದುರಿಸುತ್ತಿರುವ ಮೋದಿ ಸರ್ಕಾರ ನಾಗರಿಕರನ್ನು ಆರ್ಥಿಕ ಹೊರೆಯಿಂದ ಪಾರು ಮಾಡಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ಕಾರ್ಯತಂತ್ರ ಮತ್ತು ನೀತಿ ಉಪಕ್ರಮಗಳ ಮೂಲಕ ಸರ್ಕಾರವು ಇಂಧನ ಬೆಲೆಗಳನ್ನು ಸ್ಥಿರಗೊಳಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಗ್ರಾಹಕರ ಮೇಲೆ ಕನಿಷ್ಠ ಹೊರೆಯಾಗುವಂತೆ ನೋಡಿಕೊಳ್ಳುತ್ತಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷದ ನವೆಂಬರ್​ನಲ್ಲಿ ಭಾರತದ ಕಚ್ಚಾ ತೈಲ ಆಮದಿನ ಸರಾಸರಿ ಬೆಲೆ ಬ್ಯಾರೆಲ್​ಗೆ 92.41 ಡಾಲರ್ ಆಗಿತ್ತು. ಇದು ಈಗ ಡಿಸೆಂಬರ್​ನಲ್ಲಿ ಬ್ಯಾರೆಲ್​ಗೆ 86.58 ಡಾಲರ್​ಗೆ ಇಳಿದಿದೆ.

ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ಹೊರತಾಗಿಯೂ ಭಾರತವು ರಷ್ಯಾದಿಂದ ತೈಲ ಆಮದನ್ನು ಹೆಚ್ಚಿಸಿದೆ. ಸೌದಿ ಅರೇಬಿಯಾವನ್ನು ಹಿಂದಿಕ್ಕಿ ರಷ್ಯಾ ಈಗ ಭಾರತಕ್ಕೆ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶವಾಗಿದೆ. ಇದಲ್ಲದೆ, ಲ್ಯಾಟಿನ್ ಅಮೆರಿಕಾದ ದೇಶದ ಮೇಲಿನ ನಿರ್ಬಂಧಗಳನ್ನು ಯುಎಸ್ ತೆಗೆದುಹಾಕಿದ ನಂತರ, ಭಾರತೀಯ ತೈಲ ಕಂಪನಿಗಳು ವೆನೆಜುವೆಲಾದಿಂದ ಕೂಡ ಕಚ್ಚಾ ತೈಲ ತರಿಸಿಕೊಳ್ಳಲು ಆರಂಭಿಸಿವೆ.

ಯುಎಸ್ ನಿರ್ಬಂಧಗಳಿಗೆ ಮೊದಲು ರಿಲಯನ್ಸ್ ಇಂಡಸ್ಟ್ರೀಸ್​ನಂಥ ಭಾರತೀಯ ಕಂಪನಿಗಳು ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಆಮದು ಮಾಡಿಕೊಳ್ಳುತ್ತಿದ್ದವು. ನಿರ್ಬಂಧಕ್ಕೆ ಮೊದಲು ಭಾರತವು ಪ್ರತಿ ತಿಂಗಳು ವೆನೆಜುವೆಲಾದಿಂದ ಸುಮಾರು 10 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸುತ್ತಿತ್ತು.

ಇದನ್ನೂ ಓದಿ: ಶೇ 90ರಷ್ಟು ಕ್ರಿಪ್ಟೊ ವಹಿವಾಟು ಕಳೆದುಕೊಂಡ WazirX; 1 ಬಿಲಿಯನ್ ಡಾಲರ್​ಗೆ ಕುಸಿತ

ABOUT THE AUTHOR

...view details