ETV Bharat / business

ಶೇ 90ರಷ್ಟು ಕ್ರಿಪ್ಟೊ ವಹಿವಾಟು ಕಳೆದುಕೊಂಡ WazirX; 1 ಬಿಲಿಯನ್ ಡಾಲರ್​ಗೆ ಕುಸಿತ

author img

By ETV Bharat Karnataka Team

Published : Dec 20, 2023, 3:38 PM IST

ಭಾರತೀಯ ಕ್ರಿಪ್ಟೊ ಪ್ಲಾಟ್​ಫಾರ್ಮ್ ವಜೀರ್​ ಎಕ್ಸ್​ನಲ್ಲಿನ ವಹಿವಾಟು ತೀವ್ರವಾಗಿ ಕುಸಿದಿದೆ.

Crypto trading volume on WazirX drops 90% to $1 bn amid regulatory pressure
Crypto trading volume on WazirX drops 90% to $1 bn amid regulatory pressure

ನವದೆಹಲಿ: ಭಾರತೀಯ ಕ್ರಿಪ್ಟೋ ಕರೆನ್ಸಿ ಎಕ್ಸ್​ಚೇಂಜ್ ವಜೀರ್ ಎಕ್ಸ್​ನಲ್ಲಿನ ವಹಿವಾಟು 2023ರಲ್ಲಿ 1 ಬಿಲಿಯನ್ ಡಾಲರ್​ಗೆ ಇಳಿಕೆಯಾಗಿದೆ. 2022ಕ್ಕೆ ಹೋಲಿಸಿದರೆ ವಜೀರ್ ಎಕ್ಸ್‌ನಲ್ಲಿನ ವಹಿವಾಟು ಶೇಕಡಾ 90ರಷ್ಟು ಭಾರಿ ಕುಸಿತವಾಗಿದೆ. ಹೊಸ ನಿಯಮಗಳನ್ನು ಪಾಲಿಸುವಂತೆ ಸರ್ಕಾರದ ನಿರ್ದೇಶನ ಮತ್ತು ಕ್ರಿಪ್ಟೋ ವಹಿವಾಟಿನ ಮೇಲೆ ಭಾರಿ ತೆರಿಗೆ ವಿಧಿಸಿರುವುದು ಇದಕ್ಕೆ ಕಾರಣವಾಗಿದೆ. ಕಳೆದ ವರ್ಷ, ಭಾರತ ಸರ್ಕಾರವು ವರ್ಚುವಲ್ ಕರೆನ್ಸಿಗಳ ಮೇಲೆ ಶೇಕಡಾ 30ರಷ್ಟು ತೆರಿಗೆ ಮತ್ತು ಪ್ರತಿ ಕ್ರಿಪ್ಟೋ ವಹಿವಾಟಿಗೆ ಶೇಕಡಾ 1ರಷ್ಟು ಕಡಿತವನ್ನು ಜಾರಿಗೊಳಿಸಿದೆ.

ಟೆಕ್ ಕ್ರಂಚ್ ವರದಿಯ ಪ್ರಕಾರ, ನಿಶ್ಚಲ್ ಶೆಟ್ಟಿ ನೇತೃತ್ವದ ವಜೀರ್ ಎಕ್ಸ್​ನಲ್ಲಿನ ಕ್ರಿಪ್ಟೋ ವ್ಯಾಪಾರವು 2022ಕ್ಕೆ ಹೋಲಿಸಿದರೆ ಶೇಕಡಾ 90ರಷ್ಟು ಕುಸಿದಿದೆ. 2022ರಲ್ಲಿ ವಜೀರ್ ಎಕ್ಸ್​ನಲ್ಲಿ 10 ಬಿಲಿಯನ್ ಡಾಲರ್ ಮತ್ತು 2021ರಲ್ಲಿ 43 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವ್ಯಾಪಾರ ವಹಿವಾಟು ನಡೆದಿತ್ತು.

ಕಳೆದ ವರ್ಷ, ಜಾರಿ ನಿರ್ದೇಶನಾಲಯ (ಇಡಿ) ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳ ಅಡಿಯಲ್ಲಿ ಹಲವಾರು ಪ್ರಕರಣಗಳ ಬಗ್ಗೆ ತನಿಖೆ ನಡೆಸಿತ್ತು. 16 ಭಾರತೀಯ ಫಿನ್​ಟೆಕ್ ಸಂಸ್ಥೆಗಳು ಮತ್ತು ಲೋನ್ ಆ್ಯಪ್​ಗಳ ಅನಾಮಧೇಯ ವಿದೇಶಿ ವ್ಯಾಲೆಟ್​ಗಳಿಗೆ ವಜೀರ್​ ಎಕ್ಸ್​ ಅಕ್ರಮವಾಗಿ ಹಣ ವರ್ಗಾಯಿಸಿತ್ತು ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ 64.67 ಕೋಟಿ ರೂಪಾಯಿ ಮೊತ್ತದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ತನಿಖೆಯ ನಂತರ ವಜೀರ್​ ಎಕ್ಸ್​ ಬ್ಯಾಂಕ್​ ಖಾತೆಗಳ ಮೇಲಿನ ನಿರ್ಬಂಧವನ್ನು ಇಡಿ ತೆಗೆದು ಹಾಕಿತ್ತು.

"ತನಿಖೆಯ ಸಂದರ್ಭದಲ್ಲಿ ವಜೀರ್ ಎಕ್ಸ್ ನೀಡಿದ ಸಹಕಾರ ಮತ್ತು ಅನುಮಾನಾಸ್ಪದ ಖಾತೆಗಳನ್ನು ನಿರ್ಬಂಧಿಸಲು ಕಾರಣವಾದ ಮನಿ ಲಾಂಡರಿಂಗ್ ಬಗೆಗಿನ ತಪಾಸಣೆಗಳ ನಂತರ ಇಡಿ ನಮ್ಮ ಬ್ಯಾಂಕ್ ಖಾತೆಗಳನ್ನು ಮುಕ್ತಗೊಳಿಸಿದೆ. ವಜೀರ್ ಎಕ್ಸ್​ ಈಗ ಎಂದಿನಂತೆ ತನ್ನ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದೆ" ಎಂದು ಕಂಪನಿ ಹೇಳಿದೆ.

ಈ ವರ್ಷದ ಆರಂಭದಲ್ಲಿ ವಜೀರ್ ಎಕ್ಸ್​ ಮತ್ತೊಂದು ಕ್ರಿಪ್ಟೊ ಕಂಪನಿ ಬಿನಾನ್ಸ್​ನೊಂದಿಗೆ ಜಗಳ ಆರಂಭಿಸಿತ್ತು. ನಂತರ ಬಿನಾನ್ಸ್ ವಜೀರ್ ಎಕ್ಸ್​ಗೆ ವ್ಯಾಲೆಟ್ ಸೇವೆ ಒದಗಿಸುವುದನ್ನು ನಿಲ್ಲಿಸಿತ್ತು ಮತ್ತು ಬಿನಾನ್ಸ್ ವ್ಯಾಲೆಟ್​ಗಳಲ್ಲಿ ಉಳಿದಿರುವ ಎಲ್ಲ ಕ್ರಿಪ್ಟೊಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿತ್ತು.

ಇದನ್ನೂ ಓದಿ: 2023-24ರಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳವಣಿಗೆ; ಐಎಂಎಫ್ ಅಂದಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.