ಕರ್ನಾಟಕ

karnataka

Tomato price: ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ; ಕಂಗಾಲಾದ ಗ್ರಾಹಕರಿಗೆ ಗುಡ್​ ನ್ಯೂಸ್​

By

Published : Jul 2, 2023, 9:28 AM IST

ದೇಶಾದ್ಯಂತ ಟೊಮೆಟೊ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ, ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಆದರೆ ಇದೀಗ ಶುಭ ಸುದ್ದಿಯೊಂದು ಸಿಕ್ಕಿದೆ.

tomato
ಟೊಮೆಟೊ

ಚೆನ್ನೈ: ಕಡಿಮೆ ಇಳುವರಿ ಹಾಗು ಮಳೆಯಿಂದಾಗಿ ಮಾರುಕಟ್ಟೆಗೆ ಕಡಿಮೆ ಆವಕವಾದ ಕಾರಣಕ್ಕೆ ಈ ಬಾರಿ ಟೊಮೆಟೊ ಬೆಲೆ ಮುಗಿಲು ಮುಟ್ಟಿದೆ. ಕಳೆದ ಮೇ ತಿಂಗಳಲ್ಲಿ ಕೆ.ಜಿ ಗೆ 20 ರೂ.ಗೆ ದೊರೆಯುತ್ತಿದ್ದ ತರಕಾರಿ ಇದೀಗ 100 ರೂ.ಗೆ ಜಿಗಿದಿದೆ. ಪರಿಣಾಮ, ಗ್ರಾಹಕರು ಕಂಗಾಲಾಗಿದ್ದಾರೆ. ಇದರ ನಡುವೆ ಜನಸಾಮನ್ಯರಿಗೆ ಶುಭ ಸುದ್ದಿ ಬಂದಿದ್ದು, ಜುಲೈ-ನವೆಂಬರ್ ವೇಳೆಗೆ ಬೆಲೆ ಕಡಿಮೆಯಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಹೇಳಿದೆ.

ಜೂನ್‌ನಲ್ಲಿ ಟೊಮೆಟೊದ ಸರಾಸರಿ ಚಿಲ್ಲರೆ ಬೆಲೆ 38.5 ರಷ್ಟು ಹೆಚ್ಚಾಗಿದೆ. ಸಗಟು ಆಧಾರದ ಮೇಲೆ ನೋಡುವುದಾದರೆ ಇದೇ ಅವಧಿಯಲ್ಲಿ ಶೇ.45.3ರಷ್ಟು ಟೊಮೆಟೊ ಬೆಲೆ ಏರಿಕೆಯಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞ ದೀಪನ್ವಿತಾ ಮಜುಂದಾರ್ ವರದಿಯಲ್ಲಿ ತಿಳಿಸಿದ್ದಾರೆ. 2022- 23ರ ಮೊದಲ ಮುಂಗಡ ಅಂದಾಜಿನ ಮಾಹಿತಿ ಪ್ರಕಾರ, ಟೊಮೆಟೊ ಉತ್ಪಾದನೆಯು 2021-22ರಲ್ಲಿ 20,694 ('000 MT- ಮೆಟ್ರಿಕ್​ ಟನ್​)ನಿಂದ 20,621 (‘000 MT) ಕ್ಕೆ 0.4 ರಷ್ಟು ಕಡಿಮೆಯಾಗಿದೆ ಎಂದು ಈ ವರದಿ ಹೇಳುತ್ತದೆ.

"ರಾಜ್ಯವಾರು ಅಂಕಿಅಂಶಗಳನ್ನು ನೋಡುವುದಾದ್ರೆ ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಮತ್ತು ಒಡಿಶಾದ ಒಟ್ಟು ಟೊಮೆಟೊ ಉತ್ಪಾದನೆಯ 51.5 ಪ್ರತಿಶತ ಹೊಂದಿದೆ. ಗುಜರಾತ್‌ನಂತಹ ರಾಜ್ಯಗಳಲ್ಲಿ ಉತ್ಪಾದನೆಯು ಶೇ 23.9ರಷ್ಟು ಕುಸಿದಿದೆ ಮತ್ತು ತಮಿಳುನಾಡು, ಛತ್ತೀಸ್‌ಗಢದಲ್ಲಿ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಇಳಿಕೆ ಆಗಿದೆ.

ಡಿಸೆಂಬರ್- ಜೂನ್ ಅವಧಿಯಲ್ಲಿ ಶಾಖದ ಅಲೆ ಹೆಚ್ಚಿದ್ದು, ಅಲ್ಲಲ್ಲಿ ಅನಿಯಮಿತ ಮಳೆ ಸುರಿದಿರುವುದು ಬೆಳೆಯ ಮೇಲೆ ಪರಿಣಾಮ ಬೀರಿರಬಹುದು. ಆದ್ದರಿಂದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಆದರೆ, ಜುಲೈ- ನವೆಂಬರ್ ವೇಳೆಗೆ ಬೆಲೆ ಇಳಿಕೆ ಸ್ಥಿರವಾಗಿರುವುದನ್ನು ಕಾಣಬಹುದು. ಪ್ರಸ್ತುತ ಏರಿಳಿತವು ತಾಜಾ ಬೆಳೆಗಳ ಆಗಮನದೊಂದಿಗೆ ಶೀಘ್ರದಲ್ಲೇ ಇಳಿಮುಖವಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಆಂಧ್ರದಲ್ಲಿ ಕೆಜಿ ಟೊಮೆಟೊ 50 ರೂ.ಗೆ ಮಾರಾಟ : ಎಲ್ಲ ರಾಜ್ಯಗಳಲ್ಲೂ ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರವು ರಾಜ್ಯದ ಜನತೆಗೆ ಅಗತ್ಯ ತರಕಾರಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ಕೃಷಿ ಮಾರುಕಟ್ಟೆ ಇಲಾಖೆಯು ರಾಜ್ಯಾದ್ಯಂತ ಇರುವ 103 ರೈತ ಬಜಾರ್‌ಗಳಲ್ಲಿ ಟೊಮೆಟೊವನ್ನು ಕೆಜಿಗೆ 50 ರೂ.ಗೆ ಮಾರಾಟ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಆಂಧ್ರಪ್ರದೇಶ ಸರ್ಕಾರವು ಕೈಗೆಟುಕುವ ದರದಲ್ಲಿ ಟೊಮೆಟೊ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೃಷಿ ಮಾರುಕಟ್ಟೆ ಇಲಾಖೆಗೆ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರವು ಪ್ರತಿದಿನ 50 ಟನ್ ಟೊಮೆಟೊ ಸಂಗ್ರಹಿಸುವ ಗುರಿ ಹೊಂದಿದ್ದು, ಜನರ ಬೇಡಿಕೆಗಳನ್ನು ಪೂರೈಸಲು ಅಗತ್ಯ ತರಕಾರಿಗಳನ್ನು ಸಂಗ್ರಹ ಮಾಡುತ್ತಿದೆ.​ ರಾಜ್ಯಾದ್ಯಂತ 103 ರೈತ ಬಜಾರ್‌ಗಳಲ್ಲಿ ಕೆಜಿಗೆ 50 ರೂ.ಗೆ ಟೊಮೆಟೊ ಮಾರಾಟ ಪ್ರಾರಂಭಿಸಿದೆ.

ಇದನ್ನೂ ಓದಿ :Tomato rate: ಗಗನಕ್ಕೇರಿದ ಟೊಮೆಟೊ ಬೆಲೆ.. ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು

ABOUT THE AUTHOR

...view details