ಕರ್ನಾಟಕ

karnataka

ಶಿಕ್ಷಕರ ನೇಮಕಾತಿ ಹಗರಣ: ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ತೃಣಮೂಲ ಸಂಸದ ಬ್ಯಾನರ್ಜಿ

By ETV Bharat Karnataka Team

Published : Sep 29, 2023, 5:07 PM IST

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​ 3 ರಂದು ಇಡಿ ಎದುರು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

Abhishek Banerjee to skip ED summon on October 3
Abhishek Banerjee to skip ED summon on October 3

ಕೋಲ್ಕತಾ : ಅಕ್ಟೋಬರ್​ 3 ರಂದು ತಾವು ನವದೆಹಲಿಯ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಅದರ ಬದಲಾಗಿ ಅಭಿಷೇಕ್ ಅಕ್ಟೋಬರ್ 2-3 ರಂದು ದೆಹಲಿಯಲ್ಲಿ ಪಕ್ಷದ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾರಾಗುವಂತೆ ಇಡಿ ಅಭಿಷೇಕ್​ರಿಗೆ ನೋಟಿಸ್ ನೀಡಿತ್ತು. ಆದರೆ ಅ.3 ರ ವಿಚಾರಣೆಗೆ ತಾವು ಹಾಜರಾಗುತ್ತಿಲ್ಲ ಎಂದು ತೃಣಮೂಲ ಪಕ್ಷದ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದಕ್ಕೂ ಮುನ್ನ ಸೆಪ್ಟೆಂಬರ್ 13 ರಂದು ಇಡಿ ಎದುರು ಅಭಿಷೇಕ್ ಬ್ಯಾನರ್ಜಿ ಹಾಜರಾಗಿದ್ದರು. ಆದರೆ ಆ ಸಮಯದಲ್ಲಿ ಅವರು ತಮ್ಮ ಪೂರ್ವನಿಗದಿತ ಎಲ್ಲ ಕಾರ್ಯಕ್ರಮಗಳನ್ನು ಬಿಟ್ಟು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ ಇದೇ ಕಾರಣದಿಂದ ಅವರು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಗೂ ಹಾಜರಾಗಲು ಆಗಿರಲಿಲ್ಲ. ಆದರೆ ಈ ಬಾರಿ ಮಾತ್ರ ಅವರು ಇಡಿ ನೋಟಿಸ್​ಗೆ ಸ್ಪಂದಿಸುತ್ತಿಲ್ಲ.

"ಎಲ್ಲ ಅಡೆತಡೆಗಳ ಹೊರತಾಗಿಯೂ ಪಶ್ಚಿಮ ಬಂಗಾಳದ ಸಮಸ್ಯೆಗಳ ನಿವಾರಣೆಗೆ ಮತ್ತು ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಪಡೆಯಲು ಹೋರಾಟ ಮುಂದುವರಿಯಲಿದೆ. ಪಶ್ಚಿಮ ಬಂಗಾಳದ ಜನರಿಗಾಗಿ ಹಾಗೂ ಅವರ ಮೂಲಭೂತ ರಕ್ಷಣೆಗಳಿಗಾಗಿ ಹೋರಾಡುವ ನನ್ನ ಬದ್ಧತೆಯನ್ನು ಈ ವಿಶ್ವದ ಯಾವುದೇ ಶಕ್ತಿಯೂ ತಡೆಯಲಾರದು. ಅಕ್ಟೋಬರ್ 2 ಮತ್ತು 3 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಾಧ್ಯವಾದರೆ ನನ್ನನ್ನು ತಡೆದು ನೋಡಿ" ಎಂದು ಅಭಿಷೇಕ್ ಎಕ್ಸ್​ನಲ್ಲಿ ಬರೆದಿದ್ದಾರೆ.

ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳಕ್ಕೆ ಬರಬೇಕಿರುವ ಬಾಕಿ ಅನುದಾನಕ್ಕೆ ಆಗ್ರಹಿಸಿ ಅಕ್ಟೋಬರ್ 3 ರಂದು ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ. ಇದೇ ದಿನದಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿ ಕಾರಿದ್ದಾರೆ.

ಮಮತಾ ಬ್ಯಾನರ್ಜಿ, ಪಕ್ಷದ ಇತರ ಸಂಸದರು, ಶಾಸಕರು ಮತ್ತು ನಾಯಕರೊಂದಿಗೆ ಸೇರಿ ಅಕ್ಟೋಬರ್ 2 ರಂದು ರಾಷ್ಟ್ರ ರಾಜಧಾನಿಯ ರಾಜಘಾಟ್​ನಲ್ಲಿರುವ ಮಹಾತ್ಮ ಗಾಂಧಿಜಿಯವರ ಸಮಾಧಿಗೆ ಅಭಿಷೇಕ್ ಬ್ಯಾನರ್ಜಿ ಗೌರವ ಸಲ್ಲಿಸಲಿದ್ದಾರೆ. ನಂತರ ಅಕ್ಟೋಬರ್ 3 ರಂದು ಟಿಎಂಸಿ ನಿಯೋಗವು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿ ಮಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಅಡಿಯಲ್ಲಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನದ ಬಗ್ಗೆ ಮನವಿ ಸಲ್ಲಿಸಲಿದೆ.

ಇದನ್ನೂ ಓದಿ : ಸಿಮ್ ಪೋರ್ಟೆಬಿಲಿಟಿಗೆ ಕಂಪನಿಗಳ ಕಿರಿಕಿರಿ; ಗ್ರಾಹಕರು ಹೈರಾಣು

ABOUT THE AUTHOR

...view details