ಕರ್ನಾಟಕ

karnataka

ಭಾರತೀಯ ಸೇನಾ ದಿನ: ಶುಭ ಕೋರಿದ ಮೋದಿ, ಕೋವಿಂದ್.. ವೀರ ಯೋಧರಿಗೆ 3 ಪಡೆಗಳ ಮುಖ್ಯಸ್ಥರಿಂದ ನಮನ

By

Published : Jan 15, 2022, 10:26 AM IST

ಸೇನಾ ದಿನ

ನಮ್ಮ ದೇಶದ ಧೈರ್ಯಶಾಲಿ ಹಾಗೂ ಗೌರವಾನ್ವಿತ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನಾ ದಿನದ ಶುಭ ಕೋರಿದ್ದಾರೆ.

ನವದೆಹಲಿ: ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ಸೇನಾ ದಿನ ಆಚರಿಸಲಾಗುತ್ತಿದ್ದು, ಸೇನಾ ಸಿಬ್ಬಂದಿ ಮತ್ತು ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ರಾಮನಾಥ್ ಕೋವಿಂದ್, 'ರಾಷ್ಟ್ರೀಯ ಭದ್ರತೆ ಒದಗಿಸುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ. ಗಡಿ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ನಮ್ಮ ಸೈನಿಕರು ವೃತ್ತಿಪರತೆ, ತ್ಯಾಗ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಸೇವೆಗೆ ರಾಷ್ಟ್ರವು ಆಭಾರಿಯಾಗಿದೆ. ಯೋಧರಿಗೆ ಸೇನಾ ದಿನದ ಶುಭಾಶಯಗಳು' ಎಂದು ತಿಳಿಸಿದ್ದಾರೆ.

'ಸೇನಾ ದಿನದ ಶುಭ ಸಂದರ್ಭದಲ್ಲಿ ನಮ್ಮ ಧೈರ್ಯಶಾಲಿ ಹಾಗೂ ಗೌರವಾನ್ವಿತ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸುತ್ತೇನೆ. ಭಾರತೀಯ ಸೇನೆಯು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಭಾರತೀಯ ಸೇನೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ' ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

'ಭಾರತೀಯ ಸೇನಾ ಸಿಬ್ಬಂದಿ ಪ್ರತಿಕೂಲ ಭೂ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೈಸರ್ಗಿಕ ವಿಪತ್ತುಗಳು ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಗರೋತ್ತರ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನೆಯ ಕೊಡುಗೆ ಅಪಾರ' ಎಂದು ಹೇಳಿದ್ದಾರೆ.

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿದ್ದು, ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಆದರೆ, 1949 ರ ಜನವರಿ 15 ರಂದು ಮೊದಲ ಬಾರಿಗೆ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆ. ಎಂ.ಕಾರಿಯಪ್ಪ ಅಧಿಕಾರ ವಹಿಸಿಕೊಂಡರು. ಇದರ ಜ್ಞಾಪಕಾರ್ಥವಾಗಿ ಸೇನಾ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 15 ರಂದು ಆಚರಿಸಲಾಗುತ್ತದೆ.

ವೀರ ಯೋಧರಿಗೆ ನಮನ ಸಲ್ಲಿಸಿದ ಮೂರು ಪಡೆಗಳ ದಂಡ ನಾಯಕರು

ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಮೂರು ಪಡೆಗಳ ಮುಖ್ಯಸ್ಥರು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ಗೌರವ ಸಲ್ಲಿಕೆ ಮಾಡಿದರು. ಜನರಲ್​​ ಮನೋಜ್​​​​​​ ಮುಕುಂದ್​ ನರವಣೆ, ಏರ್​​ ಚೀಫ್​ ಮಾರ್ಷಲ್​​ ವಿಆರ್​ ಚೌಧರಿ ಹಾಗೂ ಅಡ್ಮಿರ್ಲ್​​ ಆರ್​ ಹರಿ ಕುಮಾರ್​ ಈ ಸಮಾರಂಭದಲ್ಲಿ ಪಾಲ್ಗೊಂಡರು.

ಇನ್ನು ದೆಹಲಿಯ ಕಾರಿಯಪ್ಪ ಪರೇಡ್​ ಗ್ರೌಂಡ್​ನಲ್ಲಿ ಸೇನಾಪಡೆಗಳ ಪರೇಡ್​​ ಸಹ ನಡೆಯಿತು

ABOUT THE AUTHOR

...view details