ಕರ್ನಾಟಕ

karnataka

ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಅವತಾರ; ಸಾಗಬೇಕಾದ ಹಾದಿ ಇನ್ನೂ ದೂರ

By

Published : Apr 6, 2022, 3:37 PM IST

Pinaka rocket system

ಹೊಸದಾಗಿ ಪರೀಕ್ಷಿಸಲಾದ ಪಿನಾಕಾ 45 ಕಿ.ಮೀ. ವ್ಯಾಪ್ತಿ ಹೊಂದಿದೆ. ಪ್ರಸ್ತುತ ಭಾರತೀಯ ಸೇನೆಯು ಪಿನಾಕಾ ಎಂಕೆ1 ರಾಕ್ಸ್ ಕ್ಷಿಪಣಿಗಳನ್ನು ಬಳಸುತ್ತಿದೆ. ಇದು 39 ಕಿ.ಮೀ.ಗೆ ದೂರ ಕ್ರಮಿಸುತ್ತಿತ್ತು. 1890 ಪಿನಾಕಾವನ್ನು ಡಿಆರ್​ಡಿಓ ಅಭಿವೃದ್ಧಿಪಡಿಸುತ್ತಿದೆ.

ಮಾರ್ಚ್ 2022ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತ-ನಿರ್ಮಿತ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗವು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ತರಬೇತಿ ಪಡೆದ ಯೋಧರ ಕೊರತೆಯಿಂದ ಬಳಲುತ್ತಿರುವ ಭಾರತೀಯ ಸಶಸ್ತ್ರ ಪಡೆಗಳಿಗೆ ಕೊಂಚ ಶಕ್ತಿ ನೀಡಿದೆ. ಆದರೆ ಭಾರತದ ಶಕ್ತಿಯನ್ನು ಚೀನಾದ ಜತೆಗೆ ಹೋಲಿಸಿದ ಮೇಲಷ್ಟೇ ಅಂತಹ ಸಮಾಧಾನವನ್ನು ಪಡೆಯಬೇಕು. ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಚೀನಾ ಹೊಂದಿರುವ ಮಾರಣಾಂತಿಕ ಎಂಎಲ್ಆರ್‌ಎಸ್ (MLRS- ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್) ಎದುರಿಗೆ ಪಿನಾಕಾ ರಾಕೆಟ್ ಸರಣಿಯು ಮಸುಕಾಗುತ್ತದೆ.

ಪಿನಾಕಾ ರಾಕೆಟ್‌ಗಳನ್ನು ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್) ಜಂಟಿಯಾಗಿ ತಯಾರಿಸುತ್ತವೆ, ಇವು ಆರ್ಡನೆನ್ಸ್ ಫ್ಯಾಕ್ಟರಿಗಳಿಂದ ರಚನೆಯಾದ ಸಾರ್ವಜನಿಕ ವಲಯದ ಹೊಸ ಉದ್ಯಮಗಳಾಗಿವೆ. ಅವು ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಭಾರತೀಯ ಸೇನೆಯು ರಾಕೆಟ್‌ಗಳನ್ನು ತಯಾರಿಸಿ ಕೊಡುವಂತೆ ಬೇಡಿಕೆ ಸಲ್ಲಿಸಿದಾಗ ಬಳಕೆದಾರರ ಪ್ರಯೋಗಗಳು ಮತ್ತು ಹಣಕಾಸು ಬಿಡ್ಡಿಂಗ್‌ನ ವಿಧಾನವನ್ನು ಅನುಸರಿಸಿದೆ ಎಂದು ಇದು ಸೂಚಿಸುತ್ತದೆ.


2021ರಲ್ಲಿ, ನಾಗ್ಪುರ ಮೂಲದ ಸೋಲಾರ್ ಗ್ರೂಪ್ ಪಿನಾಕಾ ರಾಕೆಟ್‌ಗಳ ದೀರ್ಘ-ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು, ಅದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಭಾಗವಾದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಎಆರ್‌ಡಿಇ) ಯೊಂದಿಗೆ ಇದನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿತ್ತು.ಈ ಆವೃತ್ತಿಯು 45 ಕಿ.ಮೀ. ದೂರದ ಗುರಿಯನ್ನು ಸಾಧಿಸಬಲ್ಲದು. ಈ ಕಂಪನಿಯು ರಾಕೆಟ್‌ಗಳನ್ನು ಖರೀದಿಸಲು ಸೈನ್ಯದಿಂದ ನೀಡಲಾಗುತ್ತಿರುವ ಪ್ರಸ್ತಾವನೆಗಾಗಿ ವಿನಂತಿಯಲ್ಲಿ (ಆರ್‌ಎಫ್‌ಪಿ) ಭಾಗವಹಿಸಬಹುದು. ಆದ್ದರಿಂದ ಆರ್ಡರ್‌ಗಳಿಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳು ಸೋಲಾರ್‌ ಸಂಸ್ಥೆಯೊಂದಿಗೆ ಸ್ಪರ್ಧಿಸಬಹುದು.

ಪರೀಕ್ಷಾರ್ಥ ಪ್ರಯೋಗ: ಪಿಎಸ್‌ಯು ರಾಕೆಟ್‌ಗಳ ವಿಷಯಕ್ಕೆ ಬರುವುದಾದರೆ, ಡಿಆರ್‌ಡಿಒ ಮತ್ತು ಆರ್ಡನೆನ್ಸ್ ಫ್ಯಾಕ್ಟರಿ (ಒಎಫ್ಎಜೆ), ನಾಗ್ಪುರ ಜಂಟಿಯಾಗಿ ಮಾರ್ಚ್ 28 ಮತ್ತು 29ರಂದು ಪೋಖ್ರಾನ್‌ನ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ (ಪಿಎಫ್ಇಆರ್) ನಲ್ಲಿ ಈ ರಾಕೆಟ್‌ಗಳ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿತು. ಪಿನಾಕಾ-ಇಆರ್ ಹೆಸರಿನ ಈ ರಾಕೆಟ್‌ಗಳು ವಿಸ್ತೃತ ಶ್ರೇಣಿಯ ವ್ಯವಸ್ಥೆಯನ್ನು ಹೊಂದಿವೆ. ನಾಲ್ಕು ವಿಭಿನ್ನ ಶ್ರೇಣಿಗಳಲ್ಲಿ ವರ್ಧಿತ ಶ್ರೇಣಿಯ 24 ರಾಕೆಟ್‌ಗಳನ್ನು ಪರೀಕ್ಷಾರ್ಥವಾಗಿ ಹಾರಿಸಲಾಯಿತು. ಒಎಫ್ಎಜೆ ಹೇಳಿರುವಂತೆ ಗುರಿಗಳನ್ನು ಸಾಧಿಸಲಾಯಿತು ಹಾಗೂ ಪ್ರಯೋಗಗಳು ಯಶಸ್ವಿಯಾಗಿವೆ.


45 ಕಿ.ಮೀ. ಕ್ರಮಿಸುವ ಪಿನಾಕಾ: ಪ್ರಸ್ತುತ, ಭಾರತೀಯ ಸೇನೆಯು ಪಿನಾಕಾ ಎಂಕೆ1 ರಾಕ್ಸ್ ಕ್ಷಿಪಣಿಗಳನ್ನು ಬಳಸುತ್ತಿದೆ, ಇವು 39 ಕಿ.ಮೀ. ವ್ಯಾಪ್ತಿಯನ್ನು ಹೊಂದಿವೆ. ಇಟಾರ್ಸಿ ಮತ್ತು ಚಂದ್ರಾಪುರದಲ್ಲಿ ಕಾರ್ಖಾನೆಗಳನ್ನು ಹೊಂದಿರುವ ವೈಐಎಲ್ (ಇದರ ಹಿಂದಿನ ಅವತಾರ ಒಎಫ್ಎಜೆ ಆಗಿತ್ತು) ಮತ್ತು ಎಂಐಎಲ್‌ನಲ್ಲಿ ಬೃಹತ್ ಪ್ರಮಾಣದ ಉತ್ಪಾದನೆಯನ್ನು ಮಾಡಲಾಗುತ್ತದೆ. ಎಂಕೆ1 ಆವೃತ್ತಿಯ 39 ಕಿ.ಮೀ.ಗೆ ಹೋಲಿಸಿದರೆ ಹೊಸದಾಗಿ ಪರೀಕ್ಷಿಸಲಾದ ಪಿನಾಕಾ 45 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಪಿನಾಕಾ ಮಾರ್ಗದರ್ಶಿ ರಾಕೆಟ್ ಆವೃತ್ತಿಗೆ ಇದೇ ರೀತಿಯ ಪ್ರಯೋಗಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸೈನ್ಯವು ಹಳೆಯ ಆವೃತ್ತಿಯನ್ನು ಹೊಸ ರಾಕೆಟ್‌ಗಳೊಂದಿಗೆ ಬದಲಾಯಿಸುತ್ತದೆ. ಏಕೆಂದರೆ ಇದು ಸ್ವಲ್ಪ ದೀರ್ಘವಾದ ಶ್ರೇಣಿಯನ್ನು ಹೊಂದಿದೆ.

ಸೇನೆಗೆ ಯಾವುದೇ ಹೊಸ ಸೇರ್ಪಡೆಯು ಸ್ವಾಗತಾರ್ಹ ವಿಷಯ. ಇದೇನೂ ಅಷ್ಟು ದೊಡ್ಡ ವ್ಯತ್ಯಾಸವಲ್ಲವಾದ್ದರಿಂದ ಹಿಗ್ಗುವುದಕ್ಕೆ ಹೆಚ್ಚಿನ ಕಾರಣಗಳಿಲ್ಲ. ಏಕೆಂದರೆ, ಪಿನಾಕಾದ ವರ್ಧಿತ ಶ್ರೇಣಿಯ ಆವೃತ್ತಿಯೂ 45 ಕಿ.ಮೀ. ವ್ಯಾಪ್ತಿಯನ್ನಷ್ಟೇ ಹೊಂದಿದೆ. ಹಿಂದಿನದಕ್ಕೆ ಹೋಲಿಸಿದರೆ ಕೇವಲ 6 ಕಿ.ಮೀ. ಹೆಚ್ಚು. ವರ್ಧನೆಯು ಪ್ರಸ್ತುತ ಶ್ರೇಣಿಗಿಂತ ಕನಿಷ್ಠ ದ್ವಿಗುಣವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಮಹತ್ವವಿರುತ್ತದೆ. ಮುಂದಿನ ಪೀಳಿಗೆಯ ಪಿನಾಕಾ 150 ಕಿ.ಮೀ.ಗಿಂತ ಕಡಿಮೆಯಿಲ್ಲದ ವ್ಯಾಪ್ತಿಯನ್ನು ಹೊಂದಬೇಕೆಂದು ರಕ್ಷಣಾ ತಜ್ಞರು ನಿರೀಕ್ಷಿಸುತ್ತಾರೆ. ಪಿನಾಕಾಗಳು ಆಲಂಕಾರಿಕ ಮೌಲ್ಯಗಳಿಗಾಗಿರಬಾರದು. ಇಷ್ಟು ವರ್ಷಗಳ ಅವಧಿ, ಹಣ ಮತ್ತು ಮಾನವಶಕ್ತಿಯನ್ನು ಕಳೆದ ಮೇಲೆ, ಭಾರತವು ಅಂತಹ ಕಡಿಮೆ ಸಾಮರ್ಥ್ಯದ ರಾಕೆಟ್‌ಗಳಿಂದ ತೃಪ್ತವಾಗಲು ಸಾಧ್ಯವಿಲ್ಲ.

ಚೀನಾದ ಆಕ್ರಮಣ: ಭಾರತದೊಂದಿಗೆ ಎಲ್ಲ ವಿವಾದಿತ ಭೂಮಿಯಲ್ಲಿ ಚೀನಾ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿರುವ ರೀತಿ ಮನಸೆಳೆಯುವಂತಿದೆ. ಉಸಿರಾಡಲು ಅಥವಾ ಯೋಚಿಸಲು ಭಾರತಕ್ಕೆ ಬೀಜಿಂಗ್ ಯಾವುದೇ ಸಮಯವನ್ನು ನೀಡುತ್ತಿಲ್ಲ. 2021ರಲ್ಲಿ, ಚೀನಾದ ಪಿಎಲ್ಎ ಟಿಬೆಟ್ ಪ್ರದೇಶಕ್ಕೆ ಎಂಎಲ್‌ಆರ್‌ಎಸ್ ರಾಕೆಟ್ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಈ ರಾಕೆಟ್ ಒಂದೆರಡು ಕ್ಷಣಗಳಲ್ಲಿ ಎಕರೆಗಟ್ಟಲೆ ಭೂಮಿಯಲ್ಲಿ ಅಪಾರ ಪ್ರಮಾಣದ ನಾಶವನ್ನು ಮಾಡಬಲ್ಲದು. 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಮುಖಾಮುಖಿಯ ಬಳಿಕ ಈ ರಾಕೆಟ್‌ನ ನಿಯೋಜನೆ ಮಾಡಲಾಗಿದೆ. ಭಾರತ ತನ್ನನ್ನು ರಕ್ಷಿಸಿಕೊಳ್ಳಲು ಅಂತಹ ಅಸ್ತ್ರವನ್ನು ಹೊಂದಿದ್ದರೆ, ಅದನ್ನು ಸಾರ್ವಜನಿಕಗೊಳಿಸಬೇಕಾಗಿದೆ.

ಚೀನಾದ ಎಂಎಲ್‌ಆರ್‌ಎಸ್ ವಿಶೇಷತೆ: ವಿಶ್ಲೇಷಕರ ಪ್ರಕಾರ, ಎಂಎಲ್‌ಆರ್‌ಎಸ್ ಹೆಚ್ಚಿನ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ಇದು ಟಿಬೆಟ್ ಅನ್ನು ಗುರಿಯಾಗಿರಿಸಿ ಕೊಂಡಿದ್ದರೆ, ಭಾರತಕ್ಕೂ ಅದು ಎಚ್ಚರಿಕೆಯ ಗಂಟೆಯಾಗಿದೆ. ಏಕೆಂದರೆ, ಟಿಬೆಟ್ ಭಾರತ ಮತ್ತು ಚೀನಾದ ಗಡಿ ಪ್ರದೇಶವಾಗಿದೆ. ಟ್ರಕ್-ಮೇಲೆ ಹೊಂದಿಸಲಾಗಿರುವ ಪಿಎಚ್ಎಲ್-03 ದೀರ್ಘ-ಶ್ರೇಣಿಯ ಬಹು ರಾಕೆಟ್ ಲಾಂಚರ್‌ಗಳನ್ನು ಒಂದೇ ಸಮಯದಲ್ಲಿ ಅನೇಕ ಗುರಿಗಳನ್ನು ಹೊಡೆಯಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು 130 ಕಿ.ಮೀ. ದೂರದ ವರೆಗೆ ದಾಳಿಯ ವ್ಯಾಪ್ತಿಯನ್ನು ಹೊಂದಿದೆ. ಅವುಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುತ್ತದೆ. ದೀರ್ಘ-ಶ್ರೇಣಿಯ ಬಹು ರಾಕೆಟ್ ಲಾಂಚರ್ ವ್ಯವಸ್ಥೆಗಳನ್ನು ಎತ್ತರದ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಏಕೆಂದರೆ, ಅವುಗಳು ವಿಸ್ತಾರವಾದ ಪ್ರದೇಶವನ್ನು ಆವರಿಸಬಹುದು.

ಪಿನಾಕಾದ 7 ತುಕಡಿಗಳು ಸೇನೆಗೆ: ಇಷ್ಟೆಲ್ಲ ಕಠಿಣ ವಾಸ್ತವಗಳ ನಡುವೆಯೂ ಹೊಸದಾಗಿ ಪರೀಕ್ಷೆಗೊಳಪಡಿಸಿದ ಪಿನಾಕಾ ವ್ಯವಸ್ಥೆ, ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಭಾರತದ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಪ್ರಸ್ತುತ, ಪಿನಾಕಾದ 7 ತುಕಡಿಗಳು ಸೇನೆಯಲ್ಲಿವೆ. 126 ಲಾಂಚರ್ ಘಟಕಗಳು ಸಕ್ರಿಯವಾಗಿವೆ, ಪ್ರತಿ ತುಕಡಿಯು 18 ಲಾಂಚರ್ ಘಟಕಗಳನ್ನು ಹೊಂದಿದೆ. ನವೀಕರಿಸಿದ ಈ ಆವೃತ್ತಿಯು ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಉತ್ಪಾದಿಸುವ ಭಾರತದ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ.

1980ರಲ್ಲಿ ಪಿನಾಕಾದ ಅಭಿವೃದ್ಧಿ ಆರಂಭ: ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಡಿಆರ್‌ಡಿಒ 1980ರ ದಶಕದಲ್ಲಿ ಪ್ರಾರಂಭಿಸಿತು. ಇದು ರಷ್ಯಾದ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಯಾದ ಗ್ರಾಡ್‌ (Grad)ಗೆ ಪರ್ಯಾಯವಾಗಿತ್ತು. ಭಾರತೀಯ ಸೇನೆ ಅವುಗಳನ್ನು ಈಗಲೂ ಬಳಸುತ್ತಿದೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಿನಾಕಾ ಎಂಕೆ1 ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ತರುವಾಯ, ವ್ಯವಸ್ಥೆಯ ಹಲವು ತುಕಡಿಗಳನ್ನು ಪರಿಚಯಿಸಲಾಯಿತು.

ಭಾರತವು ಖಾಸಗಿ ಹೂಡಿಕೆಗೆ ರಕ್ಷಣಾ ವಲಯವನ್ನು ತೆರೆದು ನಾವೀನ್ಯವನ್ನು ಉತ್ತೇಜಿಸದ ಹೊರತು, ಭಾರತದ ವಿರುದ್ಧ ಧ್ರುವೀಕರಣಗೊಂಡಿರುವ ಕಾದಾಡುತ್ತಿರುವ ನೆರೆಹೊರೆಯವರು ಒಡ್ಡುವ ಸವಾಲುಗಳನ್ನು ಎದುರಿಸಲು ಕಷ್ಟವಾಗುತ್ತದೆ.

ABOUT THE AUTHOR

...view details