ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):''ಭದ್ರತಾ ಸಿಬ್ಬಂದಿ ದೇಶವಾಸಿಗಳ ಹೃದಯ ಗೆಲ್ಲಬೇಕು. ಅವರಿಗೆ ನೋವುಂಟು ಮಾಡುವ ತಪ್ಪುಗಳು ಪುನರಾವರ್ತನೆ ಆಗಬಾರದು'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಳಿದ್ದಾರೆ. ಪೂಂಚ್ ಜಿಲ್ಲೆಯಲ್ಲಿ ಕಳೆದ ವಾರ ಭಾರತೀಯ ಸೇನಾ ವಾಹನದ ಮೇಲೆ ನಡೆದ ದಾಳಿ, ನಾಗರಿಕರ ಹತ್ಯೆ ಹಾಗು ಅದರ ವಿರುದ್ಧ ನಡೆದ ಪ್ರತಿಭಟನೆಯ ಬಳಿಕ ಸಚಿವರು ಸೇನೆಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಪೂಂಚ್‌ನಲ್ಲಿ ಉಗ್ರರ ದಾಳಿ, ಮೂವರು ಸೈನಿಕರು ಹುತಾತ್ಮ
ಜಮ್ಮು ಪ್ರಾಂತ್ಯಕ್ಕೆ ಭೇಟಿ ನೀಡಿರುವ ರಾಜನಾಥ್, ರಾಜೌರಿ ಜಿಲ್ಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ''ಸರ್ಕಾರವು ನಿಮ್ಮ ಕಲ್ಯಾಣಕ್ಕೆ ಬದ್ಧ. ನೀವು ದೇಶದ ಕಾವಲುಗಾರರು. ಆದರೆ, ಅದೇ ಸಮಯದಲ್ಲಿ ದೇಶವಾಸಿಗಳ ಹೃದಯ ಗೆಲ್ಲುವ ದೊಡ್ಡ ಜವಾಬ್ದಾರಿಯೂ ನಿಮ್ಮ ಮೇಲಿದೆ. ನೀವು ನಿಮ್ಮ ಸ್ವಂತ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಆದರೆ, ಅಲ್ಲಿ ಕೆಲವು ಲೋಪಗಳಿವೆ. ದೇಶವಾಸಿಗಳಿಗೆ ನೋವುಂಟು ಮಾಡುವ ಇಂತಹ ತಪ್ಪುಗಳು ಮರುಕಳಿಸಬಾರದು. ದೇಶವನ್ನು ಕಾಪಾಡುವುದರ ಜೊತೆಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ನಂಬಿಕೆಯನ್ನು ಗೆಲ್ಲಲು ಪ್ರಯತ್ನಿಸಬೇಕು'' ಎಂದು ಕರೆ ನೀಡಿದರು.
ಇದೇ ವೇಳೆ ಸೈನಿಕರ ಕಾರ್ಯವನ್ನು ಶ್ಲಾಘಿಸಿದ ಸಚಿವರು, ''ನಾನು ನಿಮ್ಮ ಶೌರ್ಯ ಮತ್ತು ಸ್ಥೈರ್ಯವನ್ನು ನಂಬುತ್ತೇನೆ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು. ನೀವು ಇದೇ ಬದ್ಧತೆಯೊಂದಿಗೆ ಮುಂದುವರಿಯಬೇಕು. ಇದರಲ್ಲಿ ನೀವು ವಿಜಯ ಸಾಧಿಸುವಿರಿ ಎಂಬ ಸಂಪೂರ್ಣ ನಂಬಿಕೆ ನನಗಿದೆ'' ಎಂದು ತಿಳಿಸಿದರು.