ETV Bharat / bharat

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ತಗುಲಿದ ಗುಂಡು: 8 ವರ್ಷದಿಂದ ಕೋಮಾದಲ್ಲಿದ್ದ ಸೇನಾಧಿಕಾರಿ ನಿಧನ

author img

By PTI

Published : Dec 26, 2023, 10:15 PM IST

Army officer who was in coma dies after eight years: 2015ರ ನವೆಂಬರ್​ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಕುಪ್ವಾರಾ ಟೆರಿಯರ್ಸ್ ಘಟಕದ ಲೆಫ್ಟಿನೆಂಟ್ ಕರ್ನಲ್ ಕೆ.ಎಸ್.ನ್ಯಾಟ್ ನಿಧನರಾಗಿದ್ದಾರೆ.

In coma since 2015 after injury in anti-terror op, Territorial Army officer dies in Jalandhar
2015ರಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಗುಂಡೇಟು: 8 ವರ್ಷದಿಂದ ಕೋಮಾದಲ್ಲಿದ್ದ ಸೇನಾಧಿಕಾರಿ ನಿಧನ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ಗಾಯಗೊಂಡು ಕಳೆದ ಎಂಟು ವರ್ಷಗಳಿಂದ ಕೋಮಾದಲ್ಲಿದ್ದ ಭಾರತೀಯ ಸೇನಾಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಕೆ.ಎಸ್.ನ್ಯಾಟ್ ಅವರು ಭಾನುವಾರ ಕೊನೆಯುಸಿರೆಳೆದರು. ಸೇನೆ ಮಂಗಳವಾರ ಬೆಳಿಗ್ಗೆ ಯೋಧನ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿತು.

ಕುಪ್ವಾರದ ಮಣಿಗಾಹ್‌ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ 2015ರ ನವೆಂಬರ್​ನಲ್ಲಿ ಉಗ್ರರ ವಿರುದ್ಧ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಕುಪ್ವಾರಾ ಟೆರಿಯರ್ಸ್ ಘಟಕದ ಲೆಫ್ಟಿನೆಂಟ್ ಕರ್ನಲ್ ಆಗಿದ್ದ​ ನ್ಯಾಟ್ ಅವರು ಟೆರಿಟೋರಿಯಲ್ ಆರ್ಮಿಯ 160 ಪದಾತಿದಳದ ಬೆಟಾಲಿಯನ್‌ ಮುನ್ನಡೆಸುತ್ತಿದ್ದರು. ಆಗ ಎನ್‌ಕೌಂಟರ್ ಶುರುವಾಗಿ ಗುಂಡೇಟಿನಿಂದ ಅವರು ಗಾಯಗೊಂಡಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ ನ್ಯಾಟ್ ತಮ್ಮ ಪಡೆಯೊಂದಿಗೆ ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ತಲುಪಿದ್ದರು. ಇದ್ದಕ್ಕಿದ್ದಂತೆ, ಓರ್ವ ಉಗ್ರ ಗುಂಡಿನ ದಾಳಿ ಮಾಡಿದ್ದ. ಇದರಿಂದ ನ್ಯಾಟ್ ಅವರಿಗೆ ಗಂಭೀರವಾದ ಗಾಯವಾಗಿತ್ತು. ಆದಾಗ್ಯೂ, ಅವರು ತಮ್ಮ ಜೀವದ ಬಗ್ಗೆ ಯಾವುದೇ ಯೋಚನೆ ಮಾಡದೆ, ಭಯೋತ್ಪಾದಕನಿದ್ದ ಸ್ಥಳದ ಕಡೆಗೆ ಮುನ್ನುಗ್ಗಿ, ಅವನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎನ್‌ಕೌಂಟರ್​ನಲ್ಲಿ ಗಾಯಗೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಅವರನ್ನು ಘಟನಾ ಸ್ಥಳದಿಂದ ರಕ್ಷಣೆ ಮಾಡಿ ಡ್ರಗ್ಮುಲ್ಲಾದ 168ರ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಶ್ರೀನಗರದ 92 ಬೇಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ದೆಹಲಿಯ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಹಚ್ಚಿನ ಚಿಕಿತ್ಸೆ ನಂತರ ಅವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಇದೇ ಆಸ್ಪತ್ರೆಯಲ್ಲಿ 2015ರಿಂದ ಕೋಮಾದಲ್ಲಿದ್ದು ಡಿಸೆಂಬರ್​ 24ರಂದು ನಿಧನ ಹೊಂದಿದರು ಎಂದು ಅಧಿಕಾರಿ ವಿವರಿಸಿದರು.

ಕೆ.ಎಸ್.ನ್ಯಾಟ್ 1998ರಲ್ಲಿ ಬ್ರಿಗೇಡ್ ಆಫ್ ಗಾರ್ಡ್ಸ್‌ನಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಯಾಗಿ ನೇಮಕವಾಗಿದ್ದರು. 14 ವರ್ಷಗಳ ಕಾಲ ಸಾಮಾನ್ಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಅಲ್ಲಿಂದ ಬಿಡುಗಡೆಗೊಂಡ ಬಳಿಕ ಟೆರಿಯರ್ಸ್ ಘಟಕದಲ್ಲಿ ನಿಯೋಜನೆ ಮಾಡಲಾಗಿತ್ತು. ಮಂಗಳವಾರ ಪತಾಹಿರಿ ಗ್ಯಾರಿಸನ್​ನಲ್ಲಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಕುಪ್ವಾರಾ ಟೆರಿಯರ್ಸ್ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸಮರ್ಪಿಸಿದರು.

ಇದನ್ನೂ ಓದಿ: ಪುಲ್ವಾಮಾದ ಟ್ರಾಲ್​ನಲ್ಲಿ ಮೂವರು ಶಂಕಿತ ವ್ಯಕ್ತಿಗಳ ಬಂಧನ: ಭಾರತೀಯ ಸೇನೆ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.