ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು ಶಸ್ತ್ರಸಜ್ಜಿತ ಉಗ್ರರು ಎರಡು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನುಳಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಡನ್ ಆ್ಯಂಡ್ ಸರ್ಚ್ ಸಿಬ್ಬಂದಿಯನ್ನು ಸ್ಥಳಕ್ಕೆ ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ದಾಳಿ ನಡೆದಿದೆ. ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬುಧವಾರ ರಾತ್ರಿ ಪೂಂಚ್‌ನ ಧೇರಾ ಕಿ ಗಲಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.
ಹೆಚ್ಚುವರಿ ಪಡೆಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಉಗ್ರರು ಟ್ರಕ್ ಮತ್ತು ಜಿಪ್ಸಿ ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಸೈನಿಕರು ಮೃತಪಟ್ಟಿದ್ದು ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ. ದಾಳಿ ನಡೆದ ಸ್ಥಳದಲ್ಲಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಬೃಹತ್ ಪ್ರಮಾಣದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯೋಧರ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೌರಿ ಮತ್ತು ಪೂಂಚ್ ಜಿಲ್ಲೆಗಳ ಗಡಿಯಲ್ಲಿರುವ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಪ್ರದೇಶವು ದಟ್ಟ ಅರಣ್ಯ ಹೊಂದಿದೆ. ಕಳೆದ ಏಪ್ರಿಲ್ 20ರಂದು ಸೇನಾ ವಾಹನದ ಮೇಲೆ ನಡೆದ ಹೊಂಚುದಾಳಿಯಲ್ಲಿ ಐವರು ಸೈನಿಕರು ಮೃತಪಟ್ಟಿದ್ದರು.
ಮೇ ತಿಂಗಳಲ್ಲಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಚಮ್ರೆರ್ ಅರಣ್ಯದಲ್ಲಿ ಐವರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ಪ್ರಮುಖ ಶ್ರೇಣಿಯ ಅಧಿಕಾರಿ ಗಾಯಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದ.
ಇದನ್ನೂ ಓದಿ: ಪೂಂಚ್‌ನಲ್ಲಿ ಸೇನಾ ವಾಹನದ ಗ್ರೆನೇಡ್ ಎಸೆದ ಉಗ್ರರು: ಐವರು ಸೈನಿಕರು ಹುತಾತ್ಮ