ಕರ್ನಾಟಕ

karnataka

ನಾಳೆ ಮಧ್ಯಪ್ರದೇಶದ 230 ಕ್ಷೇತ್ರಗಳು, ಛತ್ತೀಸ್​ಗಢದ 70 ಸ್ಥಾನಗಳಿಗೆ ಮತದಾನ: 3,500 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

By ETV Bharat Karnataka Team

Published : Nov 16, 2023, 9:14 PM IST

Assembly Elections 2023: ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳು ಮತ್ತು ಛತ್ತೀಸ್​ಗಢದ 70 ಕ್ಷೇತ್ರಗಳಿಗೆ ನ.17ರಂದು ಮತದಾನ ನಡೆಯಲಿದೆ. ಎರಡು ರಾಜ್ಯಗಳಲ್ಲಿ ಸುಮಾರು 3,500 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಂತಿಯುವ ಚುನಾವಣೆಗೆ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳೊಂದಿಗೆ ಬಿಗಿ ಭದ್ರತೆ ಏರ್ಪಡಿಸಿದೆ.

Chhattisgarh and Madhya Pradesh elections 2023 polling
ನಾಳೆ ಮಧ್ಯಪ್ರದೇಶದ 230 ಕ್ಷೇತ್ರಗಳು, ಛತ್ತೀಸ್​ಗಢದ 70 ಸ್ಥಾನಗಳಿಗೆ ಮತದಾನ

ಭೋಪಾಲ್/ರಾಯಪುರ:ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಾಳೆ (ಶುಕ್ರವಾರ) ಮಹತ್ವದ ದಿನವಾಗಿದೆ. ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್​ಗಢ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ನಡೆಯಲಿದೆ. ಈ ಮೂಲಕ ಮಿಜೋರಾಂ ಸೇರಿ ಮೂರು ರಾಜ್ಯಗಳ ಮತ ಸಮರಕ್ಕೆ ತೆರೆ ಬೀಳಲಿದೆ. ರಾಜಸ್ಥಾನ (ನ.25) ಹಾಗೂ ತೆಲಂಗಾಣ (ನ.30) ಚುನಾವಣೆ ಮಾತ್ರ ಬಾಕಿ ಇರಲಿದೆ.

ನವೆಂಬರ್​ 7ರಂದು ನಡೆದ ಮಿಜೋರಾಂನ ಎಲ್ಲ 40 ಕ್ಷೇತ್ರಗಳ ಚುನಾವಣೆಯಲ್ಲಿ ಶೇ.78ರಷ್ಟು ಮತದಾನವಾಗಿದೆ. ಅದೇ ದಿನ ಛತ್ತೀಸ್​ಗಢದ 90 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಜರುಗಿತ್ತು. ಶೇ.71ರಷ್ಟು ಮತದಾನ ದಾಖಲಾಗಿತ್ತು. ನ.17ರಂದು ಛತ್ತೀಸ್​ಗಢದ 22 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಇದರಲ್ಲಿ 17 ಎಸ್‌ಟಿ ಮೀಸಲು, 9 ಎಸ್‌ಸಿ ಮೀಸಲು ಮತ್ತು 44 ಸಾಮಾನ್ಯ ಮೀಸಲು ಕ್ಷೇತ್ರಗಳು ಸೇರಿದ್ದು, 81.41 ಲಕ್ಷ ಪುರುಷರು, 81.72 ಮಹಿಳೆಯರು, 684 ತೃತೀಯ ಲಿಂಗಿಗಳು ಸೇರಿ 1.63 ಕೋಟಿಗೂ ಅಧಿಕ ಮತದಾರರಿದ್ದಾರೆ.

70 ಕ್ಷೇತ್ರ - 958 ಅಭ್ಯರ್ಥಿಗಳ ಭವಿಷ್ಯ: ಛತ್ತೀಸ್​ಗಢದ 70 ಕ್ಷೇತ್ರಗಳಲ್ಲಿ 51 ಪಕ್ಷಗಳಿಂದ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 130 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯಲಿಂಗಿ ಸೇರಿದ್ದಾರೆ. ಆಮ್ ಆದ್ಮಿ ಪಕ್ಷ - 44, ಬಿಎಸ್‌ಪಿ - 44, ಕಾಂಗ್ರೆಸ್‌ - 70, ಬಿಜೆಪಿ - 70, ಜೆಸಿಸಿಜೆ - 67 ಮತ್ತು 357 ಸ್ವತಂತ್ರ ಅಭ್ಯರ್ಥಿಗಳು ಹಾಗೂ 304 ಇತರೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಮಧ್ಯಪ್ರದೇಶ, ಹೈವೋಲ್ಟೇಜ್ ಕಣ:ಪಂಚ ರಾಜ್ಯಗಳ ಪೈಕಿ ಮಧ್ಯಪ್ರದೇಶ ಚುನಾವಣೆ ಹೈವೋಲ್ಟೇಜ್ ಆಗಿ ಮಾರ್ಪಟ್ಟಿದೆ. ಈ ರಾಜ್ಯದಲ್ಲೂ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಶುಕ್ರವಾರ ಎಲ್ಲ 230 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಒಟ್ಟಾರೆ 5.60 ಕೋಟಿ ಮತದಾರರು 2,533 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲು ಮತ ಚಲಾಯಿಸಲಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶ ಚುನಾವಣೆ: ಹೈ ಪ್ರೊಫೈಲ್​ ಸ್ಪರ್ಧಿಗಳಿಂದ ರಂಗೇರಿದ ಬುಧ್ನಿ ವಿಧಾನಸಭಾ ಕ್ಷೇತ್ರ

ಮತದಾನಕ್ಕಾಗಿ 230 ಸ್ಥಾನಗಳಲ್ಲಿ 64 ಸಾವಿರದ 523 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 17 ಸಾವಿರ ಸೂಕ್ಷ್ಮ ಮತಗಟ್ಟೆಗಳ ಎಂದು ಗುರುತಿಸಲಾಗಿದೆ. 35 ಸಾವಿರ ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಬಿಜೆಪಿ - ಕಾಂಗ್ರೆಸ್ ಎಲ್ಲ 230 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಎಸ್‌ಪಿ 181 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದರೆ, ಆಮ್ ಆದ್ಮಿ ಪಕ್ಷದಿಂದ 66 ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದಿಂದ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರೊಂದಿಗೆ 1,166 ಸ್ವತಂತ್ರ ಅಭ್ಯರ್ಥಿಗಳು, ಒಬ್ಬ ತೃತೀಯಲಿಂಗಿ ಅಭ್ಯರ್ಥಿ ಕೂಡ ಕಣದಲ್ಲಿದ್ದಾರೆ.

331 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ: ಮಧ್ಯಪ್ರದೇಶ ಚುನಾವಣೆಯಲ್ಲಿ ಝಣ-ಝಣ ಕಾಂಚಾಣ ಜೋರು ಸದ್ದು ಮಾಡಿದೆ. ಅಕ್ಟೋಬರ್ 21 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೂ ದಾಖಲೆಯ 331 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಕಳೆದ 25 ದಿನಗಳಲ್ಲಿ ಆಯೋಗದ ನಿಗಾ ತಂಡಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ 38.49 ಕೋಟಿ ನಗದು, 62.9 ಕೋಟಿ ಮೌಲ್ಯದ ಅಕ್ರಮ ಮದ್ಯ, 17.2 ಕೋಟಿ ಮೌಲ್ಯದ ಮಾದಕ ದ್ರವ್ಯ, 92.74 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು ಮತ್ತು 121.61 ಕೋಟಿ ರೂ. ಮೌಲ್ಯದ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಇದರ ಮೌಲ್ಯ ನಾಲ್ಕು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ:ಸುಪ್ರೀಂಕೋರ್ಟ್​ ಚಾಟಿ: ಬಾಕಿ ಇಟ್ಟುಕೊಂಡಿದ್ದ 10 ಮಸೂದೆ ವಾಪಸ್​ ಕಳುಹಿಸಿದ ತಮಿಳುನಾಡು ರಾಜ್ಯಪಾಲ

ABOUT THE AUTHOR

...view details