ETV Bharat / bharat

ಸುಪ್ರೀಂಕೋರ್ಟ್​ ಚಾಟಿ: ಬಾಕಿ ಇಟ್ಟುಕೊಂಡಿದ್ದ 10 ಮಸೂದೆ ವಾಪಸ್​ ಕಳುಹಿಸಿದ ತಮಿಳುನಾಡು ರಾಜ್ಯಪಾಲ

author img

By ETV Bharat Karnataka Team

Published : Nov 16, 2023, 7:39 PM IST

ತಮಿಳುನಾಡು ರಾಜ್ಯಪಾಲ
ತಮಿಳುನಾಡು ರಾಜ್ಯಪಾಲ

ತಮಿಳುನಾಡು ರಾಜ್ಯಪಾಲ ರವಿ ಸರ್ಕಾರ ಅಂಗೀಕರಿಸಿದ್ದ 10 ಮಸೂದೆಗಳನ್ನು ಅಂಕಿತ ಹಾಕದೇ ವಾಪಸ್​ ಕಳುಹಿಸಿದ್ದಾರೆ.

ಚೆನ್ನೈ (ತಮಿಳುನಾಡು): ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಬಾಕಿ ಉಳಿಸಿಕೊಳ್ಳುವುದರ ವಿರುದ್ಧ ಸುಪ್ರೀಂಕೋರ್ಟ್​ ಈಚೆಗೆ ಕಿಡಿಕಾರಿತ್ತು. 'ನೀವು ಬೆಂಕಿಯ ಜೊತೆಗೆ ಸರಸವಾಡುತ್ತಿದ್ದೀರಿ' ಎಂದೂ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ, ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ತಮ್ಮಲ್ಲಿ ಉಳಿಸಿಕೊಂಡಿದ್ದ 10 ಮಸೂದೆಗಳನ್ನು ವಿಧಾನಸಭೆಗೆ ಗುರುವಾರ ವಾಪಸ್​ ಕಳುಹಿಸಿದ್ದಾರೆ.

ತಮಿಳುನಾಡು ಸರ್ಕಾರ ರಾಜ್ಯಪಾಲರ ವಿಳಂಬ ಧೋರಣೆ ಪ್ರಶ್ನಿಸಿ, ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್​ ಅಭಿವೃದ್ಧಿ ಮಸೂದೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ರಾಜ್ಯಪಾಲರ ನಡೆಯನ್ನೂ ಟೀಕಿಸಿತ್ತು. ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಏಕೆ ತಡೆಹಿಡಿಯುತ್ತಾರೆ ಎಂದು ಕೇಳಿತ್ತು.

ನಾಳೆ ವಿಶೇಷ ಅಧಿವೇಶನ: ಸುಪ್ರೀಂಕೋರ್ಟ್​ ಕಳವಳದ ಬಳಿಕ ರಾಜ್ಯಪಾಲ ರವಿ ಅವರು ಹತ್ತು ಮಸೂದೆಗಳಲ್ಲಿ ಹಿಂದಿರುಗಿಸಿದ್ದಾರೆ. ಇದರಲ್ಲಿ ಈ ಹಿಂದಿನ ಎಐಎಡಿಎಂಕೆ ಸರ್ಕಾರ ಅಂಗೀಕರಿಸಿದ್ದ ಎರಡು ಮಸೂದೆಗಳೂ ಇದರಲ್ಲಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಸ್ಪೀಕರ್ ಎಂ.ಅಪ್ಪಾವು ಅವರು ಶನಿವಾರ (ನವೆಂಬರ್​​ 18) ವಿಶೇಷ ಅಧಿವೇಶನ ಕರೆದಿದ್ದಾರೆ. ಇದರಲ್ಲಿ ಡಿಎಂಕೆ ಸರ್ಕಾರ ವಾಪಸ್​ ಬಂದ ಮಸೂದೆಗಳನ್ನು ಮತ್ತೊಮ್ಮೆ ಅಂಗೀಕರಿಸಿ, ಪುನಃ ರಾಜ್ಯಪಾಲರಿಂದ ಅನುಮೋದನೆಗೆ ಕಳುಹಿಸುವ ನಿರೀಕ್ಷೆ ಇದೆ.

ರಾಜ್ಯಪಾಲರ ನಡೆಯ ಬಗ್ಗೆ ಮಾತನಾಡಿದ ಡಿಎಂಕೆ ವಕ್ತಾರ ಸರವಣನ್, ರಾಜ್ಯಪಾಲರು ತಮಿಳುನಾಡಿನ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಸುಪ್ರೀಂಕೋರ್ಟ್​ ತರಾಟೆ ತೆಗೆದುಕೊಂಡ ಬಳಿಕ ರಾಜ್ಯಪಾಲರು ಮಸೂದೆಗಳನ್ನು ವಿಧಾನಸಭೆಗೆ ಮರಳಿಸಿದ್ದಾರೆ. ಇದನ್ನು ಅವರು ಮೊದಲೇ ಮಾಡಬೇಕಿತ್ತು. ಮಸೂದೆಗಳಲ್ಲಿ ದೋಷಗಳಿದ್ದರೆ ಅದನ್ನು ಸುಪ್ರೀಂ ಮುಂದೆ ಯಾಕೆ ಅವರು ಪ್ರಶ್ನಿಸಲಿಲ್ಲ ಎಂದು ಕೇಳಿದರು.

ಸರ್ಕಾರಗಳ ಉತ್ತಮ ಕೆಲಸಕ್ಕೆ ಅಸೂಯೆ: ನಾಡಿನ ಜನರು ಮೂರ್ಖರಲ್ಲ. ಸರ್ಕಾರ ಕೆಲಸ ಅಡ್ಡಿಪಡಿಸುವ ರಾಜ್ಯಪಾಲರಿಗೆ ಹಿನ್ನಡೆ ಉಂಟಾಗಿದೆ. ಸಿಎಂ ಎಂ ಕೆ ಸ್ಟಾಲಿನ್ ಅವರಿಗೆ ಇದರಲ್ಲಿ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿಯುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳ ಮೇಲೆ ಅಸೂಯೆ ಹೊಂದಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ತಡೆಹಿಡಿಯುತ್ತಿದ್ದಾರೆ. ಇದು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಮತ್ತು ಸಾಂವಿಧಾನಿಕ ಸವಲತ್ತಿನ ದುರ್ಬಳಕೆಯಾಗಿದೆ. ನಿಷ್ಕ್ರಿಯತೆ, ಲೋಪ, ವಿಳಂಬ ಮತ್ತು ವಿಫಲತೆಯನ್ನು ತೋರಿಸುತ್ತದೆ ಎಂದು ರಾಜ್ಯಪಾಲರ ಕಾರ್ಯವೈಖರಿಯನ್ನು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಪ್ರಶ್ನಿಸಿತ್ತು. ರಾಜ್ಯಪಾಲರುಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಇದನ್ನೂ ಓದಿ: 'ಮೋದಿ ಸುಳ್ಳಿನ ಜಗದ್ಗುರು': ರಾಹುಲ್​ ಗಾಂಧಿ ಟೀಕಿಸಿದ ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.