ಕರ್ನಾಟಕ

karnataka

ಚಂದ್ರಯಾನ-3 ಯಶಸ್ಸಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಿಜೆಐ ಸಂತಸ; ಇಸ್ರೋಗೆ NASA ಅಧ್ಯಕ್ಷರಿಂದ ಅಭಿನಂದನೆ

By ETV Bharat Karnataka Team

Published : Aug 23, 2023, 9:58 PM IST

Chandrayaan-3 successful: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ಇಸ್ರೋ ಸಾಧನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೊಂಡಾಡಿದ್ದಾರೆ.

Etv Bharat
Etv Bharat

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಇಂದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಮೂಲಕ ಇಸ್ರೋ ಹೊಸ ಇತಿಹಾಸ ಸೃಷ್ಟಿಸಿತು. ಭಾರತೀಯ ವಿಜ್ಞಾನಿಗಳ ಅಭೂತಪೂರ್ವ ಸಾಧನೆಯನ್ನು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾದಿ ಗಣ್ಯಾತಿಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಮೆರಿಕದ ನಾಸಾ ಅಧ್ಯಕ್ಷರೂ ಕೂಡ ಇಸ್ರೋ ಪರಾಕ್ರಮಕ್ಕೆ ತಲೆದೂಗಿದ್ದಾರೆ.

ಇಂದು ಸಂಜೆ 6:04ಕ್ಕೆ ಸರಿಯಾಗಿ ಇಸ್ರೋದ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ ಚಂದ್ರನನ್ನು ಸ್ಪರ್ಶಿಸಿತು. ಈ ಮೂಲಕ ಚಂದ್ರನ ಮೇಲಿಳಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಅಲ್ಲದೇ, ಇದುವರೆಗೂ ಯಾವುದೇ ದೇಶವೂ ತಲುಪದ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸುವ ಮೂಲಕ ಚರಿತ್ರೆ ಬರೆಯಿತು.

ಇದನ್ನೂ ಓದಿ:ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಯ ನೇರಪ್ರಸಾರವನ್ನು ಗೋವಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವೀಕ್ಷಿಸಿ, ''ಇಂದು ಭಾರತ ಇತಿಹಾಸ ನಿರ್ಮಿಸಿದ ದಿನ. ಚಂದ್ರಯಾನ-3 ಮಿಷನ್‌ ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್‌ ಆಗುವುದರೊಂದಿಗೆ ನಮ್ಮ ವಿಜ್ಞಾನಿಗಳು ಇತಿಹಾಸ ನಿರ್ಮಿಸಿದ್ದಾರೆ. ಮಾತ್ರವಲ್ಲದೇ, ಭೂಗೋಳದ ಕಲ್ಪನೆಯನ್ನೂ ಮರುರೂಪಿಸಿದ್ದಾರೆ. ಇದು ನಿಜವಾಗಿಯೂ ಒಂದು ಮಹತ್ವದ ಕ್ಷಣ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

''ಜೀವಮಾನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಈ ರೀತಿಯ ಕ್ಷಣಗಳು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿವೆ. ಇಸ್ರೋ ಮತ್ತು ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಬೇಕೆಂದು ಹಾರೈಸುತ್ತೇನೆ'' ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಟ್ವೀಟ್​ ಮಾಡಿ, "ಇದು ನವಭಾರತದ ಉದಯವನ್ನು ಸೂಚಿಸುವ ಐತಿಹಾಸಿಕ ಸಾಧನೆ! ಈ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ದೇಶದ ದೂರದೃಷ್ಟಿಯ ನಾಯಕತ್ವಕ್ಕೂ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ.

"ನಮ್ಮ ಮಹಾನ್ ರಾಷ್ಟ್ರದ ಪ್ರಜೆಯಾಗಿ ನಾನು ಅಪಾರ ಹೆಮ್ಮೆಯಿಂದ ಇಂದು ಚಂದ್ರನ ಮೇಲೆ ಚಂದ್ರಯಾನ-3ರ ಲ್ಯಾಂಡಿಂಗ್​ ವೀಕ್ಷಿಸಿದೆ'' ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. "ಭಾರತದ ಚಂದ್ರಯಾನ ಯೋಜನೆಯು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಏಕೈಕ ರಾಷ್ಟ್ರ ಭಾರತ. ಇದು ಹೊಸ ಮಾರ್ಗಗಳು ಮತ್ತು ವೈಜ್ಞಾನಿಕ ಸಂಶೋಧನೆ ಮತ್ತು ಅನ್ವೇಷಣೆಗೆ ಸಹಾಯ ಮಾಡುತ್ತದೆ. ಈ ಚಂದ್ರನ ಮೇಲಿನ ಲ್ಯಾಂಡಿಂಗ್ ನಮ್ಮ ರಾಷ್ಟ್ರದ ಮುಂದಿನ ಹಾದಿಯ ಮೈಲಿಗಲ್ಲು ಸೂಚಿಸುತ್ತದೆ. ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ತಂಡವನ್ನು ಅಭಿನಂದಿಸುತ್ತೇನೆ'' ಎಂದು ಸಿಜೆಐ ತಿಳಿಸಿದ್ದಾರೆ.

ನಾಸಾ ಅಧ್ಯಕ್ಷರ ಟ್ವೀಟ್​: ಭಾರತದ ಸಾಧನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಧ್ಯಕ್ಷ ಬಿಲ್ ನೆಲ್ಸನ್ ಅಭಿನಂದಿಸಿದ್ದಾರೆ. "ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್‌ ಮಾಡಿರುವ ಇಸ್ರೋಗೆ ಅಭಿನಂದನೆಗಳು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ 4ನೇ ದೇಶವಾಗಿರುವ ಭಾರತಕ್ಕೂ ಅಭಿನಂದನೆಗಳು. ಈ ಮಿಷನ್​ನಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಾಗಿದೆ'' ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!

ABOUT THE AUTHOR

...view details