ಕರ್ನಾಟಕ

karnataka

ನಿತ್ಯ 50 ಸಾವಿರ ಭಕ್ತರಿಗೆ 'ರಾಮದರ್ಶನ', ತೀಸ್ರಿ ಬಾರ್ ಮೋದಿ ಸರ್ಕಾರ್: ಬಿಜೆಪಿ ಘೋಷಣೆ

By ETV Bharat Karnataka Team

Published : Jan 3, 2024, 10:00 AM IST

ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಬಿಜೆಪಿ ಜನರ ಸೆಳೆಯಲು ಹಲವು ಕಾರ್ಯಸೂಚಿಗಳನ್ನು ಹಾಕಿಕೊಂಡಿದೆ.

ಅಯೋಧ್ಯೆ ರಾಮಮಂದಿರ
ಅಯೋಧ್ಯೆ ರಾಮಮಂದಿರ

ನವದೆಹಲಿ:ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ, ಸಮಾರಂಭಕ್ಕೂ ಮೊದಲು ದೇಶದ ಎಲ್ಲ ಭಕ್ತರನ್ನು ಸಂಪರ್ಕಿಸುವ ಮೂಲಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಯೋಜಿಸಿದೆ. ಪ್ರತಿಯೊಬ್ಬರು ರಾಮಮಂದಿರದ ದರ್ಶನ ಮಾಡಲು ಬಿಜೆಪಿ ಕಾರ್ಯಕರ್ತರು ನೆರವಾಗಬೇಕು ಎಂಬ ನಿರ್ಣಯವನ್ನು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ದಿನದಂದು ಬಿಜೆಪಿ ಕಾರ್ಯಕರ್ತರು ದೇಶದಲ್ಲಿ ದೀಪಾವಳಿಯಂತಹ ವಾತಾವರಣವನ್ನು ಸೃಷ್ಟಿಸಬೇಕು. ದರ್ಶನಕ್ಕಾಗಿ ಅಯೋಧ್ಯೆಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಸಹಾಯ ಮಾಡಲು ಕಾರ್ಯಕರ್ತರು ಬದ್ಧರಾಗಿರಬೇಕು. ಅಯೋಧ್ಯೆ ಭೇಟಿ ವೇಳೆ ಯಾರೊಬ್ಬರೂ ತೊಂದರೆ ಅನುಭವಿಸಬಾರದು. ಭೇದಭಾವವಿಲ್ಲದೆ ದರ್ಶನವನ್ನು ಮಾಡಬೇಕು ಎಂದು ಹೇಳಿದರು.

ನಿತ್ಯ ದರ್ಶನಕ್ಕೆ ಅಭಿಯಾನ:ರಾಮಮಂದಿರ ಉದ್ಘಾಟನೆಯ ಬಳಿಕ ಜನವರಿ 25 ರಿಂದ ಮಾರ್ಚ್ 25 ರವರೆಗೆ ಭಕ್ತರ ದರ್ಶನಕ್ಕಾಗಿ ಬಿಜೆಪಿ ಅಭಿಯಾನ ಹಮ್ಮಿಕೊಳ್ಳಲಿದೆ. ಇದರ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿದಿನ 50 ಸಾವಿರ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಜನರು ತಮ್ಮ ಸ್ವಂತ ಖರ್ಚಿನಲ್ಲಿ ರಾಮಮಂದಿರಕ್ಕೆ ಬಂದರೂ, ವಾಸ್ತವ್ಯ ಮತ್ತಿತರ ವ್ಯವಸ್ಥೆಗೆ ಬಿಜೆಪಿ ನೆರವು ನೀಡಲಿದೆ. ದೇಶದ 430 ವಿವಿಧ ನಗರಗಳಿಂದ ಅಯೋಧ್ಯೆಗೆ ಪ್ರತಿದಿನ ಸುಮಾರು 35 ರೈಲುಗಳನ್ನು ಓಡಿಸಲಾಗುವುದು. ವಿವಿಧ ಮಟ್ಟದಲ್ಲಿ ಸಂಚಾಲಕರನ್ನು ನೇಮಿಸಲಾಗಿದೆ. ರಾಮಮಂದಿರಕ್ಕೆ ಭೇಟಿ ನೀಡಲು ಇಚ್ಛಿಸುವವರು ಬಿಜೆಪಿ ಧ್ವಜವನ್ನು ಬಳಸುವಂತಿಲ್ಲ ಎಂಬ ನಿಯಮವನ್ನು ಬಿಜೆಪಿ ಅಧ್ಯಕ್ಷರು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕ ಸಮರಕ್ಕೆ ಬಿಜೆಪಿ ಹೊಸ ಘೋಷಣೆ:ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಸಭೆಯಲ್ಲಿ 'ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್' ಎಂಬ ಹೊಸ ಘೋಷಣೆಯನ್ನು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂರನೇ ಬಾರಿ ಪ್ರಧಾನಿ ಮೋದಿ ಅವರ ಸರ್ಕಾರ ರಚನೆ ಮತ್ತು 400 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಈ ಘೋಷವಾಕ್ಯ ಸೂಚಿಸುತ್ತದೆ. ಇದು ಜನರನ್ನು ತಲುಪುವ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆ ಕ್ಷೇತ್ರ, ಲೋಕಸಭೆ ಕ್ಷೇತ್ರ ಮಟ್ಟದಲ್ಲಿ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ಸಹ ನೇಮಿಸಲಿದೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದರು. ಶೀಘ್ರವೇ ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವ ಮತ್ತು ಬಿಜೆಪಿ ಅಧ್ಯಕ್ಷರು ಕ್ಲಸ್ಟರ್​ ವ್ಯವಸ್ಥೆಗೆ ಚಾಲನೆ ನೀಡಿಲಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 150 ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ರೈತರಿಗೆ ಇಡಿ ಸಮನ್ಸ್; ಸಚಿವೆ ನಿರ್ಮಲಾ ಸೀತಾರಾಮನ್ ವಜಾಗೊಳಿಸಲು ರಾಷ್ಟ್ರಪತಿಗೆ IRS ಅಧಿಕಾರಿ ಪತ್ರ

ABOUT THE AUTHOR

...view details