ETV Bharat / state

ಜಿಗಣಿಯಲ್ಲಿ ಟೊಯೋಟಾ ಸಂಸ್ಥೆಗೆ ಕೆಐಎಡಿಬಿಯಿಂದ 31.90 ಕೋಟಿ ರೂ. ಅನಗತ್ಯ ಆರ್ಥಿಕ ಲಾಭ: ಸಿಎಜಿ ವರದಿ

ಟೊಯೋಟಾ ಸಂಸ್ಥೆಗೆ ಕೆಐಎಡಿಬಿ ಅನಗತ್ಯವಾಗಿ 31.90 ಕೋಟಿ ರೂಪಾಯಿ ಅನಗತ್ಯ ಆರ್ಥಿಕ ಲಾಭ ಮಾಡಿಕೊಟ್ಟಿರುವ ಬಗ್ಗೆ ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

CAG REPORT File photo
ಸಿಎಜಿ - ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : September 22, 2026 at 8:06 AM IST

1 Min Read
Choose ETV Bharat

ಬೆಂಗಳೂರು: ಜಿಗಣಿಯಲ್ಲಿ ‘ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ’ ಕಂಪನಿಗೆ ಭೂಮಿ ಹಂಚಿಕೆ ಮಾಡುವ ವೇಳೆ ಕೆಐಎಡಿಬಿ 31.90 ಕೋಟಿ ರೂಪಾಯಿ ಅನಗತ್ಯ ಆರ್ಥಿಕ ಲಾಭ ಮಾಡಿಕೊಟ್ಟಿದೆ ಎಂದು ಮಹಾಲೇಖಪಾಲರ ವರದಿ (CAG REPORT) ಹೇಳಿದೆ.

ವಿಧಾನಸಭೆಯಲ್ಲಿ ಸೋಮವಾರ ಮಹಾಲೇಖಪಾಲರ ವರದಿಯನ್ನು ಮಂಡಿಸಲಾಗಿದ್ದು, ಕೆಐಎಡಿಬಿ ಟೊಯೊಟಾ ಸಂಸ್ಥೆಗೆ ಆರ್ಥಿಕ ಲಾಭ ಮಾಡಿರುವ ಬಗ್ಗೆ ಉಲ್ಲೇಖಿಸಿದೆ. ರಸ್ತೆಗೆ ಬಳಕೆ ಮಾಡಿದ ಭೂಮಿಗೆ ಸಂಬಂಧಿಸಿದ ಪರಿಹಾರ ಮತ್ತು ಸೇವಾ ಶುಲ್ಕವಾಗಿ ಪಾವತಿಸಬೇಕಿದ್ದ ₹ 27.07 ಕೋಟಿಯನ್ನು ಕೆಐಎಡಿಬಿ ಮನ್ನಾ ಮಾಡಿದೆ. ಜೊತೆಗೆ ಸೇವಾ ಶುಲ್ಕವನ್ನು ಶೇ. 12 ರಿಂದ ಶೇ. 6ಕ್ಕೆ ಇಳಿಸುವ ಮೂಲಕ ಹೆಚ್ಚುವರಿಯಾಗಿ 4.83 ಕೋಟಿ ರೂ.‌ ಲಾಭವನ್ನು ಕಂಪನಿಗೆ ಮಾಡಿಕೊಟ್ಟಿದೆ ಎಂದು ತಿಳಿಸಿದೆ.

‘ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ’ ಕಂಪನಿ ಜಿಗಣಿ ಮತ್ತು ಬುಕ್ಕಸಾಗರ ಗ್ರಾಮಗಳಲ್ಲಿನ ತನ್ನ ಕಾರ್ಖಾನೆಗೆ ಹೊಂದಿಕೊಂಡಿರುವ 11.3 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹಂಚಿಕೆ ಮಾಡಲು‌ 2019ರಲ್ಲಿ ಕೆಐಎಡಿಬಿಗೆ ಕೋರಿಕೆ ಸಲ್ಲಿಸಿತ್ತು. ಭೂಸ್ವಾಧೀನಕ್ಕಾಗಿ ಕಂಪನಿಯು ಕೆಐಎಡಿಬಿಗೆ ₹22.92 ಕೋಟಿ ಪಾವತಿಸಿತ್ತು. ಮಾರ್ಚ್ 2020ರಲ್ಲಿ ಈ ಭೂಮಿಯನ್ನು ‘ಏಕ ಘಟಕ ಸಂಕೀರ್ಣ’ ಆಗಿ ಬಳಸಲು 15 ವರ್ಷಗಳ ಅವಧಿಗೆ ‘ಗುತ್ತಿಗೆ-ಕಂ-ಮಾರಾಟ’ ಆಧಾರದಲ್ಲಿ ಕಂಪನಿಗೆ ಹಂಚಿಕೆ ಮಾಡಲಾಗಿತ್ತು.

ಬಳಿಕ ಸಂಸ್ಥೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಹೊಸ ಕಟ್ಟಡ ನಿರ್ಮಿಸುವ ಬದಲು ತನ್ನ ಅಸ್ತಿತ್ವದಲ್ಲಿರುವ ಆವರಣದಲ್ಲೇ ಪ್ರಸ್ತಾವಿತ ಯೋಜನೆಯನ್ನು ಕೈಗೊಳ್ಳಲು ಕಂಪನಿ ನಿರ್ಧರಿಸಿತ್ತು. 2021ರಲ್ಲಿ ರಾಜ್ಯ ಸರ್ಕಾರ ಕಂಪನಿಗೆ ತನ್ನ ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು ಹೊಸದಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಸಿರು ವಲಯದ ಅಗತ್ಯ ಹಾಗೂ ಭವಿಷ್ಯದ ವಿಸ್ತರಣೆಗಾಗಿ ಬಳಸಲು ಅನುಮತಿ ನೀಡಿತು. ರಸ್ತೆಗಾಗಿ ಮೀಸಲಾದ ಭೂಮಿಯ ಪರಿಹಾರವನ್ನು ಮನ್ನಾ ಮಾಡುವುದಕ್ಕಾಗಲಿ ಅಥವಾ ಸೇವಾ ಶುಲ್ಕವನ್ನು ಶೇ.12 ರಿಂದ ಶೇ.6ಕ್ಕೆ ಇಳಿಸಲು ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಿರಲಿಲ್ಲ ಎಂದು ಮಹಾಲೇಖಪಾಲರ ವರದಿ ಹೇಳಿದೆ.

ಇದನ್ನೂ ಓದಿ: 2035ರ ವೇಳೆಗೆ ಕರ್ನಾಟಕ 20 ಬಿಲಿಯನ್ ಡಾಲರ್ ಕ್ವಾಂಟಂ ಆರ್ಥಿಕತೆಯ ಗುರಿ ಹೊಂದಿದೆ: ಸಚಿವ ಅಜಯ್ ಧರಂ ಸಿಂಗ್​