ETV Bharat / state

ಶಿವಮೊಗ್ಗ-ಬೆಂಗಳೂರು ಐಎಸ್ ಉಗ್ರ ಸಂಚು ಪ್ರಕರಣ: ಹುಜೈರ್‌ಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಐಎಸ್ ಉಗ್ರ ಸಂಚು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗಳಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್​ಐಎ ಕೋರ್ಟ್ ತೀರ್ಪು ನೀಡಿದೆ.

BENGALURU IS TERROR CONSPIRACY CASE  NIA COURT  IMPRISONMENT
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : September 22, 2026 at 7:31 AM IST

2 Min Read
Choose ETV Bharat

​ಬೆಂಗಳೂರು: ಶಿವಮೊಗ್ಗ ಹಾಗೂ ಬೆಂಗಳೂರಿನ ಐಎಸ್ (Islamic State) ಭಯೋತ್ಪಾದಕ ಜಾಲದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಹುಜೈರ್ ಫರ್ಹಾನ್ ಬೇಗ್ ಅಲಿಯಾಸ್ ಹುಜೈರ್‌ಗೆ 6 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 58 ಸಾವಿರ ರೂಪಾಯಿ ದಂಡ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

2022ರ ಸೆಪ್ಟಂಬರ್ 19ರಂದು ಕರ್ನಾಟಕ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಭಯೋತ್ಪಾದಕ ಜಾಲವು ಅತ್ಯಂತ ರಹಸ್ಯವಾಗಿ ಕಾರ್ಯಾಚರಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.​ ತನಿಖಾ ವರದಿಯ ಪ್ರಕಾರ, ಈ ಮಾಡ್ಯೂಲ್‌ನಲ್ಲಿದ್ದ ಆರೋಪಿಗಳನ್ನು "ಕರ್ನಲ್" ಎಂಬ ಹೆಸರಿನ ಆನ್‌ಲೈನ್ ಹ್ಯಾಂಡ್ಲರ್ ನಿಯಂತ್ರಿಸುತ್ತಿದ್ದ. ಎನ್‌ಐಎ ಅಧಿಕಾರಿಗಳು ತೀವ್ರ ತನಿಖೆ ನಡೆಸಿದಾಗ ಈ "ಕರ್ನಲ್" ಬೇರಾರೂ ಅಲ್ಲ, ವಿವಿಧ ಉಗ್ರ ಕೃತ್ಯಗಳಲ್ಲಿ ಎನ್‌ಐಎಗೆ ಬೇಕಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮಹಮ್ಮದ್ ಶಾಹೀದ್ ಫೈಸಲ್ ಎಂಬುದು ಪತ್ತೆಯಾಗಿತ್ತು.

ಶಾಹೀದ್ ಫೈಸಲ್ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ವಿಸ್ತರಿಸಲು ಹಾಗೂ ಉಗ್ರ ಸಿದ್ಧಾಂತವನ್ನು ಪಸರಿಸಲು ಸ್ಥಳೀಯ ಯುವಕರನ್ನು ಬ್ರೈನ್ ವಾಶ್ ಮಾಡಿ ಜಾಲಕ್ಕೆ ಸೆಳೆಯುತ್ತಿದ್ದ. ಈಗ ​ಶಿಕ್ಷೆಗೆ ಗುರಿಯಾಗಿರುವ ಹುಜೈರ್ ಫರ್ಹಾನ್ ಬೇಗ್‌ನನ್ನು ಸಹ-ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಉಗ್ರವಾದದ ಕಡೆಗೆ ಪ್ರಚೋದಿಸಿ ಜಾಲಕ್ಕೆ ಸೇರಿಸಿಕೊಂಡಿದ್ದರು. ತದನಂತರ, ಮಾಜ್ ಮುನೀರ್ ನೀಡಿದ ನಿರ್ದೇಶನದಂತೆ ಹುಜೈರ್ ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಸುರಕ್ಷಿತ ಅಡಗುದಾಣದ ವ್ಯವಸ್ಥೆ ಮಾಡಿಕೊಟ್ಟಿದ್ದ. ಈ ಅಡಗುದಾಣದ ನಿರ್ವಹಣೆಗೆ ಹಣಕಾಸಿನ ನೆರವು ಸಹ ವಿಶಿಷ್ಟ ರೀತಿಯಲ್ಲಿ ಹರಿದುಬಂದಿತ್ತು. ಆನ್‌ಲೈನ್ ಹ್ಯಾಂಡ್ಲರ್ ರವಾನಿಸುತ್ತಿದ್ದ ಹಣವನ್ನು ಮಾಜ್ ಮುನೀರ್ ಮೂಲಕ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಪಡೆಯಲಾಗುತ್ತಿತ್ತು. ಹುಜೈರ್ ಈ ಹಣವನ್ನು ತನ್ನ ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ಬಳಿಕ ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಅಡಗುದಾಣದ ವೆಚ್ಚಗಳಿಗೆ ಬಳಸುತ್ತಿದ್ದ ಎಂದು ಎನ್​ಐಎ ಮೂಲಗಳು ತಿಳಿಸಿವೆ.

​ಈ ಪ್ರಕರಣದಲ್ಲಿ ಎನ್‌ಐಎ ಇದುವರೆಗೆ ಒಟ್ಟು 12 ಆರೋಪಿಗಳ ವಿರುದ್ಧ 4 ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪೈಕಿ ಹುಜೈರ್ ಸೇರಿದಂತೆ ಒಟ್ಟು ಮೂವರು ಆರೋಪಿಗಳಿಗೆ ಈಗಾಗಲೇ ತಲಾ 6 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಆನ್‌ಲೈನ್ ಹ್ಯಾಂಡ್ಲರ್ ಮಹಮ್ಮದ್ ಶಾಹೀದ್ ಫೈಸಲ್‌ನ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮದ್ರಾಸ್​​ ರೆಜಿಮೆಂಟ್​ನಲ್ಲಿ ಶಸ್ತ್ರಾಸ್ತ್ರ ಕಳವು ಕೇಸ್: 4 ದಿನವಾದರೂ ಒಂದೂ ಸುಳವಿಲ್ಲ, ಅಖಾಡಕ್ಕಿಳಿದ NIA