ETV Bharat / bharat

ಐಐಟಿ ಮುಂಬೈ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಡೀನ್ ಅಮಾನತು!

ಮುಂಬೈ ಅಪರಾಧ ವಿಭಾಗವು ಸಾಹಿಲ್ ವಾಕೋಡೆ ಅವರ ಸಾವಿನ ಕುರಿತು ತನಿಖೆ ಆರಂಭಿಸಿದ್ದು, ವಿಚಾರಣೆಗಾಗಿ ಶೀಘ್ರದಲ್ಲೇ ವಿವಿಧ ವ್ಯಕ್ತಿಗಳಿಗೆ ಸಮನ್ಸ್ ಜಾರಿಗೊಳಿಸಲಿದೆ.

IIT Bombay
ಐಐಟಿ ಮುಂಬೈ (ETV Bharat)
author img

By ETV Bharat Karnataka Team

Published : September 21, 2026 at 8:44 PM IST

2 Min Read
Choose ETV Bharat

ಮುಂಬೈ: ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ನಂತರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸೋಮವಾರದಂದು ಪ್ರೊ. ಸೂರ್ಯನಾರಾಯಣ ಡೂಲ್ಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಡೀನ್ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಸಂಸ್ಥೆಯ ನಿರ್ದೇಶಕ ಪ್ರೊ. ಶಿರೀಷ್ ಕೇದಾರೆ ಅವರು ಅಧಿಕೃತ ಇಮೇಲ್ ಮೂಲಕ, ಪ್ರಸ್ತುತ ಡೀನ್ (ಆಡಳಿತಾತ್ಮಕ ವ್ಯವಹಾರಗಳು) ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಡೂಲ್ಲಾ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಗಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ ಪ್ರೊ. ಡೂಲ್ಲಾ ಅವರು ಡೀನ್ (ವಿದ್ಯಾರ್ಥಿ ವ್ಯವಹಾರಗಳು) ಆಗಿ ಕಾರ್ಯನಿರ್ವಹಿಸಿದ್ದರು.

ಅಧಿಕಾರಿಗಳ ಪ್ರಕಾರ, 'ಎನರ್ಜಿ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್' ವಿಭಾಗದ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಸಾಹಿಲ್ ರವೀಂದ್ರ ವಾಕೋಡೆ (22), ಶುಕ್ರವಾರ ಸಂಜೆ ಐಐಟಿ ಬಾಂಬೆಯ ಪವಾಯಿ ಕ್ಯಾಂಪಸ್‌ನಲ್ಲಿರುವ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೆಮಿಸ್ಟರ್ ಮಧ್ಯಂತರ ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದಾಗ ಅವನು ಸಿಕ್ಕಿಬಿದ್ದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿತ್ತು.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯವರಾದ ವಾಕೋಡೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಂಸ್ಥಿಕ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯಕ್ಕೆ ಒಳಗಾಗಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ. ವಿದ್ಯಾರ್ಥಿ ಆತ್ಮಹತ್ಯೆ ವಿರುದ್ಧ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ವಾಕೋಡೆ ಅವರು ತೀವ್ರ ಒತ್ತಡ ಹಾಗೂ ಕಾಲೇಜಿನಿಂದ ಅಮಾನತು ಮಾಡುವ ಬೆದರಿಕೆ ಎದುರಿಸುತ್ತಿದ್ದರು ಎಂದು ಪ್ರತಿಭಟನಾಕಾರರು ಹೇಳಿದ್ದರು.

ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ, ಪೊಲೀಸರು ಶನಿವಾರ 'ಭಾರತೀಯ ನ್ಯಾಯ ಸಂಹಿತೆ' ಮತ್ತು 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ'ಯ ನಿಬಂಧನೆಗಳ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರೊಫೆಸರ್ ಡೂಲ್ಲಾ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆ ಬೆನ್ನಲ್ಲೇ ಪ್ರೊಫೆಸರ್ ಡೂಲ್ಲಾ ಅವರ ರಾಜೀನಾಮೆಗೆ ಆಗ್ರಹಿಸಿ ವಾರಾಂತ್ಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದರು.

ಪ್ರೊಫೆಸರ್ ಡೂಲ್ಲಾ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಡೀನ್ ಹುದ್ದೆಯಿಂದ ಅಮಾನತುಗೊಳಿಸಿರುವುದಾಗಿ ಐಐಟಿ - ಬಾಂಬೆ ಸೋಮವಾರ ತನ್ನ 'X' (ಟ್ವಿಟರ್) ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದೆ. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನಿರ್ದೇಶಕರಿಗೆ ಸೋಮವಾರ ಮಧ್ಯಾಹ್ನದವರೆಗೆ ಗಡುವು ನೀಡಿದ್ದರು. ಈ ಹಿನ್ನೆಲೆ ನಿರ್ದೇಶಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ:

ಸಿಸಿಟಿವಿ ಮೂಲಕ 105 ಕೇಸ್​ ಪತ್ತೆ: ರಾಮ ಮಂದಿರ ದೇಣಿಗೆ ಕಳವು ಪ್ರಕರಣ ಕುರಿತು ಸುಪ್ರೀಂ ಕೋರ್ಟ್​ಗೆ ಎಸ್​ಐಟಿ ವರದಿ

9 ತಿಂಗಳ ಹಸುಳೆಯನ್ನು ಹೆಗಲ ಮೇಲೆ ಹೊತ್ತು ಪಾಠ ಬೋಧಿಸಲು ನದಿ ದಾಟುವ ಶಿಕ್ಷಕಿ!