ಕಾಶ್ಮೀರದಲ್ಲಿ ಸಚಿನ್ ತೆಂಡೂಲ್ಕರ್; ಪುಲ್ವಾಮಾ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಭೇಟಿ

By ETV Bharat Karnataka Team

Published : Feb 17, 2024, 3:59 PM IST

thumbnail

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಾರತ ತಂಡದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಶನಿವಾರ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ದಿಢೀರ್ ಭೇಟಿ ಮೂಲಕ​ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಲಿಟಲ್ ಮಾಸ್ಟರ್, ಪುಲ್ವಾಮಾ ಬ್ಯಾಟ್ ತಯಾರಿಕಾ ಕಾರ್ಖಾನೆಗೂ ಭೇಟಿ ಕೊಟ್ಟರು. ಸಚಿನ್​ ಅವರಿಗೆ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಪುತ್ರಿ ಸಾರಾ ತೆಂಡೂಲ್ಕರ್ ಸಹ ಸಾಥ್​ ನೀಡಿದ್ದರು. 

ಜಮ್ಮು-ಶ್ರೀನಗರ ಹೆದ್ದಾರಿಯ ಪಕ್ಕದಲ್ಲಿರುವ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಟೌನ್‌ಶಿಪ್‌ನಲ್ಲಿರುವ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಸಚಿನ್​ ತೆಂಡೂಲ್ಕರ್ ಭೇಟಿ ನೀಡಿ, ಅಲ್ಲಿ ಬ್ಯಾಟ್​ಗಳನ್ನು​ ಪರಿಶೀಲಿಸಿದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ.

ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಆಗಮಿಸಿದ ಖ್ಯಾತ ಕ್ರಿಕೆಟಿಗ ಸಚಿನ್ ಅವರನ್ನು ಅಲ್ಲಿನ ಕುಶಲಕರ್ಮಿಗಳು ಖುಷಿಯಿಂದ ಬರಮಾಡಿಕೊಂಡರು. ನಂತರ ಕಾರ್ಖಾನೆಯಲ್ಲಿ ಒಂದು ಸುತ್ತು ಹಾಕಿದ ಸಚಿನ್​, ಬ್ಯಾಟ್​ ತಯಾರಿಕಾ ಪ್ರಕ್ರಿಯೆಯನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸಿದರು. ಅಲ್ಲದೇ, ನುರಿತ ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ, ಕ್ರಿಕೆಟ್ ಬ್ಯಾಟ್​ ರಚಿಸುವಲ್ಲಿನ ಕುಶಲತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಕಾಶ್ಮೀರವು ಉತ್ತಮ ಗುಣಮಟ್ಟದ ಕ್ರಿಕೆಟ್ ಬ್ಯಾಟ್‌ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ.

ಮತ್ತೊಂದೆಡೆ, ತಮ್ಮ ಈ ಕಾಶ್ಮೀರದ ಭೇಟಿ ಸಂದರ್ಭದಲ್ಲಿ ತೆಂಡೂಲ್ಕರ್, ಪ್ಯಾರಾ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುವ ಪ್ರತಿಭಾವಂತ ಅಮೀರ್ ಬಗ್ಗೆ ಸಚಿನ್​ ಇತ್ತೀಚೆಗೆ ಪೋಸ್ಟ್​ವೊಂದನ್ನು ಶೇರ್​ ಮಾಡಿ, ನಾನು ಒಂದು ದಿನ ಆತನನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಳಗ್ಗೆ ಭಾರತ ತಂಡಕ್ಕೆ ಪಾದಾರ್ಪಣೆಯ ಆನಂದ ಭಾಷ್ಪ; ಸಂಜೆ ದಾಖಲೆಯ ಅರ್ಧಶತಕ ಸಿಡಿಸಿ ಸಂಭ್ರಮ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.