ETV Bharat / technology

ಚಂದ್ರ ಶಿಲೆಗಳ ವಿಶ್ಲೇಷಣಾ ಮಾಹಿತಿ ರವಾನಿಸಿದ ಜಪಾನ್​ ನೌಕೆ: ಚಂದ್ರನ ಉಗಮ ಪತ್ತೆಗೆ ಸಹಕಾರಿ

author img

By ETV Bharat Karnataka Team

Published : Feb 15, 2024, 12:29 PM IST

ಚಂದ್ರನ ಅನ್ವೇಷಣೆಗಾಗಿ ಉಡಾವಣೆ ಮಾಡಲಾದ ಜಪಾನಿನ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲಿನ 10 ಬಂಡೆಗಳ ಮಾಹಿತಿ ಸಂಗ್ರಹಿಸಿದ್ದು, ಚಂದ್ರನ ಮೂಲ ತಿಳಿಯಲು ಈ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ ಎಂದು ಈ ಯೋಜನಾ ವ್ಯವಸ್ಥಾಪಕರು ಹೇಳಿದ್ದಾರೆ.

Japan's Space Agency to Find Out Moon's Origin? Says It May Now Have Clues
Japan's Space Agency to Find Out Moon's Origin? Says It May Now Have Clues

ಟೋಕಿಯೊ(ಜಪಾನ್): ಚಂದ್ರನ ಮೇಲಿಳಿದಿರುವ ಜಪಾನ್​ನ ಮಾನವರಹಿತ ಬಾಹ್ಯಾಕಾಶ ನೌಕೆಯು 10 ಚಂದ್ರ ಶಿಲೆಗಳನ್ನು ವಿಶ್ಲೇಷಿಸುವ ಡೇಟಾ ಸೆರೆಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಇದು ನಿರೀಕ್ಷೆಗಿಂತ ಹೆಚ್ಚಿನ ಸಾಧನೆಯಾಗಿದ್ದು, ಈ ಮಾಹಿತಿಯು ಚಂದ್ರನ ಮೂಲದ ಬಗ್ಗೆ ಸುಳಿವು ನೀಡಲು ಸಹಾಯಕವಾಗಲಿದೆ ಎಂದು ಜಪಾನ್​​ನ ಬಾಹ್ಯಾಕಾಶ ಸಂಸ್ಥೆ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

SLIM ಎಂದು ಕರೆಯಲಾಗುವ, ಚಂದ್ರನ ಮೇಲಿನ ಬಂಡೆಯ ಸಂಯೋಜನೆಯನ್ನು ಅಧ್ಯಯನ ಮಾಡಲು ಕಳೆದ ತಿಂಗಳು ಚಂದ್ರನ ಮೇಲೆ ಇಳಿದ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ ಲ್ಯಾಂಡರ್ ನಾಲ್ಕು ದಿನಗಳ ಕಾಲ ತಮ್ಮ ಮಲ್ಟಿ - ಬ್ಯಾಂಡ್ ಸ್ಪೆಕ್ಟ್ರಲ್ ಕ್ಯಾಮೆರಾ ಬಳಸಿ ಚಂದ್ರನ ಬಂಡೆಗಳನ್ನು ಪರೀಕ್ಷಿಸುವ ಕೆಲಸ ಮಾಡಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್​ಪ್ಲೊರೇಶನ್ ಏಜೆನ್ಸಿಯ ಯೋಜನಾ ವ್ಯವಸ್ಥಾಪಕ ಶಿನಿಚಿರೊ ಸಕೈ ಹೇಳಿದ್ದಾರೆ.

ಜಪಾನ್ ಪಾಲಿಗೆ ಈ ಚಂದ್ರಯಾನ ಮೊದಲನೆಯದಾಗಿದೆ. ಜಪಾನ್​ನ ಬಾಹ್ಯಾಕಾಶ ನೌಕೆಯು ಜನವರಿ 20 ರಂದು ಅತ್ಯಂತ ನಿಖರವಾಗಿ ಚಂದ್ರನ ಮೇಲೆ ಸ್ಪರ್ಶ ಮಾಡಿತ್ತು. ಆರಂಭದಲ್ಲಿ ಅದು ತಪ್ಪು ದಾರಿಯಲ್ಲಿ ಇಳಿದಿತ್ತು ಮತ್ತು ಅದರ ಸೌರ ಫಲಕಗಳು ಸೂರ್ಯನನ್ನು ನೋಡಲು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಭೂಮಿಯೊಂದಿಗಿನ ಸಂಕ್ಷಿಪ್ತ ಸಂಪರ್ಕದ ನಂತರ ಫಲಕಗಳನ್ನು ಆಫ್ ಮಾಡಲಾಗಿತ್ತು. ಆದರೆ ಆಶ್ಚರ್ಯಕರವಾಗಿ ಎಂಟನೇ ದಿನದಂದು ನೌಕೆಯು ಕೆಲಸ ಮಾಡಲು ಪ್ರಾರಂಭಿಸಿತ್ತು ಮತ್ತು ಭೂಮಿಯ ಮೇಲಿನ ಜಾಕ್ಸಾದಲ್ಲಿನ ಕಮಾಂಡ್ ಸೆಂಟರ್​ನೊಂದಿಗೆ ಸಂವಹನವನ್ನು ಯಶಸ್ವಿಯಾಗಿ ಮರುಸ್ಥಾಪಿಸಲು ಅನುವು ಮಾಡಿಕೊಟ್ಟಿತ್ತು.

SLIM ಅನ್ನು ಪುನಃ ಸಕ್ರಿಯಗೊಳಿಸಿದ ಕೂಡಲೇ ಅದು ಕಳುಹಿಸಿರುವ ಕಪ್ಪು- ಬಿಳುಪು ಚಿತ್ರಗಳು ಆರು ಬಂಡೆಗಳನ್ನು ಒಳಗೊಂಡಂತೆ ಉಬ್ಬಿದ ಚಂದ್ರನ ಮೇಲ್ಮೈಯನ್ನು ತೋರಿಸಿದೆ. ಈ ನೌಕೆ ಒಟ್ಟಾರೆಯಾಗಿ 10 ಬಂಡೆಗಳಿಂದ ಡೇಟಾ ಸಂಗ್ರಹಿಸಿದೆ. ಈ ಬಂಡೆಗಳಿಗೆ "ಅಕಿಟೈನು", "ಬೀಗಲ್" ಮತ್ತು "ಶಿಬೈನು" ಎಂಬ ನಾಯಿ ತಳಿಗಳ ಹೆಸರು ನಾಮಕರಣ ಮಾಡಲಾಗಿದೆ.

"ಶಿಲಾ ವಿಶ್ಲೇಷಣೆಯು ಚಂದ್ರನ ಉಗಮದ ಬಗ್ಗೆ ಮಾಹಿತಿ ನೀಡಲಿದೆ ಎಂದು ನಾವು ಭಾವಿಸುತ್ತೇವೆ" ಎಂದು ಸಕೈ ಹೇಳಿದರು. ಚಂದ್ರನ ಶಿಲೆಗಳು ಮತ್ತು ಭೂಮಿಯ ಖನಿಜ ಸಂಯೋಜನೆಗಳನ್ನು ಹೋಲಿಸುವ ಮೂಲಕ, ಬಂಡೆಗಳು ಸಾಮಾನ್ಯ ಅಂಶಗಳನ್ನು ಹೊಂದಿವೆಯೇ ಎಂದು ಕಂಡು ಹಿಡಿಯಬಹುದು ಎಂದು ಅವರು ಹೇಳಿದರು. "ದೈತ್ಯ - ಪರಿಣಾಮ" (giant-impact) ಸಿದ್ಧಾಂತದ ಪ್ರಕಾರ, ಭೂಮಿಯು ಮತ್ತೊಂದು ಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮತ್ತು ಅವುಗಳಿಂದ ಸಣ್ಣ ದ್ರವ್ಯರಾಶಿಗಳು ತಿರುಗುವ ಪರಿಣಾಮವಾಗಿ ಚಂದ್ರ ರೂಪುಗೊಂಡಿದ್ದಾನೆ ಎಂದು ನಂಬಲಾಗಿದೆ.

SLIM ಕೇವಲ ಒಂದು ಬಂಡೆಯನ್ನು ಮಾತ್ರ ಅಧ್ಯಯನ ಮಾಡಬಹುದು ಮತ್ತು ವಿಶ್ಲೇಷಿಸಬಹುದು ಎಂದು ಜಾಕ್ಸಾ ತಂಡ ನಿರೀಕ್ಷೆ ಮಾಡಿತ್ತು. ಆದರೆ, ಅದು 10 ಬಂಡೆಗಳ ವಿಶ್ಲೇಷಣಾ ಡೇಟಾ ಕಳುಹಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಇಷ್ಟೊಂದು ಮಾಹಿತಿ ಲಭ್ಯವಾದ ನಂತರ ತಂಡವು ಚಂದ್ರನ ಮೂಲವನ್ನು ಅಧ್ಯಯನ ಮಾಡಲು ಮುಂದಾಗಿದೆ.

ಇದನ್ನೂ ಓದಿ : ಕಾರಣವಿಲ್ಲದಿದ್ದರೂ ಸ್ಮಾರ್ಟ್​ಫೋನ್ ಕೈಗೆತ್ತಿಕೊಳ್ಳುವ ಅಭ್ಯಾಸ ನಿಮಗಿದೆಯಾ; ಇದಕ್ಕೆ ತಜ್ಞರು ಹೇಳುವುದೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.