10 ವರ್ಷಗಳಲ್ಲಿ ಐಪೋನ್​ ಮಾರಾಟದಿಂದ $1.65 ಟ್ರಿಲಿಯನ್ ಆದಾಯ ಗಳಿಸಿದ ಆ್ಯಪಲ್

author img

By ETV Bharat Karnataka Team

Published : Feb 20, 2024, 12:46 PM IST

In 10 years, Apple earned $1.65 trillion from iPhone sales: Report

ಆ್ಯಪಲ್​ ಕಂಪನಿಯು ಕಳೆದ 10 ವರ್ಷಗಳ ಅವಧಿಯಲ್ಲಿ ಐಫೋನ್​ಗಳ ಮಾರಾಟದಿಂದ 1.65 ಟ್ರಿಲಿಯನ್ ಡಾಲರ್ ಆದಾಯ ಗಳಿಸಿದೆ.

ನವದೆಹಲಿ: ಟೆಕ್ ದೈತ್ಯ ಆ್ಯಪಲ್ ಕಳೆದ ದಶಕದಲ್ಲಿ ಐಫೋನ್ ಮಾರಾಟದಿಂದ 1.65 ಟ್ರಿಲಿಯನ್ ಡಾಲರ್ ಆದಾಯ ಗಳಿಸಿದೆ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ. ಕಳೆದ ವರ್ಷ ಆ್ಯಪಲ್ ವಿಶ್ವಾದ್ಯಂತ 235 ಮಿಲಿಯನ್ ಐಫೋನ್​ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದಲ್ಲಿ ಎಲ್ಲ ಸ್ಮಾರ್ಟ್​ಫೋನ್ ಬಳಕೆದಾರರ ಪೈಕಿ ಶೇ 35ರಷ್ಟು ಜನ ಐಫೋನ್​ ಬಳಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಮೂಲಕ ಕಂಪನಿಯ ಸಂಚಿತ ಮಾರಾಟ ಆದಾಯವು ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಅಲ್ಲದೇ ಆ್ಯಪಲ್​ನ ಐಫೋನ್ 2023 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಬಳಸಲಾದ ಸ್ಮಾರ್ಟ್​ಪೋನ್ ಆಗಿದೆ.

AltIndex ಡಾಟ್​ com ನೀಡಿದ ಅಂಕಿ-ಅಂಶಗಳ ಪ್ರಕಾರ, ಮಾರಾಟ ಸಂಖ್ಯೆಗಳನ್ನು ನೋಡಿದರೆ ಆ್ಯಪಲ್ 2013 ರಲ್ಲಿ 153.4 ಮಿಲಿಯನ್ ಐಪೋನ್​ಗಳನ್ನು ಮಾರಾಟ ಮಾಡಿತ್ತು. ಈ ಸಂಖ್ಯೆ 2023 ರಲ್ಲಿ 235 ಮಿಲಿಯನ್​ಗೆ ಏರಿಕೆಯಾಗಿದೆ. ಅಂದರೆ ಒಂದು ದಶಕದಲ್ಲಿ ಐಫೋನ್​ಗಳ ಮಾರಾಟ ಶೇಕಡಾ 53 ರಷ್ಟು ಹೆಚ್ಚಾಗಿದೆ.

ಕಳೆದ ದಶಕದಲ್ಲಿ ಆ್ಯಪಲ್​ನ ಒಟ್ಟು ಐಫೋನ್ ರಫ್ತು 2.3 ಬಿಲಿಯನ್​ಗೆ ತಲುಪಿದೆ. ಇದಕ್ಕೆ ಹೋಲಿಸಿದರೆ ಆ್ಯಪಲ್​​ನ ಅತಿದೊಡ್ಡ ಪ್ರತಿಸ್ಪರ್ಧಿ ಸ್ಯಾಮ್​ಸಂಗ್​ ಈ ಅವಧಿಯಲ್ಲಿ 800 ಮಿಲಿಯನ್​​ಗೂ ಹೆಚ್ಚು ಸ್ಮಾರ್ಟ್​ಪೋನ್​ಗಳನ್ನು ಮಾರಾಟ ಮಾಡಿದೆ.

"2007 ರಲ್ಲಿ ಮಾರುಕಟ್ಟೆಗೆ ಬಂದಾಗಿನಿಂದ ಐಫೋನ್ ಆ್ಯಪಲ್​ನ ಅತ್ಯಂತ ಪ್ರಮುಖ ಉತ್ಪನ್ನವಾಗಿದ್ದು, ಕಂಪನಿಯ ಆದಾಯದಲ್ಲಿ ಅದರ ಪಾಲು ನಿರಂತರವಾಗಿ ಬೆಳೆಯುತ್ತಿದೆ" ಎಂದು ವರದಿ ಹೇಳಿದೆ. 2009 ರ ಮೊದಲ ತ್ರೈಮಾಸಿಕದಲ್ಲಿ ಐಫೋನ್ ಮಾರಾಟವು ಆ್ಯಪಲ್​ನ ಒಟ್ಟು ಆದಾಯದ ಕಾಲು ಭಾಗದಷ್ಟಿತ್ತು. ಈ ಪ್ರಮಾಣ 2024 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 58 ಕ್ಕೆ ಏರಿದೆ.

ಸ್ಟ್ಯಾಟಿಸ್ಟಾ ಮತ್ತು ಕಂಪನಿಯ ಅಧಿಕೃತ ಮಾಹಿತಿ ಪ್ರಕಾರ, ಐಫೋನ್ ವಾರ್ಷಿಕ ಮಾರಾಟದ ಆದಾಯವು ಕಳೆದ 10 ವರ್ಷಗಳಲ್ಲಿ ಪ್ರಾಯೋಗಿಕವಾಗಿ ದ್ವಿಗುಣಗೊಂಡಿದೆ. 2014ರ ಹಣಕಾಸು ವರ್ಷದಲ್ಲಿ ಐಫೋನ್ ಮಾರಾಟದಿಂದ ಕಂಪನಿ 101.9 ಬಿಲಿಯನ್ ಡಾಲರ್ ಗಳಿಸಿತ್ತು. ನಾಲ್ಕು ವರ್ಷಗಳ ನಂತರ, ಈ ಸಂಖ್ಯೆ 166.2 ಬಿಲಿಯನ್ ಡಾಲರ್​ಗೆ ಏರಿಕೆಯಾಗಿತ್ತು ಎಂದು AltIndex ಡಾಟ್ com ವರದಿ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ಅಲೆಯ ಸಮಯದಲ್ಲಿ ವಿಶ್ವಾದ್ಯಂತ ಗ್ರಾಹಕರು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದ ಸಮಯದಲ್ಲಿ 2019 ಮತ್ತು 2020 ರ ಹಣಕಾಸು ವರ್ಷದಲ್ಲಿ ಆ್ಯಪಲ್​​ನ ಆದಾಯ ಗಣನೀಯವಾಗಿ ಕುಸಿತವಾಗಿತ್ತು. ಇದರ ನಂತರ ಐಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ ಸುಮಾರು ಶೇ 40 ರಷ್ಟು ಏರಿಕೆಯಾಗಿದೆ ಮತ್ತು 2021 ರ ಹಣಕಾಸು ವರ್ಷದಲ್ಲಿ 191.9 ಬಿಲಿಯನ್ ಡಾಲರ್​ಗೆ ತಲುಪಿದೆ.

ಇದನ್ನೂ ಓದಿ : 'GPT ಪದಕ್ಕೆ ಪೇಟೆಂಟ್​ ನೀಡಲಾಗದು': Open AI ಅರ್ಜಿ ತಿರಸ್ಕರಿಸಿದ ಟ್ರೇಡ್​ಮಾರ್ಕ್ ಕಚೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.