ETV Bharat / state

ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರ; 10 ವರ್ಷದಿಂದ ಗ್ರಾಮಸ್ಥರ ದಾಹ ತೀರಿಸುತ್ತಿರುವ ರೈತ! - WATER SCARCITY

author img

By ETV Bharat Karnataka Team

Published : May 13, 2024, 5:30 PM IST

Updated : May 13, 2024, 7:17 PM IST

ನೀರಿನ ಸಮಸ್ಯೆಯಿಂದ ಪರದಾಡುತ್ತಿರುವ ಬಡಾಲ ಅಂಕಲಗಿ ಗ್ರಾಮಸ್ಥರಿಗೆ ಬೆಳಗಾವಿ ಜಿಲ್ಲಾಡಳಿತ ಇಲ್ಲಿಯವರೆಗೆ ಒಂದೇ ಒಂದು ಟ್ಯಾಂಕರ್ ನೀರು ಸಹ ಪೂರೈಸಿಲ್ಲ. ಆದರೆ ಇಡೀ ಊರಿಗೆ ಬಸವಂತಪ್ಪ ನಾಯಿಕ ಎಂಬ ರೈತ ಉಚಿತವಾಗಿ ನೀರು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Badala Ankalagi Villagers
ರೈತನ ಹೊಲದಿಂದ ನೀರು ತರುತ್ತಿರುವ ಬಡಾಲ ಅಂಕಲಗಿ ಗ್ರಾಮಸ್ಥರು (ETV Bharat)

ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ (ETV Bharat)

ಬೆಳಗಾವಿ: ಪ್ರಭಾವಿ ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ನೀರಿಗಾಗಿ ನಿತ್ಯ ಖಾಸಗಿ ಜಮೀನಿನಲ್ಲಿರುವ ಬೋರ್​ವೆಲ್ ಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಅಲ್ಲದೇ ಈ ಗ್ರಾಮದ ರೈತರೊಬ್ಬರು ಊರಿನವರಿಗೆ ಉಚಿತವಾಗಿ ನೀರು ಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಅದರಲ್ಲೂ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಇದೆ. ಈ ನಡುವೆ ಇಡೀ ಊರಿಗೆ ಭಗೀರಂಥನಾಗಿರುವ ಬಸವಂತಪ್ಪ ನಾಯಿಕ್ ಎಂಬುವರು ಸದ್ಯ ಮಾನವೀಯ ದೃಷ್ಟಿಯಿಂದ ನೀರು ಕೊಡ್ತಿದ್ದಾರೆ.

ಬತ್ತಿದ ಜಲಮೂಲಗಳು: ಊರಲ್ಲಿರುವ ಕೆರೆ, ಬಾವಿ ಹಾಗೂ ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿಗೆ ಮೂಲವಾಗಿದ್ದ ಬೋರ್​ವೆಲ್​ಗಳಲ್ಲೂ ನೀರು ಸಿಗುತ್ತಿಲ್ಲ. ಹೀಗಾಗಿ ಜನ ಕುಡಿಯುವ ನೀರಿಗಾಗಿ ಪರದಾಡ್ತಿದ್ದು ಊರ ಹೊರಗಿರುವ ಖಾಸಗಿ ಬೋರ್​ವೆಲ್​​ಗೆ ಬಂದು ಜನ ನೀರು ತುಂಬಿಕೊಂಡು ಹೋಗ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹುಗ್ರಾಮ ಕುಡಿಯುವ ನೀರು ಹಾಗೂ ಜಲಜೀವನ್ ಮಿಷನ್ ನಂಥ ಯೋಜನೆಗಳನ್ನು ಜಾರಿ ಮಾಡಿ ಅದಕ್ಕಾಗಿ ಕೋಟಿ ಕೋಟಿ ಅನುದಾನ ಖರ್ಚು ಮಾಡಿದ್ರೂ ಸಹ ಇಲ್ಲಿ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗ್ತಿಲ್ಲ. ಬಡಾಲ ಅಂಕಲಗಿ ಗ್ರಾಮದಿಂದ ಕೇವಲ 6 ಕಿ.ಮೀ. ಅಂತರದಲ್ಲಿ ಮಲಪ್ರಭಾ ನದಿ ಹರಿದಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ನದಿಯಿಂದ ನೀರೆತ್ತಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ.

ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಬಡಾಲ ಅಂಕಲಗಿ ಗ್ರಾಮಕ್ಕೆ ಸಧ್ಯ ಒಂದೇ ಒಂದು ಖಾಸಗಿ ಬೋರ್​ವೆಲ್​ ಮೇಲೆ ಅವಲಂಬನೆ ಆಗಿದೆ. ಈವರೆಗೆ ಗ್ರಾಮಕ್ಕೆ ಜಿಲ್ಲಾಡಳಿತ ನೀರಿನ ಟ್ಯಾಂಕರ್ ಸಹ ಒದಗಿಸಿಲ್ಲ. ಹೀಗಾಗಿ ಜನ ಕುಡಿಯುವ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ‌ನಿರ್ಮಾಣ ಆಗಿದೆ.

10 ವರ್ಷಗಳಿಂದ ಉಚಿತವಾಗಿ ನೀರು ಪೂರೈಕೆ: 10 ವರ್ಷಗಳಿಂದ ನಿರಂತರವಾಗಿ ಗ್ರಾಮದ ಜನರಿಗೆ ನೀರು ಕೊಡುತ್ತಿದ್ದೇವೆ. ಬೆಳಗಿನ 6 ಗಂಟೆಗೆ ಶುರುವಾದರೆ ರಾತ್ರಿ 10 ಗಂಟೆವರೆಗೂ ಜನ ನೀರು ಒಯ್ಯುತ್ತಾರೆ. ನಾವು ನೀರು ಕೊಡದಿದ್ದರೆ ಜನರಿಗೆ ನೀರೇ ಇಲ್ಲ. ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 900 ಕೋಟಿ ಅನುದಾನವನ್ನು ಗ್ರಾಮೀಣ ಕ್ಷೇತ್ರದಲ್ಲಿ ಕೆರೆ ತುಂಬಿಸಲು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಅದು ಪೂರ್ತಿಯಾದರೆ, ಜಲಮೂಲಗಳಿಗೆ ಜೀವ ಬರಲಿದೆ. ನಮ್ಮೂರ ಜನ ದೂರದಿಂದ ನೀರು ಹೊರುವುದನ್ನು ತಪ್ಪಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಖಾಸಗಿ ಬೋರ್​ವೆಲ್ ಮಾಲೀಕ ಬಸವಂತಪ್ಪ ನಾಯಿಕ್ ತಿಳಿಸಿದ್ದಾರೆ.

ಜನಪ್ರತಿನಿಧಿಗಳಿಗೆ ಸಮಸ್ಯೆ ಕೇಳಿಸುತ್ತಿಲ್ಲ: ಗ್ರಾಮದ ಮಹಿಳೆ ಸವಿತಾ ಮುಕುಂದಗೋಳ ಮಾತನಾಡಿ, ನನ್ನ ಮದುವೆ ಆಗಿ 15 ವರ್ಷ ಆಯ್ತು. ಅವತ್ತಿನಿಂದ ಪ್ರತಿದಿನ 1 ಕಿ‌.ಮೀ. ಹೊತ್ತುಕೊಂಡೆ ನೀರು ತರುತ್ತಿದ್ದೇವೆ. 10 ವರ್ಷದಿಂದ ಬಸವಂತಪ್ಪ ನಾಯಿಕ್ ಅವರು ನೀರು ಕೊಡುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆ ಕೇಳಿಸುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಯುವಕ ಸಿದ್ದು ಮಾತನಾಡಿ, ನಮ್ಮೂರಿನ ಯುವಕರಿಗೆ ಹೆಣ್ಣು ಕೊಡಲು ಬೇರೆ ಊರಿನವರು ವಿಚಾರ ಮಾಡುವಂತಾಗಿದೆ. ಬೆಂಗಳೂರಿನಿಂದ ಊರಿಗೆ ಬಂದು ಆರಾಮವಾಗಿ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಬೇಕು ಎಂದರೆ ಬೈಕ್ ಮೇಲೆ ನೀರು ತರುವುದೇ ನಿತ್ಯದ ಕೆಲಸ ಆಗಿಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಹಶೀಲ್ದಾರ್ ಪ್ರತಿಕ್ರಿಯೆ: ಈ ಬಗ್ಗೆ ಬೆಳಗಾವಿ ತಹಶೀಲ್ದಾರ್ ಸಿದ್ದರಾಯ ಭೋಸಗಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ''ಬಡಾಲ ಅಂಕಲಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಈಗ ಗಮನಕ್ಕೆ ಬಂದಿದೆ. ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಸುತ್ತೇವೆ. ಇನ್ಮುಂದೆ ನೀರಿನ ಕೊರತೆ ಆಗದಂತೆ ಕ್ರಮ ವಹಿಸುತ್ತೇವೆ'' ಎಂದು ತಿಳಿಸಿದರು.

ಒಟ್ಟಿನಲ್ಲಿ ಬೇಸಿಗೆ ಬಂತು ಅಂದ್ರೆ ಸಾಕು, ಜನ ಖಾಲಿ ಕೊಡಗಳನ್ನು ಹಿಡಿದುಕೊಂಡು ನೀರಿನ ಮೂಲಗಳು ಎಲ್ಲಿವೆಯೋ, ಅಲ್ಲಿಗೆ ಹೋಗಿ ನೀರು ತರುವುದು ಸರ್ವೆ ಸಾಮಾನ್ಯವಾಗಿದೆ. ಎಲ್ಲಿ ನೀರಿನ ಕೊರತೆ ಇದೆಯೋ ಅಲ್ಲಿಗೆ ಟ್ಯಾಂಕರ್ ನೀರು ಸರಬರಾಜು ಮಾಡ್ತಿವಿ ಅಂತ ಹೇಳಿರೋ ಜಿಲ್ಲಾಡಳಿತ ಬಡಾಲ ಅಂಕಲಗಿಗೆ ಇಲ್ಲಿಯವರೆಗೆ ಒಂದೇ ಒಂದು ಟ್ಯಾಂಕರ್ ನೀರು ಸಹ ಕಳಿಸಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.

ಇನ್ನಾದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಜನರಿಗೆ ಕುಡಿಯುವ ನೀರಿನ ಬವಣೆ ನೀಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ?.

ಇದನ್ನೂ ಓದಿ:ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ - Karnataka Weather

Last Updated :May 13, 2024, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.