ETV Bharat / state

ವಿಜಯಪುರ: ಬೇಸಿಗೆ ಮುನ್ನವೇ ಬತ್ತಿದ ಭೂತನಾಳ ಕೆರೆ, ನೀರಿಗಾಗಿ ಜನರ ಹಾಹಾಕಾರ

author img

By ETV Bharat Karnataka Team

Published : Feb 13, 2024, 1:55 PM IST

Updated : Feb 15, 2024, 6:14 AM IST

ವಿಜಯಪುರ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಭೂತನಾಳ ಕೆರೆ
ಭೂತನಾಳ ಕೆರೆ

ಬೇಸಿಗೆ ಮುನ್ನವೇ ಬತ್ತಿದ ಭೂತನಾಳ ಕೆರೆ, ನೀರಿಗಾಗಿ ಜನರ ಹಾಹಾಕಾರ

ವಿಜಯಪುರ : ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯಾಗದ ಕಾರಣ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಬೇಸಿಗೆ ಮುನ್ನವೇ ಉಂಟಾಗಿದೆ. ಇನ್ನೊಂದೆಡೆ ನಗರದ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಭೂತನಾಳ ಕೆರೆ ಸಂಪೂರ್ಣವಾಗಿ ‌ಬತ್ತಿ ಹೋಗಿದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನ ಪ್ರದೇಶದವಾದ ಕೋಲ್ಹಾರ ಹಿಂಭಾಗದ ನೀರು ಹಾಗೂ ಭೂತನಾಳ ಕೆರೆ ನೀರನ್ನು ಅವಲಂಬಿಸಿದ್ದಾರೆ.

ಹೀಗಿರುವಾಗ ಸರಿಯಾಗಿ ಮಳೆಯಾಗದೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಭಾಗದಲ್ಲಿ ಹಾಗು ಭೂತನಾಳ ಕೆರೆಯಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಆದರಿಂದ ಭೂತನಾಳ ಕೆರೆಯಿಂದ ನಗರಕ್ಕೆ ನೀರು ಸರಬರಾಜು ಮಾಡುವುದು ಕಷ್ಟವಾಗಿದೆ. ಹಿಂದಿನಿಂದಲೂ ಇದೇ ಕೆರೆಯಿಂದ ನಗರದ ಐದು ವಾರ್ಡ್​ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಭೂತನಾಳ ಕೆರೆಯಲ್ಲಿ ನೀರಿಲ್ಲ. ‌ಮುಂಬರುವ ದಿನಗಳಲ್ಲಿ ಆ ವಾರ್ಡ್ ಜನರಿಗೆ ನೀರಿನ‌ ಬವಣೆ ನೀಗಿಸಿಕೊಳ್ಳುವುದು ಹೇಗೆ ಎಂಬ ಆತಂಕ ಕಾಡುತ್ತಿದೆ. ಅದಷ್ಟು ಬೇಗ ಜಿಲ್ಲಾಡಳಿತ ಹಾಗೂ ಸರ್ಕಾರ ಕುಡಿಯುವ ನೀರಿನ‌ ಸಮಸ್ಯೆಗೆ ಸೂಕ್ತ ಮುಂಜಾಗ್ರತಾ ಕ್ರಮ‌ ಈಗಿನಿಂದಲೇ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ಅವರು, ಐತಿಹಾಸಿಕ ಜಿಲ್ಲೆ ಎಂದು ವಿಜಯಪುರಕ್ಕೆ ರಾಜ್ಯ ಒಂದು ಹೆಸರಿದೆ. ನಗರದಲ್ಲಿ ನೀರಿನ ಮೂಲಗಳು ಹೆಚ್ಚಿದ್ದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ದಿನದ 24 ಗಂಟೆಯೂ ನೀರಿನ ಪೂರೈಕೆ ಮಾಡುತ್ತಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಆದರೆ ನಗರದ ಯಾವುದೇ ಏರಿಯಾಗಳಿಗೆ ಹೋದರೂ ಸರಿಯಾದ ನೀರಿನ ಸೌಕರ್ಯವಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಶಾಸಕರು ಮತ್ತು ಸಚಿವರಿಂದ ಯಾವುದೇ ಉಪಯೋಗವಾಗಿಲ್ಲ. ಇನ್ನು ವಿಜಯಪುರದಲ್ಲಿ ಜಲ ಮಂಡಳಿಗೆ ಬೀಗ ಹಾಕಿದ್ದಾರಾ? ಎಂಬ ಸಂಶಯ ನಮಗಿದೆ. ಇನ್ನಾದರೂ ಪಕ್ಷತೀತಾವಾಗಿ ಎಲ್ಲರೂ ಒಂದಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಸ್ಥಳೀಯರಾದ ಸತೀಶ್ ಪಾಟೀಲ್ ಮಾತನಾಡಿ, ಈ ಬಾರಿ ವಿಜಯಪುರ ನಗರಕ್ಕೆ ಬೀಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಏಕೆಂದರೆ ನಗರದ ಆರು ವಾರ್ಡ್​ಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಭೂತನಾಳ ಕೆರೆ ಸಂಪೂರ್ಣವಾಗಿ ‌ಬತ್ತಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಸದಸ್ಯರನ್ನು ಭೇಟಿಯಾಗಿ ಈ ಬಗ್ಗೆ ತಿಳಿಸಿದ್ದೇವೆ. ಜಿಲ್ಲಾ ಉಸ್ತುವರಿ ಮಂತ್ರಿ ಅವರ ಗಮನಕ್ಕೂ ತಂದಿದ್ದೇವೆ. ಆಲಮಟ್ಟಿ ಜಲಾಶಯದಿಂದ ಭೂತನಾಳ ಕೆರೆಗೆ ನೀರು ಬಿಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : 'ನಿತ್ಯ 290 ದಶಲಕ್ಷ ಲೀಟರ್ ನೀರಿಗೆ ಬೇಡಿಕೆ, ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ತ್ವರಿತ ಕ್ರಮಕ್ಕೆ ಸೂಚನೆ'

Last Updated : Feb 15, 2024, 6:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.