ETV Bharat / state

ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ಭರಾಟೆ: ಡಿಸಿಎಂ ಡಿಕೆಶಿ, ಮಾಜಿ ಸಿಎಂ ಹೆಚ್​ಡಿಕೆ ಕುಟುಂಬ ಸಮೇತರಾಗಿ ವೋಟಿಂಗ್​​ - Voting by political leaders

author img

By ETV Bharat Karnataka Team

Published : Apr 26, 2024, 1:39 PM IST

Updated : Apr 26, 2024, 3:38 PM IST

ಘಟಾನುಘಟಿಗಳಿಂದ ಮತದಾನ
ಘಟಾನುಘಟಿಗಳಿಂದ ಮತದಾನ

ಘಟಾನುಘಟಿಗಳ ಸ್ಪರ್ಧೆಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅರೆ ಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಕ್ಷೇತ್ರದಲ್ಲಿ ಮತದಾನ ಚುರುಕಿನಿಂದ ನಡೆದಿದ್ದು, ಅಭ್ಯರ್ಥಿಗಳು ಸೇರಿದಂತೆ ಘಟಾನುಘಟಿಗಳಿಂದ ಮತದಾನ ನಡೆದಿದೆ.

ಘಟಾನುಘಟಿಗಳಿಂದ ಮತದಾನ

ರಾಮನಗರ/ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ರಂಗೇರಿದೆ. ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು ಅಭ್ಯರ್ಥಿಗಳು ಸೇರಿದಂತೆ ಕ್ಷೇತ್ರದ ಮತದಾರರು ಮತಗಕಟ್ಟೆಗಳತ್ತ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಘಟಾನುಘಟಿಗಳ ಸ್ಪರ್ಧೆಯಿಂದ ಕ್ಷೇತ್ರಕ್ಕೆ ಅರೆ ಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ ‌ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಉಭಯ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪದ್ಮಾನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್, ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ. ನಾನು ಮತ್ತು ಶ್ರೀಮತಿ, ಮಕ್ಕಳು ಎಲ್ಲರೂ ಮತ ಹಾಕಿದ್ದೇವೆ. ಎಲ್ಲ ದಾನಕ್ಕಿಂತ ಮತದಾನ ಮಹತ್ವದ್ದು. ಇದಕ್ಕೆ ಎಲ್ಲರೂ ಸಮಯ ನೀಡಬೇಕೆಂದು ಮನವಿ ಮಾಡಿದರು.

ನಮಗೆ ಬೇಕಾದ ಸರ್ಕಾರ ತರಲು ಇದೊಂದು ಅವಕಾಶ. ಯಾವುದೇ ಕೆಲಸ ಇರಲಿ, ಮತದಾನಕ್ಕೆ ಒಂದೆರೆಡು ಗಂಟೆ ಮೀಸಲಿಡಿ.‌ ಯುವಕರು ಮುಂದೆ ಬಂದು ವೋಟ್ ಮಾಡಬೇಕು. ವೀಕೆಂಡ್ ಅಂತ ಬೆಂಗಳೂರು ಬಿಟ್ಟು ಹೋಗಬಾರದು. ಇಂದು ಕ್ಷೇತ್ರದಲ್ಲೇ ಇದ್ದು ಮತಹಾಕಿ. ವೋಟ್ ಹಾಕದಿದ್ದರೆ ಟೀಕೆ ಮಾಡುವ ಹಕ್ಕಿರಲ್ಲ ಎಂದರು.

ಘಟಾನುಘಟಿಗಳಿಂದ ಮತದಾನ
ಘಟಾನುಘಟಿಗಳಿಂದ ಮತದಾನ

ಕನಕಪುರದಲ್ಲಿ ಕೊಪನ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ನಿನ್ನೆ ರಾತ್ರಿ ಕನಕಪುರ, ಸಾತನೂರು, ಮಾಗಡಿ, ರಾಮನಗರ ಭಾಗದಲ್ಲಿ ಆಮೀಷ, ಗ್ಯಾರಂಟಿ ಕಾರ್ಡ್ ಹಂಚಿಕೆ ಆಗಿದೆ. ಇದು ಅತ್ಯಂತ ಅಪವಿತ್ರ ವಿಚಾರ. ಯಾವತ್ತೂ ಮತದಾರರ ಮೇಲೆ ಒತ್ತಡ ಹಾಕಬಾರದು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ‌ ಮುಕ್ತ ಅವಕಾಶ ಕೊಡಬೇಕು. ಚುನಾವಣೆ ಆರೋಗ್ಯಕರವಾಗಿರಬೇಕು ಎಂದು ಹೇಳಿದರು.

ಗ್ಯಾರಂಟಿ ಕಾರ್ಡ್ ಹಂಚಿಕೆ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದೇವೆ. ಗ್ಯಾರಂಟಿ ಕಾರ್ಡ್, ಕೊಪನ್ ಕೊಡಲಾಗುತ್ತಿದೆ. ಮತ ಹಾಕಿದ ನಂತರ ಕೊಪನ್ ಬಳಸಿ ನಿಮಗೆ ಬೇಕಾದನ್ನು ಖರೀದಿಸಿ ಅಂತಿದ್ದಾರೆ. ಇದು ಅಸಹ್ಯ ಬೆಳವಣಿಗೆ. ಕನಕಪುರದಲ್ಲಿ ನಮ್ಮವರು ರಾತ್ರಿ ಪ್ರತಿಭಟನೆ ಮಾಡಿದ್ದಾರೆ. ಮೂರ್ನಾಲ್ಕು ಸಾವಿರ ಕೊಪನ್ ಹಿಡಿದು ಕೆಲವರು ಹೋಗಿದ್ದಾರೆ. ಚುನಾವಣೆ ಹೀಗೆ ಆಗಬಾರದು. ನಮ್ಮ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ ನನಗೆ ವಿಶ್ವಾಸ ಹೆಚ್ಚಾಗಿದೆ ಎಂದರು. ಇದಕ್ಕೂ ಮುನ್ನ ಪತ್ನಿ ಅನುಸೂಯ, ಮಗ, ಮಗಳು ಸೇರಿ ಕುಟುಂಬ ಸಮೇತರಾಗಿ ಮನೆಯಿಂದ ನಡೆದುಕೊಂಡೇ ಬಂದು ಅವರು ಮತದಾನ ಮಾಡಿದರು.

ಘಟಾನುಘಟಿಗಳಿಂದ ಮತದಾನ
ಘಟಾನುಘಟಿಗಳಿಂದ ಮತದಾನ

ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಡಿ ಕೆ ಸುರೇಶ್: ರಾಮನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ನಾನು ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಆತ್ಮವಿಶ್ವಾಸವಿದೆ‌. ಜನ ನನ್ನ ಪರವಾಗಿ ನಿಲ್ಲುವ ನಂಬಿಕೆಯಿದೆ ಎಂದರು.

ಕ್ಷೇತ್ರದಲ್ಲಿ ನಮ್ಮ ಪರವಾಗಿ ವಾತಾವರಣ ಇದೆ. ಇಂದು ಬೆಳಗಿನ ಜಾವದ ತನಕ ಕ್ಷೇತ್ರದ ಕಾರ್ಯಕರ್ತರು, ಮತದಾರರನ್ನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಅತ್ಯಂತ ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ ಎಂದರು. ಮತದಾನ ಮಾಡಲು ಯುವಕರ ಸಂಖ್ಯೆ ಕಡಿಮೆ ಇದೆ ಎಂದು ಕೇಳಿದಾಗ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ, ಈ ಹಬ್ಬದಲ್ಲಿ ಹಿರಿಯರು, ಕಿರಿಯರು ಒಟ್ಟಾಗಿ ಭಾಗವಹಿಸಬೇಕು. ಮತದಾನ ಪ್ರಜಾಪ್ರಭುತ್ವದಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಈ ಹಕ್ಕನ್ನು ನಾವು ಚಲಾವಣೆ ಮಾಡಬೇಕಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಸಂಸತ್ತು ಪ್ರಜಾಪ್ರಭುತ್ವದ ದೇಗುಲ. ಇದರ ಮೂಲಕ ದೇಶ, ರಾಜ್ಯವನ್ನು ಅಭಿವೃದ್ಧಿ ಮಾಡಲು, ಅವಶ್ಯಕತೆಗಳನ್ನು ಪೂರೈಸಲು, ಒಳ್ಳೆಯದನ್ನು ಮಾಡಲು, ಕಾನೂನು, ನಿಯಮಗಳನ್ನು ಮಾಡಲಾಗುತ್ತದೆ. ಆದ ಕಾರಣ ಲೋಕಸಭಾ ಚುನಾವಣೆ ಪ್ರಮುಖವಾದುದು‌. ಆದ್ದರಿಂದ ಎಲ್ಲ ನಾಗರಿಕರು ಮತದಾನದಲ್ಲಿ ಭಾಗವಹಿಸಬೇಕು. ನಾನು ನನ್ನ ಸ್ವಂತ ಊರಾದ ದೊಡ್ಡ ಆಲಹಳ್ಳಿಯಲ್ಲಿ ಕುಟುಂಬ ಸದಸ್ಯರ ಸಮೇತ ತೆರಳಿ ಮತದಾನ ಮಾಡಲಾಗುವುದು ಎಂದು ತಿಳಿಸಿದರು.

ಘಟಾನುಘಟಿಗಳಿಂದ ಮತದಾನ
ಘಟಾನುಘಟಿಗಳಿಂದ ಮತದಾನ

ಘಟಾನುಘಟಿಗಳಿಂದ ಮತದಾನ: ಕ್ಷೇತ್ರದಲ್ಲಿ ಮತದಾನ ಚುರುಕಿನಿಂದ ನಡೆದಿದ್ದು, ಬಿಡದಿಯ ಕೇತುಗಾನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಹಕ್ಕು ಚಲಾವಣೆ ಮಾಡಿದರು.

ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿ.ಕೆ.ಸುರೇಶ್, ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಸಿ.ಪಿ.ಯೋಗೇಶ್ವರ್, ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Karnataka voting turnout: 11 ಗಂಟೆ ವೇಳೆಗೆ ರಾಜ್ಯದ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನೋಡಿ - KARNATAKA STATE VOTING TURNOUT

Last Updated :Apr 26, 2024, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.