ETV Bharat / state

ಹಕ್ಕು ಚಲಾಯಿಸುವಲ್ಲಿ ಯುವಕರನ್ನೇ ನಾಚಿಸುವ ಶತಾಯುಷಿಗಳು - centenarians Vote

author img

By ETV Bharat Karnataka Team

Published : May 7, 2024, 2:48 PM IST

ಮತದಾನ ಮಾಡಿದ ಶತಾಯುಷಿಗಳು
ಮತದಾನ ಮಾಡಿದ ಶತಾಯುಷಿಗಳು (ETV Bharat)

ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಮೂವರು ಶತಾಯುಷಿಗಳು ತಮ್ಮ ಇಳಿ ವಯಸ್ಸಿನಲ್ಲಿ ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ.

ಹಕ್ಕು ಚಲಾಯಿಸುವಲ್ಲಿ ಯುವಕರನ್ನೇ ನಾಚಿಸುವ ಶತಾಯುಷಿಗಳು (ETV BHARAT)

ಬೆಳಗಾವಿ: ಜಿಲ್ಲೆಯಲ್ಲಿ ಇಬ್ಬರು ಶತಾಯುಷಿಗಳು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ. ಅದರಲ್ಲೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಯುವಕರನ್ನು ನಾಚಿಸುವಂತೆ, ಸ್ಕೂಟಿ ಮೇಲೆ ಬಂದು ಮತದಾನ ಮಾಡಿ ಎಲ್ಲರಿಗೂ ಮಾದರಿಯಾದರು.

ಹೌದು ಬೆಳಗಾವಿಯ 104 ವರ್ಷದ ಈ ಅಜ್ಜ ತಾವೇ ಸ್ಕೂಟಿ ಓಡಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತು. ನಗರದ ಅನಗೋಳದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ.34 ರಲ್ಲಿ ಮತ ಹಾಕಿದರು.

ಇದೇ ವೇಳೆ, ಈ ಟಿವಿ ಭಾರತ ಜೊತೆಗೆ ಮಾತನಾಡಿದ ಶತಾಯುಷಿ ರಾಜೇಂದ್ರ ಕಲಘಟಗಿ, "ನನಗೆ ಬಹಳ ಖುಷಿಯಾಗುತ್ತಿದೆ. ಇದು ಪ್ರಜಾಪ್ರಭುತ್ವದ ಜಾತ್ರೆ, ದೊಡ್ಡ ಹಬ್ಬ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕಲೇಬೇಕು. ನನಗೆ 104 ವರ್ಷವಾದರೂ ಮತ ಚಲಾಯಿಸಬೇಕು ಎಂದು ಚನ್ನಮ್ಮ ನಗರದಿಂದ ಬಂದಿದ್ದೇನೆ. ಯಾವ ಚುನಾವಣೆಯಲ್ಲೂ‌ ಮತದಾನದಿಂದ ನಾನು ವಂಚಿತನಾಗಿಲ್ಲ" ಎಂದು ನೆನಪಿಸಿಕೊಂಡರು.

ಮುಂದುವರೆದು, "ಈ ಚುನಾವಣೆ ಪರ್ವದಲ್ಲಿ ಪ್ರವಾಸ ಅಂತಾ ಯಾರೂ ಎಲ್ಲೂ ಹೋಗಬಾರದು. ವಿದೇಶದಲ್ಲಿ ನೆಲೆಸಿರುವ ನಮ್ಮ ಅದೇಷ್ಟೋ ಜನರು ದುಡ್ಡು ಖರ್ಚು ಮಾಡಿ ವಿಮಾನದಲ್ಲಿ ಬಂದು ವೋಟ್ ಹಾಕಿ ಹೋಗುತ್ತಾರೆ. ಆದರೆ, ನಾವು ಇಲ್ಲಿಯೇ ಇದ್ದು, ಬಿಸಿಲಿದೆ ಎಂದು ವೋಟ್ ಹಾಕಲು ಹೋಗುವುದಿಲ್ಲ ಎಂದರೆ ಹೇಗೆ..? ಇದು ದೇಶದ ಭವಿಷ್ಯ ನಿರ್ಧರಿಸುವ ಮಹತ್ವದ ಚುನಾವಣೆ. ಬಡವರು, ಮಧ್ಯಮ ವರ್ಗದವರು ಮತ ಹಾಕುತ್ತಾರೆ. ಆದರೆ, ಶ್ರೀಮಂತ ವರ್ಗ ಮನೆ ಬಿಟ್ಟು ಹೊರಗೆ ಬರುವುದಿಲ್ಲ. ಹಾಗಾಗಿ, ಶೇ.100ರಷ್ಟು ಮತದಾನ ದಾಖಲಾಗುತ್ತಿಲ್ಲ. ಸರ್ಕಾರಗಳು ನಿಮಗೆ ಎಲ್ಲ ವ್ಯವಸ್ಥೆ ಮಾಡಿದಾಗಲೂ ಈ ರೀತಿ ನಿರಾಸಕ್ತಿ ತೋರಿಸುವುದು ಸರಿಯಲ್ಲ" ಎಂದು ರಾಜೇಂದ್ರ ಕಲಘಟಗಿ ಬೇಸರ ಹೊರ ಹಾಕಿದರು.

103 ವರ್ಷದ ವೃದ್ಧೆಯಿಂದಲೂ ಮತದಾನ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ 103 ವಯಸ್ಸಿನ ಹಿರಿಯ ಮಹಿಳೆ ನೀಲವ್ವ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು. ಮನೆ ಮನೆ ಮತದಾನ ಅಭಿಯಾನದಲ್ಲಿ ಭಾಗವಹಿಸಲು ನಿರಾಕರಿಸಿದ ಹಿರಿಯರು ಮತಗಟ್ಟೆಗೆ ಬಂದು ಮತ ಚಲಾಯಿಸುವುದಾಗಿ ತಿಳಿಸಿದರು. ಅದರಂತೆ ಇಂದು ಇಲ್ಲಿನ ಮತಗಟ್ಟೆ 90 ರಲ್ಲಿ ತಮ್ಮ ಪುತ್ರರೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶತಾಯುಷಿ ಮತದಾರರು: ಜಿಲ್ಲೆಯಲ್ಲಿ ಒಟ್ಟು 1,259 ಶತಾಯುಷಿ ಮತದಾರರಿದ್ದಾರೆ. ಈ ಪೈಕಿ ಕುಡಚಿ ಕ್ಷೇತ್ರದಲ್ಲಿ 196 ಶತಾಯುಷಿ ಮತದಾರರಿದ್ದಾರೆ. ಈ ಮೂಲಕ ಕುಡಚಿ 100 ವರ್ಷ ದಾಟಿದ ಮತದಾರರ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ರಾಯಭಾಗದಲ್ಲಿ 176, ಬೆಳಗಾವಿ ದಕ್ಷಿಣದಲ್ಲಿ 116, ಕಾಗವಾಡದಲ್ಲಿ 108, ಅರಬಾವಿಯಲ್ಲಿ 97 ಹಾಗೂ ಬೆಳಗಾವಿ ಗ್ರಾಮೀಣದಲ್ಲಿ 83, ಬೆಳಗಾವಿ ಉತ್ತರದಲ್ಲಿ 79, ಗೋಕಾಕದಲ್ಲಿ 73, ರಾಮದುರ್ಗದಲ್ಲಿ 56, ಯಮಕನಮರಡಿದಲ್ಲಿ 50 ಮಂದಿ ಶತಾಯುಷಿ ಮತದಾರರಿದ್ದಾರೆ. ಇನ್ನು ಹುಕ್ಕೇರಿ ಹಾಗೂ ಚಿಕ್ಕೋಡಿ - ಸದಲಗಾದಲ್ಲಿ ತಲಾ 45, ಬೈಲಹೊಂಗಲದಲ್ಲಿ 40, ಕಿತ್ತೂರಿನಲ್ಲಿ 27, ಸವದತ್ತಿಯಲ್ಲಿ 25, ನಿಪ್ಪಾಣಿಯಲ್ಲಿ 16, ಖಾನಾಪುರದಲ್ಲಿ 15, ಅಥಣಿಯಲ್ಲಿ 12 ಶತಾಯುಷಿ ಮತದಾರರಿದ್ದಾರೆ.

ದಾವಣಗೆರೆಯಲ್ಲೂ ಶತಾಯುಷಿ ವೃದ್ಧೆಯಿಂದ ಮತದಾನ: 102 ವರ್ಷದ ಯಲ್ಲಮ್ಮ ವೃದ್ಧೆ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲಾಗಿದೆ.

ಇದನ್ನೂ ಓದಿ: ಹಾವೇರಿ: ಹಸುಗೂಸುಗಳೊಂದಿಗೆ ಆಗಮಿಸಿ ತಾಯಂದಿರ ಮತದಾನ - Mothers voted

ETV Bharat Logo

Copyright © 2024 Ushodaya Enterprises Pvt. Ltd., All Rights Reserved.