ETV Bharat / state

ಗ್ಯಾರಂಟಿಯ ಮೂಲಕ ಗೆಲುವಿನ ಭ್ರಮೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್ ಮರ್ಮಾಘಾತಕ್ಕೆ ಒಳಗಾಗಿದೆ: ವಿಜಯೇಂದ್ರ

author img

By ETV Bharat Karnataka Team

Published : Feb 3, 2024, 11:04 PM IST

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್​ ಮರ್ಮಾಘಾತಕ್ಕೆ ಒಳಗಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ವಿಜಯೇಂದ್ರ ವಾಗ್ದಾಳಿ
ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಗ್ಯಾರಂಟಿಯ ಮೂಲಕ ಗೆಲುವಿನ ಭ್ರಮೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್ ಮರ್ಮಾಘಾತಕ್ಕೆ ಒಳಗಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ (ಶಾಲಿನಿ ಗ್ರೌಂಡ್ಸ್) ಇಂದು ಹಮ್ಮಿಕೊಂಡಿದ್ದ ಬಿಜೆಪಿ ಬೆಂಗಳೂರು ದಕ್ಷಿಣ ನೂತನ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಲೋಕಸಭಾ ಚುನಾವಣೆಯ ಕುರಿತು ಚರ್ಚೆ ನಡೆಯುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಸಹಜವಾಗಿ ಇಡೀ ದೇಶದಲ್ಲಿ ಉತ್ಸಾಹ ಇತ್ತು. ಕರ್ನಾಟಕದ ವಿಜಯಪತಾಕೆಯನ್ನು ರಾಷ್ಟ್ರದ ತುಂಬ ತೆಗೆದುಕೊಂಡು ಹೋಗುವ ಭ್ರಮೆಯಲ್ಲಿ ಪಕ್ಷದವರು ಇದ್ದರು. ಆದರೆ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡಗಳ ಫಲಿತಾಂಶ ಬಂದ ಬಳಿಕ ಮರ್ಮಾಘಾತ ಉಂಟಾಗಿದೆ ಎಂದರು.

ಪದಗ್ರಹಣ ಕಾರ್ಯಕ್ರಮ
ಪದಗ್ರಹಣ ಕಾರ್ಯಕ್ರಮ

ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಒಂದು ಭಾಗ, ಹಾಗೆಯೇ ಅಲ್ಲಿರುವ ಮತದಾರರು ಸ್ಪಷ್ಟ ಸಂದೇಶವನ್ನು ದೇಶಕ್ಕೇ ನೀಡಿದ್ದಾರೆ. ಈ ದೇಶದ ಭವಿಷ್ಯದ ದೃಷ್ಟಿಯಿಂದ ಭಾರತವನ್ನು ಒಂದು ಸಮೃದ್ಧಶಾಲಿ, ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ, ಈ ದೇಶವನ್ನು ಜಗತ್ತಿನ ಅಗ್ರಗಣ್ಯ ದೇಶದ ಸಾಲಿನಲ್ಲಿ ಒಯ್ಯುವ ಶಕ್ತಿ, ಆ ಎದೆಗಾರಿಕೆ ಇರುವುದು ಪ್ರಧಾನಿ ಮೋದಿ ಅವರಿಗೆ ಮಾತ್ರ. ಹಾಗಾಗಿ ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಗ್ಯಾರಂಟಿಗಿಂತ ನರೇಂದ್ರ ಮೋದಿ ಅವರ ಗ್ಯಾರಂಟಿಯೇ ಶ್ರೇಷ್ಠ ಎಂಬ ಸಂದೇಶವನ್ನು ಆ 3 ರಾಜ್ಯಗಳ ಮತದಾರರು ನೀಡಿದ್ದಾರೆ ಎಂದು ತಿಳಿಸಿದರು.

ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಅಪೇಕ್ಷೆ ದೇಶದ ಮತದಾರರಲ್ಲಿದೆ. ರಾಜ್ಯ ಮತ್ತು ದೇಶದ ಮತದಾರರು ಸಹ ಮತದಾನ ದಿನಾಂಕವನ್ನು ರಣೋತ್ಸಾಹದಿಂದ ಎದುರು ನೋಡುತ್ತಿದ್ದಾರೆ. ದೇಶದ ಅಲ್ಲಲ್ಲಿ ಅವಶೇಷ ರೂಪದಲ್ಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೂ ದೇಶದಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಇವತ್ತು ಅನಿಸಿದೆ ಎಂದು ಹೇಳಿದರು. ಮತದಾರರ ಆಶಯವನ್ನು ಅರ್ಥ ಮಾಡಿಕೊಂಡು ಅದನ್ನು ಜನರಿಗೆ ತಿಳಿಸಿದ ಖರ್ಗೆಯವರಿಗೆ ಅಭಿನಂದನೆಗಳು ಎಂದರು. ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲು ಶ್ರಮಿಸುವಂತೆ ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಇದ್ದರೂ ಎಲ್ಲೂ ಸಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. 8 ತಿಂಗಳು ಅಧಿಕಾರ ಮಾಡಿದರೂ ಒಂದು ಜಿಲ್ಲೆಗೂ ಕಾಂಗ್ರೆಸ್ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು. ದೇಶದ ಅಪ್ರತಿಮ ನಾಯಕ, ಬಿಜೆಪಿಯನ್ನು ಇಷ್ಟು ಎತ್ತರಕ್ಕೆ ಒಯ್ಯಲು ಕಾರಣೀಭೂತರಾದ ಹಾಗೂ ರಾಮಜನ್ಮಭೂಮಿ ಹೋರಾಟದ ರೂವಾರಿ ಎಲ್.ಕೆ.ಅಡ್ವಾಣಿಜೀ ಅವರಿಗೆ ಭಾರತ ರತ್ನ ಘೋಷಿಸಿದ ಶುಭ ಸಂದರ್ಭ ಇದು ಎಂದು ವಿವರಿಸಿದರು.

ಪದಗ್ರಹಣ ಕಾರ್ಯಕ್ರಮ
ಪದಗ್ರಹಣ ಕಾರ್ಯಕ್ರಮ

ಅಡ್ವಾಣಿ ಅವರನ್ನು ಅಭಿನಂದಿಸಿದ ಅವರು, ಇಂಥ ಉತೃಷ್ಟ ತೀರ್ಮಾನ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಮಗೆ ಆತ್ಮೀಯ ಸ್ವಾಗತಕ್ಕೆ ಅವರು ಸಂತಸ ಸೂಚಿಸಿದರು.

ಇದನ್ನೂ ಓದಿ: 'ಮಕ್ಕಳ ಸಂಪಾದನೆ ಮೇಲೆ ತಾಯಿ ಊಟ ನೀಡಲ್ಲ, ಕಾಮನ್ ಸೆನ್ಸ್ ಬೇಕು ರೀ ಸಿದ್ದರಾಮಯ್ಯ': ಆರ್. ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.