ETV Bharat / state

ಲೋಕಸಭೆ ಚುನಾವಣೆ: ಮಠಾಧೀಶರಿಂದ ಮತ ಚಲಾವಣೆ - Swamijis Voting

author img

By ETV Bharat Karnataka Team

Published : May 7, 2024, 1:23 PM IST

Updated : May 7, 2024, 3:20 PM IST

SWAMIJIS VOTING
ಮಠಾಧೀಶರಿಂದ ಮತ ಚಲಾವಣೆ (ETV Bharat)

ನಾಡಿನ ವಿವಿಧ ಮಠಾಧೀಶರು ಇಂದು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಠಾಧೀಶರಿಂದ ಮತ ಚಲಾವಣೆ (ETV Bharat)

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಜನಸಾಮಾನ್ಯರು ಸೇರಿದಂತೆ ರಾಜಕಾರಣಿಗಳು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದರ ನಡುವೆ ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀ ಮತ ಚಲಾಯಿಸಿದರು. ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಅವರು ವೋಟ್‌ ಮಾಡಿದರು.

ಬಳಿಕ ಮಾತನಾಡಿದ ಶ್ರೀಗಳು, "ಮತದಾನ ಎನ್ನುವುದು ಯೋಗ್ಯರಿಗೆ ಮತ ನೀಡುವಂಥದ್ದು. ಆಮಿಷಕ್ಕೆ ಬಿದ್ದು ವೋಟ್ ಮಾರಿಕೊಳ್ಳಬಾರದು. ಯಾರಿಗೆ ಮತ ಕೊಡುತ್ತಿದ್ದೇವೆ, ಏಕೆ ಮತದಾನ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅರಿವಿರಬೇಕು. ಯೋಗ್ಯರಿಗೆ ಮತ ನೀಡಬೇಕು. ಐದು ವರ್ಷಗಳಿಗೊಮ್ಮೆ ಸಿಗುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು" ಎಂದು ಮನವಿ ಮಾಡಿದರು.

ಮುರುಘಾ ಶಾಖ ಮಠದ ಪೀಠಾಧಿಪತಿಯಿಂದ ಮತದಾನ: ದಾವಣಗೆರೆ ಪಾತಾಳ ಲಿಂಗೇಶ್ವರ ದೇವಸ್ಥಾನ ಜೀಜಾಮಾತಾ ಸರಕಾರಿ ಶಾಲೆಯಲ್ಲಿ ಮುರುಘಾ ಶಾಖಾ ಮಠದ ಪೀಠಾಧಿಪತಿ ಶ್ರೀ ಬಸವಪ್ರಭು ಸ್ವಾಮೀಜಿ ಮತ ಚಲಾಯಿಸಿದರು.

ಬಾಗಲಕೋಟೆಯಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ ಚಲಾಯಿಸಿದರು. ಕೂಡಲಸಂಗಮದಲ್ಲಿ ಮತಗಟ್ಟೆಗೆ ತೆರಳಿ ಅವರು ತಮ್ಮ ಬದ್ಧತೆ ಮೆರೆದರು.

ಶ್ರೀಶೈಲ ಜಗದ್ಗುರುಗಳಿಂದ ಮತದಾನ: ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮತದಾನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಮಗತಟ್ಟೆ 47ರಲ್ಲಿ ಅವರು ವೋಟ್​ ಮಾಡಿದರು.

ಬಳಿಕ ಮಾತನಾಡಿದ ಸ್ವಾಮೀಜಿ, "ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಮತವನ್ನು ಹಣಕ್ಕಾಗಿ ಮಾರಾಟ ಮಾಡಬಾರದು. ದೇಶದ ಸುರಕ್ಷತೆಗಾಗಿ ಮತ ನೀಡಿ" ಎಂದು ಕರೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಹ ಒಂದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸ್ಥಳೀಯ ಮತದಾರರೊಂದಿಗೆ ಬಿರು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತ ಶ್ರೀಗಳು, ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ದಾವಣಗೆರೆ: ಮತದಾನ ಬಹಿಷ್ಕರಿಸಿ, ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿದ ಗ್ರಾಮಸ್ಥರು - Election Boycott

Last Updated :May 7, 2024, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.