ETV Bharat / state

ಪದ್ಮಶ್ರೀ ಪ್ರಶಸ್ತಿ ಎಂದರೆ ನನಗೆ ಗೊತ್ತಿಲ್ಲ: ಸೋಮಣ್ಣ

author img

By ETV Bharat Karnataka Team

Published : Jan 26, 2024, 4:09 PM IST

ಮೈಸೂರು ಜಿಲ್ಲೆ ಹೆಚ್​ ಡಿ ಕೋಟೆ ತಾಲೂಕಿನ ಮೊತ್ತೆ ಹಾಡಿಯ ಸೋಮಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಸೋಮಣ್ಣ
ಸೋಮಣ್ಣ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ

ಮೈಸೂರು : ಜೇನು ತುಪ್ಪದ ರುಚಿ ನನಗೆ ಗೊತ್ತು. ಆದರೆ ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ನನಗೆ ಗೊತ್ತಿಲ್ಲ. ಆ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಹೆಚ್ ಡಿ ಕೋಟೆ ಹಾಡಿಯ ಸೋಮಣ್ಣ ಮುಗ್ಧವಾಗಿ ಮಾತನಾಡಿದ್ದಾರೆ. ಗಿರಿಜನರ ಬದುಕಿನ ಹಕ್ಕಿಗಾಗಿ ನಾಲ್ಕು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಮೊತ್ತೆ ಹಾಡಿಯ ಸೋಮಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮಣ್ಣನ ಮಾತು : ಸುಮಾರು ನಾಲ್ಕು ದಶಕಗಳಿಂದ ಹೆಚ್ ಡಿ ಕೋಟೆ ಸೇರಿದಂತೆ ಸುತ್ತಮುತ್ತಲ ಹಾಡಿಯ ಜನರ ಹಕ್ಕಿಗಾಗಿ ಹೋರಾಟ ಮಾಡಿದ ಸೋಮಣ್ಣಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹಾಡಿಯ ಮನೆಯಲ್ಲೇ ಪ್ರತಿಕ್ರಿಯಿಸಿದ ಅವರು, ನಾನು ಆ ಮಟ್ಟಕ್ಕೆ ಬೆಳೆದಿಲ್ಲ. ನಾವುಗಳು ರೈತರು. ಅಣ್ಣೆಸೊಪ್ಪನ್ನ ತಂದು ಅದನ್ನು ಬೇಯಿಸಿಕೊಂಡು ತಿಂದು ಜೀವನ ಮಾಡುವವರು. ನಮಗೆ ಜೇನುತುಪ್ಪದ ರುಚಿ ಗೊತ್ತು. ಆದರೆ, ಪದ್ಮಶ್ರೀ ಪ್ರಶಸ್ತಿ ಎಂದರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಅದರ ರುಚಿಯನ್ನು ನೀವೇ ಹೇಳಬೇಕು ಎಂದು ಮುಗ್ಧವಾಗಿ ಹೇಳುವ ಸೋಮಣ್ಣ, 1978 ರಿಂದ ಹಾಡಿ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಅವರು, ಸರ್ಕಾರಕ್ಕೆ 35 ಸಲಹೆಗಳನ್ನು ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಕಾಡಿನೊಳಗೆ ಇರುವ ಆದಿವಾಸಿ ಜನರ ಹಕ್ಕುಗಳನ್ನು ರಕ್ಷಿಸಬೇಕು, ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು. ಅಲ್ಲಿಯೇ ಜೀವನ ಮಾಡಲು ಅವರಿಗೆ ಭೂಮಿ ನೀಡಬೇಕು. ಇದರ ಜೊತೆಗೆ ಆದಿವಾಸಿ ಹಾಡಿಗಳಲ್ಲೇ ಅವರ ಹಕ್ಕುಗಳನ್ನು ಸ್ಥಾಪನೆ ಮಾಡಬೇಕು. ಜೊತೆಗೆ ಹಾಡಿಗಳಲ್ಲಿರುವ ಬಡತನ ಹಾಗೂ ಅನಕ್ಷರತೆ ಹೋಗಲಾಡಿಸಬೇಕು ಎನ್ನುತ್ತಾರೆ.

ಸೋಮಣ್ಣನ ಪರಿಚಯ : ಹೆಚ್ ಡಿ ಕೋಟೆ ತಾಲೂಕಿನ ಮೊತ್ತೆ ಹಾಡಿಯ ಸೋಮಣ್ಣ (66) ಓದಿದ್ದು ಕೇವಲ ನಾಲ್ಕನೇ ತರಗತಿ. ಒಂದು ಕಾಲದಲ್ಲಿ ಜೀತದಾಳಗಿದ್ದ ಇವರು 1978ರಲ್ಲಿ ಗಿರಿಜನರ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದರು. ತಮ್ಮ ಹೋರಾಟ ಹಾಗೂ ನ್ಯಾಯಾಲಯದ ಖರ್ಚಿಗಾಗಿ ಹಣ ಇಲ್ಲದಿದ್ದಾಗ ಹೆಂಡತಿ ತನ್ನ ಚಿನ್ನದ ಓಲೆಗಳನ್ನೇ ಅಡವಿಟ್ಟು ಹೋರಾಟಕ್ಕೆ ಪ್ರೋತ್ಸಾಹ ನೀಡಿದ್ದರು. ಈ ವಿಷಯವನ್ನು ಈಗ ಸ್ವತಃ ಸೋಮಣ್ಣ ನೆನಪಿಸಿಕೊಳ್ಳುತ್ತಾರೆ.

ಇವರ ತಂದೆಗೆ 9 ಜನ ಮಕ್ಕಳುಗಳು. ಕೂಲಿ ಮಾಡಿ ಜೀವನ ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದ ಇವರ ಕುಟುಂಬಕ್ಕೆ ಕೂಲಿಯೇ ಆಧಾರವಾಗಿದೆ. ಸೋಮಣ್ಣನ ತಂದೆ ಚಿಕ್ಕ ವಯಸ್ಸಿನಲ್ಲೇ ಇವರನ್ನು ಜೀತದಾಳಾಗಿ ಸೇರಿಸಿದ್ದು, ಸ್ವಲ್ಪ ದಿನಗಳ ನಂತರ ತಂದೆ ಸಿಡಿಲು ಬಡಿದು ತೀರಿಕೊಂಡಿದ್ದಾರೆ. ತಾಯಿಯು ಸಹ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಿದ್ದು ತೀರಿಕೊಂಡಾಗ, ಇಡೀ ಸಂಸಾರದ ಹೊಣೆ ಸೋಮಣ್ಣ ಹೊತ್ತಿದ್ದಾರೆ.

ಜೊತೆಗೆ ಹಾಡಿ ಜನರ ಬದುಕಿಗಾಗಿ, ಅವರ ಮೂಲ ಸೌಲಭ್ಯಗಳು ಮತ್ತು ಅವರ ಹಕ್ಕುಗಳನ್ನು ಪಡೆಯಲು ಹೋರಾಟ ಆರಂಭಿಸಿದ್ದಾರೆ. ಸುಮಾರು ನಾಲ್ಕು ದಶಕಗಳ ಹೋರಾಟ ಮಾಡಿರುವ ಸೋಮಣ್ಣನಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದ್ದು, ಮತ್ತಷ್ಟು ಹೋರಾಟಗಳನ್ನು ಮಾಡಲು ಪ್ರೋತ್ಸಾಹ ದೊರೆತಂತೆ ಆಗಿದೆ ಎಂದು ಈಟಿವಿ ಭಾರತ್ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳ ಘೋಷಣೆ: ಕರ್ನಾಟಕದ ಸೋಮಣ್ಣ, ಪ್ರೇಮಾ ಸೇರಿ 34 ಸಾಧಕರಿಗೆ ಪದ್ಮಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.