ETV Bharat / state

ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ : ಸಂತೋಷ್ ಲಾಡ್ - Santhosh lad

author img

By ETV Bharat Karnataka Team

Published : Mar 25, 2024, 4:59 PM IST

Minister Santhosh Lad
ಸಚಿವ ಸಂತೋಷ ಲಾಡ್

ಭ್ರಷ್ಟಾಚಾರ ಆರೋಪ ಹೊತ್ತಿರುವ ರೆಡ್ಡಿಯವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಟೀಕಿಸಿದರು.

ಸಚಿವ ಸಂತೋಷ ಲಾಡ್

ಹುಬ್ಬಳ್ಳಿ : ಇಂದು ಕೆಆರ್​ಪಿಪಿ ಪಕ್ಷವನ್ನು ಬಿಜೆಪಿಗೆ ವಿಲೀನಗೊಳಿಸಿ ಬಿಜೆಪಿ ಸೇರ್ಪಡೆಯಾದ ಜನಾರ್ದನ ರೆಡ್ಡಿಯನ್ನು ಈ ಹಿಂದೆ ಪ್ರಧಾನಿಯವರೇ ದೂರ ಇಟ್ಟಿದ್ದರು. ಇದೀಗ ಚುನಾವಣೆಯಲ್ಲಿ ಸೀಟುಗಳು ಕಡಿಮೆ ಬರುತ್ತವೆ ಎಂಬ ಸರ್ವೇ ರಿಪೋರ್ಟ್ ಬರುತ್ತಿದ್ದಂತೆಯೇ ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಟೀಕಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಯಾವುದೇ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರು ವಾಷಿಂಗ್ ಪೌಡರ್ ನಿರ್ಮಾ ಆಗಲಿದ್ದಾರೆ ಎಂದು ಲೇವಡಿ ಮಾಡಿದರು.

''ಅದೇ ರೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ.‌ ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನಾನು ಲಂಚವನ್ನು ತಿನ್ನಿಸುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು‌. ಇದೀಗ ಭ್ರಷ್ಟಾಚಾರ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ'' ಎಂದು ಸಚಿವ ಲಾಡ್​ ಹರಿಹಾಯ್ದರು.

''ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇ. 37ರಷ್ಟು ಮತಗಳು ಬಂದಿದ್ದವು. ಇದೀಗ ಶೇ.29ರಷ್ಟು ಬರಬಹುದು. ದೇಶಾದ್ಯಂತ 200 ಸೀಟುಗಳು ಬಿಜೆಪಿಗೆ ಬರಲಿವೆ. ಇದು ಸರ್ವೇ ಮಾಹಿತಿಯಿಂದಲೇ ಬಹಿರಂಗಗೊಂಡಿದೆ'' ಎಂದು ಆರೋಪಿಸಿದರು.

''ಲೋಕಸಭಾ ಚುನಾವಣೆ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೇಲೆ ನಡೆಯಬೇಕು. ಅದು ಬಿಟ್ಟು ಇದೀಗ ಆರೋಪ-ಪ್ರತ್ಯಾರೋಪಗಳ ಮೇಲೆ ನಡೆಯುವಂತಾಗಿದೆ. ಇದು ದುರ್ದೈವ. ವಿಶ್ವ ಗುರು ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಕಾಲದಲ್ಲಿಯೇ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ'' ಎಂದು ದೂರಿದರು.

''ಲೋಕಸಭಾ ಚುನಾವಣೆ ಆರೋಪಗಳ ಚುನಾವಣೆ ಆಗಬಾರದು. ನಮ್ಮ 10 ವರ್ಷದ ಮಾರ್ಕ್ಸ್ ರಿಪೋರ್ಟ್ ಮೇಲೆ ನಡೆಯಬೇಕು. ಇಂದಿನ ಸ್ಥಿತಿಗತಿ ಬಗ್ಗೆ ಚರ್ಚೆ ಆಗಬೇಕು. ಪಿಎಂ ವಿಶ್ವಗುರು ಇದ್ದಾರೆ. ಆದ್ರೆ ಎಲ್ಲಿ ನೋಡಿದ್ರೂ ಇವರ ಜಾಹೀರಾತುಗಳು ರಾರಾಜಿಸುತ್ತಿವೆ‌. ವಿಶ್ವಗುರುವಿಗೆ ಇಷ್ಟೊಂದು ಪ್ರಚಾರ ಅವಶ್ಯಕತೆ ಇದೆಯಾ?'' ಎಂದು ಪ್ರಶ್ನಿಸಿದರು.

''ಪ್ರಹ್ಲಾದ್ ಜೋಶಿ ಅವರು ಕೇವಲ ಬೈಯುತ್ತಾರೆ ಅಂತಾರೆ.‌ ನಾನು ವೈಯಕ್ತಿಕವಾಗಿ ಬೈದಿಲ್ಲ, ಪ್ರಶ್ನೆ ಕೇಳುತ್ತಾ ಇದ್ದೇವೆ. ಏನು ಚರ್ಚೆ ಮಾಡಬೇಕು, ನಿಮ್ಮ ಗ್ಯಾರಂಟಿ ಏನಿದೆ. ಮೇಕ್ ಇನ್ ಇಂಡಿಯಾ ಎಲ್ಲಿದೆ.‌ ಸಂತೋಷ್ ಲಾಡ್ ಅವರು ಆ ರೀತಿ ಹೇಳುತ್ತಾ ಇರೋದು ಸುಳ್ಳು. ವೈಯಕ್ತಿವಾಗಿ ಮಾತನಾಡಿದ್ದನ್ನು ಜೋಶಿಯವರು ಈ ರೀತಿ ಹೇಳಿದ್ದು ಸರಿಯಲ್ಲ'' ಎಂದರು.

ಇದನ್ನೂ ಓದಿ : ಯಡಿಯೂರಪ್ಪ ಅವರ ಮೇಲೆ ನನಗೆ ಅಪಾರವಾದ ನಂಬಿಕೆ‌ಯಿದೆ: ಸಂತೋಷ್​ ಲಾಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.