ETV Bharat / state

ಬಿಟ್‌ಕಾಯಿನ್ ಹಗರಣ: ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಐವರನ್ನು ವಶಕ್ಕೆ ಪಡೆದ ಎಸ್ಐಟಿ

author img

By ETV Bharat Karnataka Team

Published : Jan 25, 2024, 6:37 AM IST

ಬಿಟ್‌ಕಾಯಿನ್ ಅವ್ಯವಹಾರದಲ್ಲಿ‌ ಶಾಮೀಲಾಗಿರುವ ಆರೋಪದಲ್ಲಿ ಐವರು ಆರೋಪಿಗಳನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ‌.

ಬಿಟ್ ಕಾಯಿನ್
bitcoin

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ತಂಡವು (ಎಸ್ಐಟಿ) ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಐವರನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಡಾರ್ಕ್ ನೆಟ್‌ನಲ್ಲಿ ಬಿಟ್‌ಕಾಯಿನ್ ಮೂಲಕ ಡ್ರಗ್ಸ್ ಖರೀದಿ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದ ಜಾಡು ಹಿಡಿದು ಸಾಗಿದ ಪೊಲೀಸರು ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಎಂಬಾತನನ್ನು ಬಂಧಿಸಿದ್ದರು. ಸರ್ಕಾರಿ ವೆಬ್‌ಸೈಟ್ ಹಾಗು ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳನ್ನು ಹ್ಯಾಕ್‌ ಮಾಡಿ ಕೋಟ್ಯಂತರ ರೂಪಾಯಿ ಹಣ‌ವನ್ನು ಅಕ್ರಮವಾಗಿ ಸಂಪಾದಿಸಿರುವ ಕುರಿತು ಮಾಹಿತಿ ಹೊರಬಂದಿತ್ತು. ಈ ಬೆನ್ನಲ್ಲೇ ಪ್ರಕರಣವನ್ನು ಆಗಿನ ಸರ್ಕಾರ ಸಿಸಿಬಿಗೆ ಹಸ್ತಾಂತರಿಸಿತ್ತು.

ಸಿಸಿಬಿ ತನಿಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಹಿಂದಿನ ಸರ್ಕಾರದ ಕೆಲವು ರಾಜಕಾರಣಿಗಳೂ ಶಾಮೀಲಾಗಿದ್ದಾರೆ ಎಂದು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಟ್‌ಕಾಯಿನ್ ಪ್ರಕರಣವನ್ನು ಮರುತನಿಖೆ ನಡೆಸಲು ಕಳೆದ ವರ್ಷ ಜುಲೈನಲ್ಲಿ ಎಸ್ಐಟಿ ರಚಿಸಿದೆ. ಹಿರಿಯ ಐಪಿಎಸ್ ಮನೀಶ್‌ ಕರ್ಬೀಕರ್ ನೇತೃತ್ವದ ತಂಡ ಶ್ರೀಕಿ ಸೇರಿದಂತೆ‌ ಇನ್ನಿತರ ಆರೋಪಿಗಳು ಹಾಗೂ ಆಗ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿತ್ತು. ಸದ್ಯ ವಶಕ್ಕೆ ಪಡೆದ ಐವರು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಳೆ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಎಸ್ಐಟಿ ಮನವಿ: ಈ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಹಾಗೂ ಮಾಹಿತಿಗಳಿದ್ದರೆ ಸಾರ್ವಜನಿಕರು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಪ್ರಧಾನ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ sitcid2023@ಗೆ ಇಮೇಲ್ ಮಾಡಬಹುದು. ಇದರ ಜೊತೆಗೆ 9480800151 ಸಂಖ್ಯೆಗೆ ವಾಟ್ಸ್​ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಬಿಟ್​ಕಾಯಿನ್ ಇಟಿಎಫ್​ ಷೇರು ವಹಿವಾಟಿಗೆ ಕೊನೆಗೂ ಅನುಮತಿ ನೀಡಿದ ಯುಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.