ETV Bharat / state

ಭ್ರಷ್ಟಾಚಾರ ಆರೋಪದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಅಶೋಕ್

author img

By ETV Bharat Karnataka Team

Published : Feb 11, 2024, 2:08 PM IST

ಭ್ರಷ್ಟಾಚಾರ ಆರೋಪದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಪ್ರತಿಪಕ್ಷ ನಾಯಕ ಆರ್ ಅಶೋಕ್  ಬೆಂಗಳೂರು  Bengaluru  CM Siddaramaiah  ಸಿಎಂ ಸಿದ್ದರಾಮಯ್ಯ
ಭ್ರಷ್ಟಾಚಾರ ಆರೋಪದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಅಶೋಕ್ ಆಗ್ರಹ

ಬೆಂಗಳೂರು: ''ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ, ರಾಜ್ಯದ ಜನತೆಯ ಕ್ಷಮೆ ಕೇಳಬೇಕು'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

"ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ರಚಿಸಿದೆ ಎಂಬ ಗುತ್ತಿಗೆದಾರರ ಆಪಾದನೆ ಸರಿ ಇದ್ದಂತಿದೆ" ಎಂದು ಹೈಕೋರ್ಟ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆಪಾದನೆ ಮಾಡಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಈಗ ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಕೊಟ್ಟು, ಕಮಿಷನ್ ಕೊಡದವರಿಗೆ ಹಣ ಬಿಡುಗಡೆ ಮಾಡದೆ ತನಿಖಾ ಆಯೋಗದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದೆ'' ಎಂದು ಟ್ವೀಟ್ ಮೂಲಕ ಆರ್​.ಅಶೋಕ್ ಆರೋಪಿಸಿದ್ದಾರೆ.

''ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಭ್ರಷ್ಟರನ್ನು ರಕ್ಷಿಸಲು ಹೋಗಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಈಗ ಮತ್ತೊಮ್ಮೆ ರಂಗೋಲಿ ಕೆಳಗೆ ತೂರಲು ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ, ತಮಗೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಿ ರಾಜ್ಯದ ಜನರ ಕ್ಷಮೆಯಾಚಿಸಬೇಕು'' ಎಂದು ಆಗ್ರಹಿಸಿದ್ದಾರೆ.

''ಸ್ವತಃ ರಾಜ್ಯದ ಉಚ್ಚ ನ್ಯಾಯಾಲಯವೇ ತಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿರುವಾಗ ಸಿಎಂ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಲು ತಮಗೆ ಅರ್ಹತೆ ಇಲ್ಲ'' ಎಂದು ಸರಣಿ ಟ್ವೀಟ್ ಮೂಲಕ ಸಿಎಂ ರಾಜೀನಾಮಗೆ ಅಶೋಕ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಮೂಲಕ ₹1,300 ಕೋಟಿ ಪಡೆದ ಬಿಜೆಪಿ; ಕಾಂಗ್ರೆಸ್‌ಗಿಂತ 7 ಪಟ್ಟು ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.