ETV Bharat / state

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳನ್ನ‌ ಖುಲಾಸೆಗೊಳಿಸಿದ ನ್ಯಾಯಾಲಯ - Second PUC question paper leak case

author img

By ETV Bharat Karnataka Team

Published : Apr 26, 2024, 2:12 PM IST

Court acquits 15 accused  Bengaluru
ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳನ್ನ‌ ಖುಲಾಸೆಗೊಳಿಸಿದ ನ್ಯಾಯಾಲಯ

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ 15 ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 2015-16ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಲ್ಲ 15 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ನಗರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶರಾದ ಮುರಳೀಧರ ಪೈ ಅವರು ಗುರುವಾರ ಪ್ರಕಟಿಸಿದ್ದಾರೆ. ಸಾಕ್ಷ್ಯಧಾರಗಳ ಕೊರತೆಯಿಂದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಅದರಂತೆ ಪ್ರಕರಣದಲ್ಲಿ ಒಟ್ಟು 19 ಮಂದಿ ಆರೋಪಿಗಳಿದ್ದರು. ಅವರ ಪೈಕಿ ವಿಚಾರಣೆ ಹಂತದಲ್ಲಿಯೇ ಆರೋಪಿಗಳಾಗಿದ್ದ ಓಬಳರಾಜು, ರುದ್ರಪ್ಪ ಮತ್ತು ರಂಗನಾಥ್‌ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲಾಗಿತ್ತು.

ಎರಡನೇ ಆರೋಪಿಯಾಗಿದ್ದ ಶಿವಕುಮಾರಯ್ಯ ಅಲಿಯಾಸ್‌ ಗುರೂಜಿ ವಿಚಾರಣಾ ಹಂತದಲ್ಲಿಯೇ ಸಾವನ್ನಪ್ಪಿದ್ದರು. ಹಾಗಾಗಿ, ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಉಳಿದಂತೆ ಕುಮಾರಸ್ವಾಮಿ, ಈರಮಲ್ಲಯ್ಯ, ಸಂತೋಷ್‌ ಅಗಸಿಮನಿ, ಕೆಂ.ಎಂ. ಮುರಳೀಧರ ಮತ್ತು ಅನಿಲ್‌ ಕುಮಾರ್‌ ಸೇರಿದಂತೆ 15 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರ ತೀರ್ಪು ಪ್ರಕಟಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ 126 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಆರೋಪಿಗಳ ವಿರುದ್ಧ ಹಲವಾರು ದಾಖಲಾತಿಗಳನ್ನು ಹಾಜರುಪಡಿಸಿತ್ತು. ಆದರೆ, ಆರೋಪಿಗಳ ಮೇಲಿನ ಆರೋಪಗಳನ್ನು ಸೂಕ್ತ ಸಾಕ್ಷ್ಯಧಾರಗಳ ಸಮೇತ ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ಮತ್ತು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೇ, ಹಾನಗಲ್‌ ಉಪ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಎಂಬುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿಲ್ಲ. ಪ್ರಕರಣದಲ್ಲಿ ಪ್ರಮುಖ ಕಾಲೇಜುಗಳು ಭಾಗಿಯಾಗಿದ್ದವು. ಈ ಅಂಶದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಆರೋಪಿಗಳ ಸ್ವಯಿಚ್ಛೆ ಹೇಳಿಕೆಗಳು ಮತ್ತು ತಪ್ಪೊಪ್ಪಿಗೆ ಹೇಳಿಕೆಗಳು ಒಂದೇ ತೆರನಾಗಿವೆ. ತಪ್ಪೊಪ್ಪಿಗೆ ಹೇಳಿಕೆಗಳನ್ನು ತಿರುಚಲಾಗಿದೆ. 13 ಮಂದಿ ಸಹಾಯಕ ತನಿಖಾ ಅಧಿಕಾರಿಗಳು ತನಿಖೆಗೆ ಸಹಕರಿಸಿದ್ದಾರೆ. ಆದರೆ, ಅವರು ಸಮರ್ಪಕ ರೀತಿಯಲ್ಲಿ ಮುಖ್ಯ ತನಿಖಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರೋಪಿಗಳ ಪರ ವಕೀಲರ ವಾದ: ಆರೋಪಿಗಳ ಮೊಬೈಲ್‌ಗೆ ಪ್ರಶ್ನೆ ಪತ್ರಿಕೆಗಳು ರವಾನೆಯಾದ ಮೂಲವನ್ನು ಹೇಳಲು ಎಫ್‌ಎಸ್‌ಎಲ್ ತಜ್ಞರಿಗೆ ಸಾಧ್ಯವಾಗಲಿಲ್ಲ. ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹೇರುವಲ್ಲಿ ಮತ್ತು ಕಾಯ್ದೆಯಡಿ ತನಿಖೆ ನಡೆಸಲು ಅನುಮತಿ ನೀಡುವುದರಲ್ಲಿ ಸ್ವತಂತ್ರವಾಗಿ ವಿವೇಚನೆ ಬಳಕೆಯಾಗಿಲ್ಲ. ಈ ಎಲ್ಲ ಕಾರಣಗಳಿಂದ ಆರೋಪಿಗಳ ವಿರುದ್ಧ ಆರೋಪಗಳು ಸಾಬೀತಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದು, ಅವರುಗಳನ್ನು ಖುಲಾಸೆಗೊಳಿಸಲಾಗುತ್ತಿದ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಪರ ವಕೀಲ ಆರ್‌.ಪಿ. ಚಂದ್ರಶೇಖರ್‌ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಏನು?: 2015–16ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿಭಾಗದ ಪರೀಕ್ಷೆ 2016 ಮಾ.21 ರಂದು ನಡೆದಿತ್ತು. ಅಂದು ಬೆಳಿಗ್ಗೆ 7.29ಕ್ಕೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ವಾಟ್ಸ್‌ ಆ್ಯಪ್‌ ಮೂಲಕ ಸೋರಿಕೆಯಾಗಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವು ಸಿಐಡಿಗೆ ವರ್ಗಾವಣೆಯಾಗಿತ್ತು.

ಇದನ್ನೂ ಓದಿ: ಎಲ್ಲೆಡೆ ಬಿರುಸಿನಿಂದ ಸಾಗಿದ ಮತದಾನ; ಈ ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು - Boycott of Voting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.