ETV Bharat / state

ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣ; ಒಂದೊಂದಾಗಿ ಮುಚ್ಚುತ್ತಿವೆ ಆರ್​ಒ ಘಟಕಗಳು - water problem

author img

By ETV Bharat Karnataka Team

Published : Apr 1, 2024, 7:33 PM IST

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಆರ್‌ಒ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್​ ಆಗಿವೆ.

ಆರ್​ಓ ಘಟಕಗಳು
ಆರ್​ಓ ಘಟಕಗಳು

ಬೆಂಗಳೂರು : ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯವಾಗಿ ಬಿಬಿಎಂಪಿ ಕೇಂದ್ರ, ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ನೂರಕ್ಕೂ ಹೆಚ್ಚು ಆರ್​ಒ ಘಟಕಗಳು ನೀರಿನ ಕೊರತೆಯಿಂದ ಸ್ಥಗಿತವಾಗಿವೆ.

ಬೇಸಿಗೆ ಆರಂಭವಾಗಿರುವುದರಿಂದ ಹಲವಾರು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಅಂತರ್ಜಲವೂ ಬತ್ತಿದೆ. ಈ ಹಿನ್ನೆಲೆ ನಗರದ ಕೆಲವೆಡೆ ಆರ್‌ಒ ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿ ಹೋಗಿದ್ದು, ಹಲವು ಕಡೆ ಮುಚ್ಚುವ ಸ್ಥಿತಿಗೆ ತಲುಪಿವೆ. ನಗರದಲ್ಲಿ 1,052 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 209 ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಉಳಿದ ಘಟಕಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಅನೇಕ ಘಟಕಗಳು ಮುಚ್ಚುವ ಹಂತದಲ್ಲಿವೆ.

ಕೆಲವು ಆರ್‌ಒ ಘಟಕಗಳಲ್ಲಿ ವಿದ್ಯುತ್‌ ಹಾಗೂ ನೀರಿನ ವೆಚ್ಚ ಹೆಚ್ಚಾಗುತ್ತಿದ್ದು, ಇದನ್ನು ನಿರ್ವಹಿಸಲು ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬೆಲೆಯನ್ನು 5 ರೂಪಾಯಿ ಬದಲಾಗಿ 10 ರೂಪಾಯಿಗೆ ಹೆಚ್ಚಿಸಲಾಗಿದೆ ಎನ್ನುವ ಆರೋಪವು ಕೇಳಿಬರುತ್ತಿದೆ. ಒಬ್ಬರಿಗೆ ಒಂದು ಕ್ಯಾನ್ ನೀರು ನಿಯಮದ ಜಾರಿಗೆ ತರಲಾಗಿದೆ. ಇನ್ನೂ ಹಲವೆಡೆ 20 ಲೀ. ನೀರಿನ ಕ್ಯಾನ್‌ಗಳಲ್ಲಿ 19 ಲೀಟರ್ ನೀರು ಮಾತ್ರ ತುಂಬುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಈ ಆರ್‌ಒ ಘಟಕಗಳನ್ನೇ ಅವಲಂಬಿಸಿದ್ದ ಸಣ್ಣ ಹೋಟೆಲ್‌ಗಳು, ಚಾಟ್ ಸೆಂಟರ್‌ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಮನೆಯಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಹೊಂದಲು ಸಾಧ್ಯವಾಗದ ಅನೇಕರಿಗೆ ಕೇವಲ 5 ರೂ. ಗೆ ದೊರೆಯುತ್ತಿದ್ದ 20 ಲೀ. ಕುಡಿಯುವ ನೀರು ಜೀವನಾಡಿಯಾಗಿತ್ತು. ಆದರೆ ಈ ಆರ್​ಒ ಘಟಕಗಳು ಸಹ ಮುಚ್ಚುತ್ತಿರುವುದು ಆತಂಕ ಹೆಚ್ಚಿಸಿದೆ.

ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರು, 224 ಆರ್.ಒ ಘಟಕಗಳು ನೀರಿನ ಅಭಾವವನ್ನು ಎದುರಿಸುತ್ತಿವೆ ಎನ್ನುವ ರಿಪೋರ್ಟ್ ಎಲ್ಲ ವಲಯಗಳಿಂದ ಬಂದಿದೆ. ಅಂತರ್ಜಲ ನೀರಿನ ಮಟ್ಟ ಸ್ಥಗಿತಗೊಂಡಿರುವುದರಿಂದ ಬೋರ್​ವೆಲ್ ನಲ್ಲಿ ನೀರು ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಮುಖ್ಯವಾಗಿ ಬೋರ್​ವೆಲ್​ಗಳ ಮೇಲೆ ಅವಲಂಬಿತವಾಗಿವೆ.

ಆದರೆ ಇದೀಗ ಪಾಲಿಕೆ ಮುಖ್ಯ ಆಯುಕ್ತರು ಬೆಂಗಳೂರು ಜಲಮಂಡಳಿಗೆ ಟ್ಯಾಂಕರ್ ನೀರನ್ನು ಒದಗಿಸಲು ಸೂಚಿಸಿದ್ದಾರೆ. ಈಗಾಗಲೇ 224 ಆರ್.ಒ ಘಟಕಗಳಲ್ಲಿ 62 ಅನ್ನು ಸುಸ್ಥಿತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಸುಮಾರು 162 ಘಟಕಗಳಿಗೆ ಇದೇ ಮಾದರಿಯಲ್ಲಿ ಮತ್ತೆ ಚಾಲನೆ ನೀಡಲಾಗುತ್ತದೆ. ಎಲ್ಲೂ ಹೆಚ್ಚಿನ ಬೆಲೆಯನ್ನು ನೀರಿಗಾಗಿ ಪಡೆಯಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಗಡುವು ಏಪ್ರಿಲ್ 7ರವರೆಗೆ ವಿಸ್ತರಣೆ - Bengaluru Water Scarcity

ETV Bharat Logo

Copyright © 2024 Ushodaya Enterprises Pvt. Ltd., All Rights Reserved.