ETV Bharat / state

ಬೆಂಗಳೂರಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಗಡುವು ಏಪ್ರಿಲ್ 7ರವರೆಗೆ ವಿಸ್ತರಣೆ - Bengaluru Water Scarcity

author img

By ETV Bharat Karnataka Team

Published : Mar 31, 2024, 8:18 AM IST

ನಲ್ಲಿಗಳಿಗೆ ಏರಿಯೇಟರ್‌ ಹಾಗೂ ಫ್ಲೋ ಕಂಟ್ರೋಲರ್‌ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ವಿಸ್ತರಿಸಲಾಗಿದೆ. ಸಾರ್ವಜನಿಕರ ಪಾಲುದಾರಿಕೆಯಿಂದ ಮಾತ್ರ ನೀರಿನ ಉಳಿತಾಯ ಸಾಧ್ಯ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಮನೋಹರ್ ಪ್ರಸಾತ್ ತಿಳಿಸಿದ್ದಾರೆ.

WATER SCARCITY
WATER SCARCITY

ಬೆಂಗಳೂರು: ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್​​ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಏರಿಯೇಟರ್‌ ಹಾಗೂ ಫ್ಲೋ ಕಂಟ್ರೋಲರ್‌ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನು ಏಪ್ರಿಲ್ 7ರವರೆಗೆ ವಿಸ್ತರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಮನೋಹರ್ ಪ್ರಸಾತ್ ಹೇಳಿದರು.

ಶನಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಏರಿಯೇಟರ್ ಅಳವಡಿಕೆಗೆ ಮಾರ್ಚ್ 31ರವರೆಗೆ ಗಡುವು ನೀಡಲಾಗಿತ್ತು. ಈಗಾಗಲೇ ಬಹಳಷ್ಟು ಕಡೆ ಏರಿಯೇಟರ್ ಅಳವಡಿಸಲಾಗಿದೆ. ಇನ್ನೂ ಹಲವು ಕಡೆ ಅಳವಡಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು ಎಂದರು.

ನೀರಿನ ಉಳಿತಾಯ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಅವರ ಪಾಲುದಾರಿಕೆಯಿಂದ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ. ಸಾರ್ವಜನಿಕರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಸಮಯಾವಕಾಶ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲೇ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ನಟ ಚಿರಂಜೀವಿ - Chiranjeevi

ಶೌಚಾಲಯಗಳಲ್ಲಿ ನೀರಿಲ್ಲ: ಬೇಸಿಗೆ ಆರಂಭದಲ್ಲೇ ಸಿಲಿಕಾನ್​ ಸಿಟಿಯಲ್ಲಿ ಜಲಕ್ಷಾಮ ಉಂಟಾಗಿದೆ. ಸಾರ್ವಜನಿಕ ಶೌಚಾಲಯಗಳಿಗೂ ನೀರಿನ ಸಮಸ್ಯೆ ಎದುರಾಗಿದೆ. ಈ ಬಿಕ್ಕಟ್ಟು ನಿವಾರಣೆಗೆ‌ ಬಿಬಿಎಂಪಿ, ಜಲಮಂಡಳಿ ಮತ್ತು ಸರ್ಕಾರ ಹರಸಾಹಸಪಡುತ್ತಿದೆ. ಆದರೂ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಪೋಲಾಗದಂತೆ ಈಗಾಗಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.

ರಾಜಧಾನಿಯಲ್ಲಿ 241 ವಾರ್ಡ್​ಗಳ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಒಟ್ಟು 800 ಇ-ಶೌಚಾಲಯಗಳಿವೆ. ನಿರೀಕ್ಷೆಗೂ ಮೀರಿ ಈ ಶೌಚಾಲಯಗಳನ್ನು ಶುಚಿ ಇಡಲಾಗುತ್ತಿತ್ತು. ಆದ್ರೆ ಈಗ ನೀರಿಲ್ಲ. ಇದರಿಂದಾಗಿ ಹಲವೆಡೆ ಇ-ಟಾಯ್ಲೆಟ್​ ಹಾಗೂ ಸಾರ್ವಜನಿಕರ ಶೌಚಾಲಯಗಳನ್ನು ಬಂದ್​ ಮಾಡಲಾಗುತ್ತಿದೆ.

ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಅಂತಹ ಪ್ರದೇಶಗಳಲ್ಲಿನ ಇ-ಶೌಚಾಲಯಗಳ ನಿರ್ವಹಣೆಗೆ ಟ್ಯಾಂಕ‌ರ್​ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ಟಾಯ್ಲೆಟ್ ಅನ್ನು ಅಧಿಕೃತವಾಗಿ ಮುಚ್ಚಿಲ್ಲ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ ಪ್ರತಿಕ್ರಿಯೆ ನೀಡಿದ್ದರು.

ನೀರು ಪೋಲು ಮಾಡಿದವರಿಗೆ ದಂಡ: ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ನೀರಿನ ಬಳಕೆಯನ್ನು ಮಿತವಾಗಿಸಬೇಕು ಹಾಗೂ ಅನಗತ್ಯವಾಗಿ ಕುಡಿಯುವ ನೀರಿನ ಪೋಲು ಮಾಡಬಾರದು ಎಂದು ಜಲಮಂಡಳಿ ಆದೇಶಿಸಿತ್ತು. ಈ ಆದೇಶವನ್ನು ನಗರದ ಹಲವು ಭಾಗಗಳಲ್ಲಿ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 22 ಮನೆಗಳಿಗೆ ದಂಡ ವಿಧಿಸಲಾಗಿದೆ. ಕಾರ್ ವಾಶ್‌ಗೆ ಕಾವೇರಿ ನೀರು ಬಳಕೆ ಮಾಡಿದ್ದಕ್ಕೆ ಕೆಲವರಿಗೆ 5 ಸಾವಿರ ರೂ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಕಾರ್ ವಾಶ್, ಗಾರ್ಡನ್‌ಗೆ ನೀರು ಬಳಸಿದ್ದಕ್ಕೆ ಜಲಮಂಡಳಿಯಿಂದ 22 ಮನೆಗಳಿಗೆ ದಂಡ - 22 Houses fined by water board

ETV Bharat Logo

Copyright © 2024 Ushodaya Enterprises Pvt. Ltd., All Rights Reserved.