ETV Bharat / state

ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ: ಪೊಲೀಸ್ ಆಯುಕ್ತ ದಯಾನಂದ್

author img

By ETV Bharat Karnataka Team

Published : Jan 20, 2024, 3:28 PM IST

ಪಿಎಸ್​ಐ ನೇಮಕಾತಿಯ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ವಿಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶಿಸಿದೆ.

Etv Bharat
Etv Bharat

ಬೆಂಗಳೂರು: ಜನವರಿ 23 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಬೆಂಗಳೂರಿನ ಒಟ್ಟು 117 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ-ಮಹಿಳಾ) ನೇಮಕಾತಿಗೆ ಮರು ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪಿಎಸ್​ಐ ನೇಮಕಾತಿಯ ಮರು ಪರೀಕ್ಷೆಗಳು ನಡೆಯುವ ಎಲ್ಲ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಘೋಷಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ಜನವರಿ 23 ರಂದು ಬೆಳಗ್ಗೆ 7-00 ಗಂಟೆಯಿಂದ ಪರೀಕ್ಷೆಯು ಮುಕ್ತಾಯಗೊಳ್ಳುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಘೋಷಿಸಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ: ಇನ್ನು ಪಿಎಸ್ಐ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಅಂತೆಯೇ ಚಂದ್ರಾಲೇಔಟ್ ಪೊಲೀಸರು, ಪಿಎಸ್​ಐಯೊಬ್ಬರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಸಿಸಿಬಿ ವಶಕ್ಕೆ ನೀಡಿದ್ದಾರೆ. ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ವಿಚಾರಣೆ ನಡೆಸಿದ್ದಾರೆ.

ಇದೇ 23 ರಂದು ನಡೆಯಲಿರುವ ಪಿಎಸ್ಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯಾ? ವೈರಲ್ ಆಗಿರುವ ವಾಟ್ಸ್​ಆ್ಯಪ್​ ಚಾಟ್ ಹಾಗೂ ಆಡಿಯೋ ಮೆಸೇಜ್ ಪೊಲೀಸ್​ ಅಧಿಕಾರಿಗೆ ಸಂಬಂಧಪಟ್ಟಿದೆಯಾ? ಯಾರಿಂದೆಲ್ಲ ಹಣ ಪಡೆಯಲಾಗಿದೆ? ಎಂಬ ಬಗ್ಗೆ ಸಿಸಿಬಿ ತೀವ್ರ ವಿಚಾರಣೆ ಆರಂಭಿಸಿದೆ. ಹಾಗೆಯೇ ಪಿಎಸ್​ಐ ಚಾಟಿಂಗ್ ಮಾಡಿರುವ ವ್ಯಕ್ತಿಗಳಿಗೂ ಸಿಸಿಬಿ ನೊಟೀಸ್ ನೀಡಿದ್ದು, ಅವರಿಂದಲೂ ಮಾಹಿತಿ ಪಡೆಯಲು ಮುಂದಾಗಿದೆ.

ಇದೇ ಜನವರಿ 23ರಂದು ನಡೆಯಲಿರುವ ಪಿಎಸ್ಐ ಮರು ಪರೀಕ್ಷೆಗೆ ಅಭ್ಯರ್ಥಿಗಳು ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಈಗ ಮತ್ತೆ ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇಂಟೆಲಿಜೆನ್ಸ್ ವಿಭಾಗದ ಸಬ್​ ಇನ್ಸ್​ಪೆಕ್ಟರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಬಳಿಕ ಸಿಸಿಬಿ ಪೊಲೀಸರು, ಇನ್ಸ್​ಪೆಕ್ಟರ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಮೊದಲು ಪಿಎಸ್​ಐ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರ ಆದೇಶಿಸಿತ್ತು. ಬಳಿಕ ಮರು ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಅಂತೆಯೇ ಸರ್ಕಾರ ಮರು ಪರೀಕ್ಷೆಗೆ ದಿನ ನಿಗದಿಪಡಿಸಿದ್ದು, ಈ ಮಧ್ಯೆ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಸುದ್ದಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ?; ಸಿಸಿಬಿಯಿಂದ ಸಬ್ ಇನ್ಸ್‌ಪೆಕ್ಟರ್ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.