ETV Bharat / state

ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಗೆಲ್ಲಿಸುವ ಜವಾಬ್ದಾರಿ ಅಶೋಕ್ ಹೆಗಲಿಗೆ: ಎಲ್ಲ ಕಡೆ ಸಾಥ್​ ನೀಡುವ ಅಭಯ ನೀಡಿದ ಹೆಚ್​​ಡಿಕೆ - Dr C N Manjunath

author img

By ETV Bharat Karnataka Team

Published : Mar 28, 2024, 10:39 PM IST

ಬಸವನಗುಡಿಯಲ್ಲಿರುವ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನಿವಾಸದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಯಿತು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ
ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ

ಬೆಂಗಳೂರು : ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿಯನ್ನು ಬಿಜೆಪಿ ನಾಯಕ ಆರ್. ಅಶೋಕ್ ವಹಿಸಿಕೊಂಡಿದ್ದಾರೆ. ಬೆಂಗಳೂರಿನ ನಾಲ್ಕೂ ಕ್ಷೇತ್ರದಲ್ಲಿ ಮಿತ್ರಪಕ್ಷಗಳು ಒಟ್ಟಾಗಿ ಕೆಲಸ ಮಾಡಿ, ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಬೇಕು ಎನ್ನುವ ನಿರ್ಧಾರವನ್ನು ಮಿತ್ರಪಕ್ಷಗಳ ನಾಯಕರ ಸಭೆಯಲ್ಲಿ ಕೈಗೊಳ್ಳಲಾಯಿತು.

ಬಸವನಗುಡಿಯಲ್ಲಿರುವ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನಿವಾಸದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ರವಿ ಸುಬ್ರಹ್ಮಣ್ಯ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಜಯನಗರ ಶಾಸಕ ರಾಮಮೂರ್ತಿ, ಸತೀಶ್ ರೆಡ್ಡಿ ಭಾಗಿಯಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ರಣತಂತ್ರದ ಕುರಿತು ಮೈತ್ರಿ ನಾಯಕರು ಸಮಾಲೋಚನೆ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ : ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ತಂತ್ರಗಾರಿಕೆ ಮಾಡಿದ್ದೇವೆ. ದೇಶದ ಜನರಿಗೆ ಮೋದಿ ಅವಶ್ಯಕತೆ ಇದೆ. ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ಎರಡು ಪಕ್ಷದ ಹೊಂದಾಣಿಕೆಯಿಂದ 28 ಕ್ಕೆ 28 ಕ್ಷೇತ್ರ ಗೆಲ್ಲಬೇಕು. ಬೆಂಗಳೂರು ಗ್ರಾಮಾಂತರದ ಜವಾಬ್ದಾರಿಯನ್ನು ಅಶೋಕ್ ಅವರಿಗೆ ನೀಡಿದ್ದೇವೆ ಎಂದು ನಗೆ ಬೀರಿದ ಕುಮಾರಸ್ವಾಮಿ, 28 ಕ್ಕೆ 28 ಕ್ಷೇತ್ರ ಗೆಲ್ಲುವ ಪ್ಲಾನ್ ಮಾಡಿದ್ದೇವೆ. ತಳ ಮಟ್ಟದಲ್ಲಿ ಕಾರ್ಯಕರ್ತರು ಒಟ್ಟಾಗಿ ಹೋಗಿದ್ದಾರೆ.

ತೇಜಸ್ವಿ ಸೂರ್ಯ ಜೆಪಿ ಭವನಕ್ಕೆ ಬಂದು ಸಭೆ ಮಾಡಿದ್ದಾರೆ. ಮೈಸೂರಿನಲ್ಲಿ ಸಭೆ ಮಾಡಿದ್ದೇವೆ. ಹಾಸನ ಪ್ರೀತಮ್ ಬಂಡಾಯ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುವ ಅಗತ್ಯವಿಲ್ಲ. ಪ್ರಜ್ವಲ್ ರೇವಣ್ಣ ಈಗಾಗಲೇ ನಾಮಿನೇಷನ್ ಹಾಕಿದ್ದಾರೆ. ಮತ್ತೊಮ್ಮೆ ಹಾಕ್ತಾರೆ. ಇದರೊಂದಿಗೆ ಕೊಪ್ಪಳ ಹಾಗೂ ತುಮಕೂರಿನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಸಮನ್ವಯದ ಕೊರತೆ ಎಲ್ಲೂ ಇಲ್ಲ ಎಂದರು.

ಕಾಂಗ್ರೆಸ್ ನಾಯಕರು ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದರು. ತಮಿಳುನಾಡಿನಲ್ಲಿ ಅವರ ಸ್ನೇಹಿತರು ಮೇಕೆದಾಟು ಯೋಜನೆಗೆ ಅವಕಾಶ ಕೊಡುತ್ತಿಲ್ಲ. ಇದನ್ನು ನಾವು ಗಮನಿಸುತ್ತಿದ್ದೇನೆ. ಬರಗಾಲದಲ್ಲಿ ದನಕರುಗಳಿಗೆ ನೀರಿಲ್ಲ. ಬೆಳೆಗಳು ಒಣಗಿ ಹೋಗಿದೆ. ಗ್ಯಾರಂಟಿಯ ಹಣ ಸಂಪೂರ್ಣವಾಗಿ ಯಾರಿಗೂ ತಲುಪಿಲ್ಲ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿಗಳು ಮೈಸೂರಲ್ಲಿ ಸಭೆ ಮಾಡಿದ್ದಾರೆ. ಅದೆನೋ ವಾಯುವಿಹಾರ ಕೂಡ ಮಾಡಿದ್ದಾರೆ. ಮೂರು ದಿನ ಸಭೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸಭೆ ಬಗ್ಗೆ ವ್ಯಂಗ್ಯವಾಡಿದರು.

ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನೇತೃತ್ವದಲ್ಲಿ ನಾಳೆ 11 ಗಂಟೆಗೆ ಸಭೆ ಇದೆ. ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿಯ ಹೊಂದಾಣಿಕೆ ಇರಬೇಕು ಎಂಬುದರ ಬಗ್ಗೆ ನಾಳೆ ಚರ್ಚೆ ಮಾಡುತ್ತೇವೆ. ಮೋದಿ ಮತ್ತು ದೇವೇಗೌಡರು ಒಂದು ಸಮಾವೇಶದಲ್ಲಿ ಒಟ್ಟಿಗೆ ಭಾಗಿ ಆಗಲಿದ್ದಾರೆ. ಆ ಬಗ್ಗೆ ಇನ್ನೂ ಚರ್ಚೆ ಆಗ್ತಾ ಇದೆ. ಒಂದು ಸಮಾವೇಶದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಇರಲಿದ್ದಾರೆ ಎಂದು ಹೇಳಿದರು.

ಸುಮಲತಾ ಅಂಬರೀಶ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ನನಗೇನು ಶಾಶ್ವತ ಶತ್ರುನಾ?. ಕೆಲವೊಂದು ರಾಜಕೀಯ ಬಿನ್ನಾಭಿಪ್ರಾಯ ಇರುತ್ತದೆ. ದೊಡ್ಡ ಮಟ್ಟದ ಸಮಸ್ಯೆ ಇಲ್ಲ. ಪುನಃ ಒಂದಾಗೋದು ರಾಜಕೀಯದ ಸ್ವಭಾವ. ಏನೂ ಸಮಸ್ಯೆಯಿಲ್ಲ. ಅವರು ಸಹ ಆಶೀರ್ವಾದ ಮಾಡಿದ್ದಾರೆ ಎಂದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಜೊತೆಗೆ ಸಭೆ ಮಾಡಿದ್ದೇವೆ. ಬೆಂಗಳೂರಲ್ಲಿ ಅತೀ ಹೆಚ್ಚು ಲೀಡ್​ನಲ್ಲಿ ಗೆಲ್ಲಬೇಕು. ಕಳೆದ ಬಾರಿ ಬೆಂಗಳೂರು ದಕ್ಷಿಣದಲ್ಲಿ 3.45 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆವು. ಈಗ ಐದು ಲಕ್ಷ ಅಂತರದಿಂದ ಗೆಲ್ಲಬೇಕು. ಬೆಂಗಳೂರು ಗ್ರಾಮಾಂತರ ಚುನಾವಣೆ ಹೃದಯವಂತ ಮತ್ತು ದುಷ್ಟರ ನಡುವೆ ನಡೆಯುವ ಚುನಾವಣೆ. ಅದನ್ನು ಗೆಲ್ಲಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚುತ್ತಾ ಇದ್ದಾರೆ. ಅವರಿಗೆ ಸೋಲೊದು ಗ್ಯಾರಂಟಿ ಅಂತ ಅನಿಸಿದೆ ಎಂದರು.

28 ಕ್ಷೇತ್ರ ಗೆಲ್ಲುವ ಬಗ್ಗೆ ಚರ್ಚೆ: ಕುಮಾರಸ್ವಾಮಿ ಮಂಡ್ಯದಲ್ಲಿ ಹಾಗೂ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಾರೆ. ವಿ. ಸೋಮಣ್ಣ 3 ರಂದು ನಾಮಿನೇಷನ್ ಮಾಡ್ತಾರೆ. ಎಲ್ಲಾ ಕಡೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹಾಲು ಜೇನಿನ ಹಾಗೆ ಕೆಲಸ ಮಾಡುತ್ತಾರೆ. ಕುಮಾರಸ್ವಾಮಿ ಅವರು ತೇಜಸ್ವಿಸೂರ್ಯ ಅವರಿಗೆ ಗೆಲ್ಲುವಂತೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಎನ್​ಡಿಎ ಹೊಂದಾಣಿಕೆಯಿಂದ ಒಟ್ಟಾಗಿ ಕೆಲಸ ಮಾಡಿ, 28 ಕ್ಷೇತ್ರ ಗೆಲ್ಲುವ ಬಗ್ಗೆ ಚರ್ಚೆ ಮಾಡಲಾಯಿತು ಎಂದರು.

ನಾವು ಕೇಂದ್ರದ ಸಾಧನೆಗಳು, ತೇಜಸ್ವಿ ಸೂರ್ಯ ಅವರ ಸಾಧನೆಗಳನ್ನ ಮನೆ ಮನೆಗಳಿಗೆ ತಲುಪಿಸುತ್ತೇವೆ. ಬೆಂಗಳೂರಿನಲ್ಲಿ ನಮಗೆ ವೋಟ್​​ ಕೇಳಲು ಧೈರ್ಯ ಇದೆ. ಬೆಂಗಳೂರಿಗೆ ಮೆಟ್ರೋ ತಂದಿದ್ದು ಬಿಜೆಪಿ. ಇಂಟರ್ ನ್ಯಾಷನಲ್ ಏಪೋರ್ಟ್, ಸಬ್ ಅರ್ಬನ್ ರೈಲ್ವೆ ತಂದಿದ್ದು ಬಿಜೆಪಿ. ಕಾಂಗ್ರೆಸ್​ನವರು ಬೆಂಗಳೂರನ್ನ ಹಾಳು ಮಾಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಂತ ಹೇಳಿ ಬಾಂಬ್ ಬೆಂಗಳೂರು ಮಾಡಿದ್ದಾರೆ. ಈಗ ನೀರು ಇಲ್ಲದೇ ಬಾಯ್ ಬಾಯ್ ಬೆಂಗಳೂರು ಮಾಡುತ್ತಿದ್ದಾರೆ ಎಂದು ಹೇಳಿದರು.

ಜನ ನೆಮ್ಮದಿ, ಅಭಿವೃದ್ಧಿಯನ್ನ ಬಯಸಿದ್ದಾರೆ : ಬೆಂಗಳೂರಿನಲ್ಲಿ ಉದ್ಯೋಗ ಕೊಡುವ ಕಂಪನಿಗಳು ನಗರವನ್ನ ಬಿಟ್ಟು ಹೋಗುತ್ತಿವೆ. ಇದೆಲ್ಲವನ್ನ ನೋಡಿ ಕಾಂಗ್ರೆಸ್​ಗೂ ಜನ ಬಾಯ್ ಬಾಯ್ ಅಂತ ಹೇಳೋ ಸಮಯ ಬಂದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಜನ ಈ ಬಾರಿ ಚುನಾವಣೆಯಲ್ಲಿ ಗೆಲುವಿನ ಅಂತರ ಹೆಚ್ಚು ಮಾಡಬೇಕಿದೆ. ನಾವು ಗೆಲ್ಲುತ್ತೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಜನ ನೆಮ್ಮದಿ, ಅಭಿವೃದ್ಧಿ ಬಯಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ಕುಮಾರಸ್ವಾಮಿ, ಆರ್. ಅಶೋಕ್ ನೇತೃತ್ವದಲ್ಲಿ ನಮ್ಮ ಲೋಕಸಭಾ ಕ್ಷೇತ್ರದ ಎಲ್ಲ ಶಾಸಕರು, ನಾಯಕರ ಜೊತೆ ಸಭೆ ನಡೆದಿದೆ. ಜನರ ಮನೆ ಮನೆಗೆ ಹೋಗಿ ಮೋದಿ ಸಾಧನೆಗಳ ಬಗ್ಗೆ ತಿಳಿಸಬೇಕಿದೆ. ಹೆಚ್ಚಿನ ಅಂತರದಿಂದ ಗೆಲುವಿಗಾಗಿ ಸಂಕಲ್ಪ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಕೇಂದ್ರದಿಂದ ಸಿಕ್ಕಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ನೀಡಿದೆ. ಬೆಂಗಳೂರಿನ ನಾಲ್ಕು ಕ್ಷೇತ್ರದಲ್ಲಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ.

ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಸಹಸ್ರಾರು ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಬೆಳಗ್ಗೆ 9:30 ರಂದು ಜಯನಗರದ ಮಯ್ಯಾಸ್ ಹೋಟೆಲ್ ಬಳಿ ಸೇರುವಂತೆ ಕ್ಷೇತ್ರದ ಜನರಿಗೆ ಕರೆ ನೀಡಿದ್ದೇನೆ ಎಂದರು. ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಬಳಿಕ, ರೆಸ್ಟ್ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರ ಪತನ ಆಗಲಿದೆ: ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.