ETV Bharat / state

ವಿಧಾನಸೌಧದಲ್ಲಿ ಸಿಎಂ ಜನಸ್ಪಂದನ ಕುಸಿದಿರುವ ಆಡಳಿತ ಯಂತ್ರದ ಪ್ರತಿಫಲನ: ಆರ್.ಅಶೋಕ್

author img

By ETV Bharat Karnataka Team

Published : Feb 8, 2024, 5:16 PM IST

ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ಇಂದು ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮ ಕುಸಿದಿರುವ ಆಡಳಿತದ ಜೀವಂತ ನಿದರ್ಶನ ಎಂದು ಆರ್.ಅಶೋಕ್​ ಟೀಕಿಸಿದ್ದಾರೆ.

ಸಿಎಂ ಜನಸ್ಪಂದನ ಕಾರ್ಯಕ್ರಮ ಕುರಿತು ಆರ್​ ಅಶೋಕ್​ ಟೀಕೆ
ಸಿಎಂ ಜನಸ್ಪಂದನ ಕಾರ್ಯಕ್ರಮ ಕುರಿತು ಆರ್​ ಅಶೋಕ್​ ಟೀಕೆ

ಬೆಂಗಳೂರು: ವಿಧಾನಸೌಧದ ಮುಂದೆ ನಡೆಯುತ್ತಿರುವ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಅದೇನೋ ಮಹಾ ದೊಡ್ಡ ಸಾಧನೆ ಅಂತ ಮೆರೆಯುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಅಸಲಿಗೆ ಅದು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ರಾಜ್ಯದಲ್ಲಿ 34 ಸಂಪುಟ ಸಚಿವರಿದ್ದಾರೆ. ಪ್ರತೀ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ ಮಂಡಳಿಗಳ ಅಧ್ಯಕ್ಷರಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳಿದ್ದಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಗಳಿವೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದೂರುಗಳಿಂದ ಬಸ್ಸು, ರೈಲು ಚಾರ್ಜು ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ದಿನವೆಲ್ಲಾ ಕಾದು ಸಿಎಂ ಮುಂದೆ ಕೈ ಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ನಿಮ್ಮ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅರ್ಜಿ ಹಿಡಿದು ಕೈ ಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಎಂದು ಸಾಮಾಜಿಕ ಜಾಲತಾಣ 'ಎಕ್ಸ್'​ ಮೂಲಕ ಕುಟುಕಿದ್ದಾರೆ.

ಜನಸ್ಪಂದನ ಎಂಬ ಪ್ರಚಾರಕ್ಕಾಗಿ ನಾಟಕವಾಡುವ ಬದಲು ಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲಾ ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವಂತೆ ಸೂಚನೆ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒ ಸಮ್ಮುಖದಲ್ಲಿ ಸ್ಥಳೀಯ ಮಟ್ಟದಲ್ಲೇ ಜನತಾ ದರ್ಶನ ನಡೆಸಿ ಅಲ್ಲೇ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೆ.ಜೆ.ಜಾರ್ಜ್ ರಾಜೀನಾಮೆ ನೀಡಲಿ: ಬೆಂಗಳೂರಿನಲ್ಲಿ ಕಳೆದ ನವೆಂಬರ್​ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗು ಮೃತಪಟ್ಟ ಪ್ರಕರಣಕ್ಕೆ ಇಲಿ ಕಾರಣ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಸಚಿವ ಕೆ.ಜೆ.ಜಾರ್ಜ್ ಅವರ ಹೊಣೆಗೇಡಿತನ ಈಗ ತನಿಖಾ ವರದಿಯಲ್ಲಿ ಬಯಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸಿಎಂ ಸಿದ್ದರಾಮಯ್ಯನವರು ಈ ಕೂಡಲೇ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: '10 ವರ್ಷಗಳ ಹಿಂದೆ ರಾಜ್ಯದ ತೆರಿಗೆ ಪಾಲು ಎಷ್ಟಿತ್ತೋ ಇಂದೂ ಅಷ್ಟೇ ಇದೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.