ETV Bharat / state

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ - Prahlad Joshi

author img

By ETV Bharat Karnataka Team

Published : Apr 8, 2024, 1:54 PM IST

Updated : Apr 8, 2024, 1:59 PM IST

'ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ನಿಲ್ಲುವ ಹಕ್ಕಿದೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್​ ವಿರುದ್ದ ಪ್ರಹ್ಲಾದ್ ಜೋಶಿ ವಾಗ್ದಾಳಿ
ಕಾಂಗ್ರೆಸ್​ ವಿರುದ್ದ ಪ್ರಹ್ಲಾದ್ ಜೋಶಿ ವಾಗ್ದಾಳಿ

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ''ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ದೇಶ, ಅಭಿವೃದ್ಧಿ, ನಾವು ಮಾಡಿರುವ ಕಾರ್ಯದ ಮೇಲೆಯೇ ನಡೆಯುತ್ತದೆ. ದಿಂಗಾಲೇಶ್ವರ ಸ್ವಾಮೀಜಿಗಳ ಸ್ಪರ್ಧೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ನಿಲ್ಲುವ ಹಕ್ಕಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ''ಕಳೆದ ಹತ್ತು ವರ್ಷದಲ್ಲಿ ಅಂದರೆ, ಮೋದಿಯವರು ಬರುವ ಮುಂಚೆ ದೇಶ ಹೇಗಿತ್ತು. ಈಗ ಹೇಗಿದೆ ಎಂಬುದು ಜನರಿಗೆ ಗೊತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದಮೇಲೆ ಭಾರತ ದೇಶ 5ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವ ಬೇಕೋ..? ರಾಹುಲ್ ಗಾಂಧಿ ಹಾಗೂ ಇತ್ಯಾದಿ ನೇತೃತ್ವ ಬೇಕೋ..? ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಇಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ ಮತಗಳು ಒಡೆಯುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ಇಲ್ಲಿ ಯಾವುದೇ ಜಾತಿ ಆಧಾರದ ಮೇಲೆ ಚುನಾವಣೆ ಆಗುವುದಿಲ್ಲ. ಜನರು ದೇಶದ ಅಭಿವೃದ್ಧಿ ಹಾಗೂ ಸದೃಢ ನಾಯಕತ್ವದ ಆಧಾರದ ಮೇಲೆ ಆಶೀರ್ವಾದ ಮಾಡುತ್ತಾರೆ'' ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಿಡಿ: ಇದಕ್ಕೂ ಮುನ್ನ ಬರ ಪರಿಹಾರ ವಿಚಾರವಾಗಿ ಕಾಂಗ್ರೆಸ್​ ಬಿಜೆಪಿ ವಿರುದ್ದ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ ಅವರು, ''ರಾಜ್ಯದ ಬರ ಕುರಿತು ಸುಪ್ರೀಂ ಕೋರ್ಟ್​ನಿಂದ ಎಲ್ಲವೂ ಸತ್ಯ ತಿಳಿದು ಬರಲಿದೆ. ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ ಇಷ್ಟು ಜನಪ್ರಿಯತೆ ಇದ್ದರೆ ದುಡ್ಡು ಕೊಡಬಹುದಿತ್ತು. ಕೇವಲ ಎರಡು ಸಾವಿರ ಕೊಡ್ತಿದ್ದೀರಿ'' ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಆರ್ಥಿಕ ಸ್ಥಿತಿ ಅಧೋಗತಿಗೆ: ''ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ಯಾರಂಟಿ ಯೋಜನೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಸರ್ಕಾರ ದೊಡ್ಡಮಟ್ಟದಲ್ಲಿ ಸಾಲ ಮಾಡಿದೆ. ಬರ ಸಮೀಕ್ಷೆಯ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಪಾಪ್ಯುಲಾರಿಟಿ ಇದ್ದ ರಾಜ್ಯ ಸರ್ಕಾರ ಎರಡು ಸಾವಿರ ಕೊಡುತ್ತಿದೆ, ನಾಚಿಕೆ ಆಗುವುದಿಲ್ಲವೇ? ಯಡಿಯೂರಪ್ಪ ಸಿಎಂ ಇದ್ದ ಸಂದರ್ಭದಲ್ಲಿ ಬರ ಹಾವಳಿ ಇದ್ದಾಗ ಸಾಕಷ್ಟು ಹಣ ಕೊಟ್ಟಿದ್ದೇವೆ. ಎಷ್ಟೇ ತೆರಿಗೆ ಜಾಸ್ತಿ ಮಾಡಿದರೂ ರಾಜ್ಯ ಸರ್ಕಾರದ ಆದಾಯ ಮಾತ್ರ ಜಾಸ್ತಿಯಾಗುತ್ತಿಲ್ಲ. ಮುದ್ರಾಂಕ ಶುಲ್ಕದಿಂದಲೂ ಕೂಡ ಯಾವುದೇ ರೀತಿಯಲ್ಲಿ ಆದಾಯ ಸ್ಥಿತಿ ಸರಿದೂಗುತ್ತಿಲ್ಲ. ಅಲ್ಲದೆ ದೊಡ್ಡ ಮಟ್ಟದ ಭ್ರಷ್ಟಾಚಾರದಿಂದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ'' ಎಂದು ಆರೋಪಿಸಿದರು.

ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ - Fakir Dingaleshwara Swamiji

Last Updated : Apr 8, 2024, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.