ETV Bharat / state

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ - Fakir Dingaleshwara Swamiji

author img

By ETV Bharat Karnataka Team

Published : Apr 8, 2024, 12:21 PM IST

Updated : Apr 8, 2024, 1:59 PM IST

ಶಿರಹಟ್ಟಿ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ

ದಿಂಗಾಲೇಶ್ವರ ಸ್ವಾಮೀಜಿ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಘೋಷಣೆ ಮಾಡಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀಗಳು, "ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ದ್ರೋಹವಾಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಘೋಷಣೆ ಮಾಡಿವೆ. ಆದರೆ ಮತದಾರರು ನಮ್ಮನ್ನು ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ, ಸ್ವಾರ್ಥಿ ರಾಜಕಾರಣಿಗಳ ವಿರುದ್ಧ, ಸ್ವಾಭಿಮಾನಿ ಧರ್ಮಗುರುಗಳು ಮಾಡಿದ ಧರ್ಮಯುದ್ಧ ಘೋಷಣೆ ಇದಾಗಿದೆ.‌ ಈ ಧರ್ಮಯುದ್ದ ಕೇವಲ ಈ ಚುನಾವಣೆಗೆ ಸೀಮಿತವಾಗಿಲ್ಲ. ಜೀವ ಇರುವವರೆಗೂ ಮುಂದುವರೆಯಲಿದೆ, ನೊಂದವರ ಕಷ್ಟಕ್ಕೆ ಸ್ಪಂಧಿಸಲು ರಾಜಕೀಯಕ್ಕೆ ಬರುತ್ತಿದ್ದೇನೆ" ಎಂದರು‌.

"ರಾಜ್ಯದಲ್ಲಿ ಲಿಂಗಾಯತ, ಗೌಡ ಜನಾಂಗ ಬಿಟ್ಟರೆ ಕುರುಬ ಸಮಾಜ ದೊಡ್ಡದಿದೆ. ಆದರೆ ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೆಟ್ ಬಿಜೆಪಿ ನೀಡಿಲ್ಲ, ರೆಡ್ಡಿ, ಜಂಗಮ,‌ ಲಂಬಾಣಿ ಸೇರು ನೂರಾರು ಸಮಾಜ ಅಲಕ್ಷ್ಯಕ್ಕೆ ಒಳಗಾಗಿದೆ. ಎಲ್ಲ ಸಮಾಜಗಳು ಇಂದು ಬಿಜೆಪಿಯಿಂದ ನೋವು ಅನುಭವಿಸಿವೆ. ಈಶ್ವರಪ್ಪಗೆ ಟಿಕೆಟ್ ಕೊಡಲಿಲ್ಲ, ಅವರ ಪುತ್ರ ಹಾವೇರಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದರೂ ವಂಚನೆ ಮಾಡಲಾಯಿತು. ರಾಷ್ಟ್ರೀಯ ನಾಯಕರು ಆ ಜಾತಿ ಅವಶ್ಯಕತೆ ನಮಗಿಲ್ಲ. ಈ ಜಾತಿ ಅವಶ್ಯಕತೆ ನಮಗಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ದೊಡ್ಡ ಸಂಖ್ಯೆ ಇರುವ ಸಮುದಾಯದ ಜನರಿಗೆ ಟಿಕೆಟ್​ ನೀಡದೆ ಕಡಿಮೆ ಜನಸಂಖ್ಯೆ ಇರುವ ಜಾತಿಗೆ ಮೂರು ಟಿಕೆಟ್ ಕೊಟ್ಟಿದ್ದಾರೆ. ಎಲ್ಲಿದೆ ಸಾಮಾಜಿಕ ನ್ಯಾಯ" ಎಂದು ಪ್ರಶ್ನಿಸಿದರು.

"ಕಳೆದ ಬಾರಿ 9 ಸಂಸದರು ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾದರು. ಆದರೆ ಒಬ್ಬರಿಗೂ ಸಂಪುಟ ದರ್ಜೆ ಸಚಿವ ಸ್ಥಾನ ಕೊಡಲಿಲ್ಲ. ಎರಡು ಪರ್ಸೆಂಟ್​​ ಜನ ಇರುವವರಿಗೆ ಸಂಪುಟದಲ್ಲಿ ಎರಡು ಸ್ಥಾನ ನೀಡಿದ್ದು, ಎಲ್ಲರಿಗೂ ಇವರ ಧೋರಣೆ ಗೊತ್ತಿದೆ. ವೀರಶೈವ ಸಮುದಾಯ ಮತ್ತು ಇತರ ಸಮುದಾಯ ಬಳಸಿಕೊಂಡು ನಂತರ ಕೈಬಿಡುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ದ್ರೋಹವಾಗಿದೆ" ಎಂದು ಟೀಕಿಸಿದರು.

"ಶಿಕ್ಷಣ ಖಾತೆ ತಾವಿಟ್ಟುಕೊಂಡು ಪಶುಸಂಗೋಪನೆ, ಅರಣ್ಯದಂತಹ ಖಾತೆಗಳನ್ನು ಲಂಬಾಣಿ ಸಮುದಾಯಕ್ಕೆ ಕೊಡುತ್ತಾ ಬರುತ್ತಿದ್ದಾರೆ. ಶಿಕ್ಷಣ ಕೇವಲ ನಮ್ಮ ಸ್ವತ್ತು ಎನ್ನುವುದು ಸಾವಿರಾರು ವರ್ಷಗಳ ಭ್ರಮೆ ಅವರದ್ದಾಗಿದೆ. ಪಶುಸಂಗೋಪನೆಯಂತಹ ಖಾತೆ ದಲಿತರಿಗೆ ಮೀಸಲು ಎನ್ನುವಂತೆ ನೋಡಿಕೊಂಡು ಬಂದಿದ್ದಾರೆ. ಸೋಮಣ್ಣಗೆ ಬೆಂಗಳೂರು ದಕ್ಷಿಣದಲ್ಲಿ ಕೊಡುವುದು ಬಿಟ್ಟು ತುಮಕೂರಿನಲ್ಲಿ ಟಿಕೆಟ್ ಕೊಡಲಾಗಿದೆ. ಇದರಿಂದ ಅಲ್ಲಿ ಲಿಂಗಾಯತ ನಾಯಕರು, ಸೋಮಣ್ಣ ನಡುವೆ ಮನಸ್ತಾಪ ಆಗುವಂತೆ ಮಾಡಿದ್ದಾರೆ".

"ಲಿಂಗಾಯತರು ಹೆಚ್ಚಿರುವ ಕಡೆ ಪ್ರಹ್ಲಾದ್​ ಜೋಶಿಯನ್ನು ನಿಲ್ಲಿಸಿದ್ದಾರೆ. ಅದರಂತೆ ಬ್ರಾಹ್ಮಣ ಪ್ರಾಬಲ್ಯ ಇರುವ ಕಡೆ ಲಿಂಗಾಯತ ಸೇರಿ ಇತರ ಸಮುದಾಯದವರನ್ನು ಯಾಕೆ ನಿಲ್ಲಿಸಲು ಮುಂದಾಗಲಿಲ್ಲ. ತೇಜಸ್ವಿ ಸೂರ್ಯರನ್ನು ಇಲ್ಲಿ ನಿಲ್ಲಿಸುವ ಬದಲು ಸೋಮಣ್ಣಗೆ ಟಿಕೆಟ್ ನೀಡಿ ತೇಜಸ್ವಿಗೆ ತುಮಕೂರಿಗೆ ಕಳಿಸಿದ್ದರೆ ಆಗ ಯಾರ ತಾಕತ್ತು ಎಷ್ಟು ಎಂಬದು ನೋಡಬಹುದಿತ್ತು. ಮತ ಹಾಕಲು ಲಿಂಗಾಯತ ಸೇರಿ ಇತರ ಸಮುದಾಯ ಬೇಕು. ಆಳಲಿಕ್ಕೆ ಮಾತ್ರ ಇವರು ಬೇಕು ಎನ್ನುವ ಧೋರಣೆ ಇವರದ್ದು" ಎಂದು ಕಿಡಿಕಾರಿದರು.

"ಕೊಪ್ಪಳ, ದಾವಣಗೆರೆ, ಹಾವೇರಿಯಲ್ಲಿ ಎರಡು ಮೂರು ಹಂತದಲ್ಲಿ ಲಿಂಗಾಯತ ಸಮುದಾಯ ಮುಗಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇವರಾದರೆ ಐದು ಅವಧಿ ಹತ್ತು ಅವಧಿಯಾದರೂ ಸರಿ ಅರ್ಹರು ಎಂದು ತೋರಿಸಿಕೊಂಡ ಬರುತ್ತಿದೆ. 99 ಉಪ ಪಂಗಡ ಲಿಂಗಾಯದದಲ್ಲಿ ಇವೆ, ಇದರಲ್ಲಿ 16 ಸಮುದಾಯ ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಇತರ ಒಳಪಂಗಡಗಳ ಸೇರಿಸುವ ಪ್ರಯತ್ನಕ್ಕೆ ಜೋಶಿ ಸಾಥ್​​ ನೀಡಿಲ್ಲ. ಜೋಶಿ ಒಡೆದಾಳುವಲ್ಲಿ ಹೀರೋ ಆಗಿ, ಅಭಿವೃದ್ಧಿ ವಿಚಾರದಲ್ಲಿ ಜೀರೋ ಆಗಿದ್ದಾರೆ" ಎಂದು ಟೀಕಿಸಿದರು.

"ಬಿಜೆಪಿಯಲ್ಲಿ ಮಾತ್ರವಲ್ಲ ಕಾಂಗ್ರೆಸ್​ನಲ್ಲೂ ಲಿಂಗಾಯತ ನಾಯಕರ ಅರ್ಹತೆಗೆ ತಕ್ಕ ಗೌರವ ಸಿಕ್ಕಿಲ್ಲ. ನಮ್ಮ ನಾಯಕರು ಹಾಗೂ ಸಮಾಜವನ್ನು ತುಳಿದಾಳುವಲ್ಲಿ ಜೋಶಿ ಪಾತ್ರ ಬಹಳ ದೊಡ್ಡದಾಗಿದೆ. ಹಾವೇರಿ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರನಿಗೆ ಅವಕಾಶ ವಂಚಿತರನ್ನಾಗಿ ಮಾಡಿದ್ದು ಜೋಶಿ. ಜೋಶಿ ಅವರನ್ನು ನಂಬಬೇಡಿ ಎಂದು ಮೊದಲೇ ಈಶ್ವರಪ್ಪಗೆ ಹೇಳಿದ್ದೆ'' ಎಂದರು.

"20 ವರ್ಷಗಳ ಅಧಿಕಾರಾವಧಿಯಲ್ಲಿ ಧಾರವಾಡ ಮತ್ತು ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಏನು ಮಾಡಿದರು? ಅಧಿಕಾರ ಹಾಗು ಸಂಪತ್ತಿನ ಮದದಲ್ಲಿ ಬದುಕುತ್ತಿದ್ದಾರೆ. 120 ಮಠಾಧಿಪತಿಗಳನ್ನು ಪಕ್ಷದ ಕಾರ್ಯಾಲಯ ಉದ್ಘಾಟನೆಗೆ ಕರೆದುಕೊಂಡು ಹೋಗಿ ಎಲ್ಲಾ ಲಿಂಗಾಯತ ಸಮುದಾಯದ ಮಠಾಧಿಪತಿಗಳ ನಾಯಕತ್ವ ವಹಿಸಿಕೊಂಡಿದ್ದೇನೆ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಜೋಶಿ ಹೆಸರು ಇರಲಿಲ್ಲ, ನಂತರ ಮಠಾಧಿಪತಿಗಳ ದುರುಪಯೋಗಪಡಿಸಿಕೊಂಡು ಲಿಂಗಾಯತ ಸಮುದಾಯ ನನ್ನ ಬಯಸಿದೆ ಎಂದು ಬಿಂಬಿಸಿಕೊಂಡು ಟಿಕೆಟ್ ಪಡೆದರು. ಮಠಗಳನ್ನು ರಾಜಕೀಯ ಕೇಂದ್ರ ಕಚೇರಿ ಮಾಡಿಕೊಂಡು, ಮಠ, ಮಠಾಧಿಪತಿಗಳು, ಸಮಾಜದ ತೇಜೋವಧೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಕ್ಕೆ ಮತದಾರರು ಅನಿವಾರ್ಯ ಆದರೆ ಮತದಾರರಿಗೆ ಪಕ್ಷ ಅನಿವಾರ್ಯವಿಲ್ಲ. ಬಸವಣ್ಣನವರನ್ನು ಮತಕ್ಕಾಗಿ ಬಿಜೆಪಿ ಕಾಂಗ್ರೆಸ್ ಬಳಸಿಕೊಂಡಿದೆ, ಅವರ ತತ್ವ ಸಿದ್ಧಾಂತ ಬಳಸಿಕೊಂಡಿಲ್ಲ, ಎರಡೂ ಪಕ್ಷಗಳು ಇದರಲ್ಲಿ ವಿಫಲವಾಗಿವೆ" ಎಂದು ಆರೋಪಿಸಿದರು.

"ನಾನು ಬ್ರಾಹ್ಮಣ ಸಮಾಜದ ವಿರೋಧಿಯಲ್ಲ, ಬ್ರಾಹ್ಮಣ ಸಮುದಾಯದ ಅಭಿಮಾನಿ. ನಮ್ಮ ಎರಡೂ ಮಠದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೇನೆ. ಯಾವ ಸಮುದಾಯವನ್ನೂ ವಿರೋಧಿಸಲ್ಲ. ರಾಜ್ಯ ಹಾಗೂ ರಾಷ್ಟ್ರವನ್ನಾಳುವ ನಾಯಕರಾಗಬೇಕು ಎನ್ನುವ ಅಪೇಕ್ಷೆ ಬ್ರಾಹ್ಮಣ ಸಮುದಾಯದವರೇ ವ್ಯಕ್ತಪಡಿಸುತ್ತಿದ್ದಾರೆ" ಎಂದರು.

"ಈ ಬಾರಿ ನಮ್ಮ ರಾಜಕೀಯ ಪ್ರವೇಶದಿಂದ ಜೋಶಿ ದುರಾಡಳಿತ ಕೊನೆ ಆಗಲಿದೆ. ಎರಡೂ ಪಕ್ಷದಲ್ಲಿ ನಮ್ಮ ಅಭಿಮಾನಿಗಳು ಭಕ್ತರಿದ್ದಾರೆ. ಹಾಗಾಗಿ, ಸ್ವತಂತ್ರ ಅಭ್ಯರ್ಥಿ ಆಗಿ ಕಣಕ್ಕಿಳಿಯುತ್ತಿದ್ದೇನೆ. ಇದು ಸ್ವಾಭಿಮಾನದ ಧರ್ಮಯುದ್ದವಾಗಿದೆ. ನಮ್ಮ ರಾಜಕೀಯ ಪ್ರವೇಶ ನನ್ನ ನಿರ್ಧಾರವಲ್ಲ ಕ್ಷೇತ್ರದ ಮತದಾರರು ಕೈಗೊಂಡ ತೀರ್ಮಾನವಾಗಿದೆ. ಬಿಜೆಪಿ ಈಶ್ವರಪ್ಪರನ್ನು ಬಳಸಿಕೊಂಡಿತು. ದೆಹಲಿಗೆ ಆಹ್ವಾನಿಸಿ ಕನಿಷ್ಠ ಭೇಟಿಯನ್ನೂ ಮಾಡುವ ಸೌಜನ್ಯ ತೋರದಿರುವುದು ಅವರ ಅಹಂಕಾರಕ್ಕೆ ಹಿಡಿದ ಕೈಗನ್ನಡಿ" ಎಂದು ಹೇಳಿದರು.

ರಾಜಕೀಯ ಪಕ್ಷದಿಂದ ಸ್ಪರ್ಧೆ ವದಂತಿ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀಗಳು, "ಎರಡೂ ಪಕ್ಷ ಎಲ್ಲಿಯೂ ಟಿಕೆಟ್ ಕೊಡುವ ಹೇಳಿಕೆ ನೀಡಿಲ್ಲ. ನಾನೂ ಯಾರ ಮನೆಯ ಬಾಗಿಲಿಗೂ ಹೋಗಿಲ್ಲ, ಸುದ್ದಿ ಹೇಗೆ ಹರಿದಾಡಿತೋ ಗೊತ್ತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ. ಮುಂದೆ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಅವಕಾಶ ಬಂದರೆ ಮತದಾರರ ಮುಂದೆ ಹೋಗಿ ನಿರ್ಣಯ ಮಾಡಲಾಗುತ್ತದೆ. ನಾನು ನೇರವಾಗಿ ನಿರ್ಧಾರ ಕೈಗೊಳ್ಳಲಾಗಲ್ಲ" ಎಂದು ತಿಳಿಸಿದರು.

ಮುಂದುವರೆದು, "ಮೋದಿ ಜೊತೆ ಮಾತನಾಡುವ ಅವಕಾಶ ಇದ್ದರೆ ಹತ್ತು ವರ್ಷದ ಹಿಂದೆಯೇ ಇವರ ದುರಾಡಳಿತದ ವಿರುದ್ಧ ಹೇಳುತ್ತಿದ್ದೆ. ಈಶ್ವರಪ್ಪಗೆ ಅವಕಾಶ ಸಿಕ್ಕಿಲ್ಲ. ಇನ್ನು ನನಗೆ ಸಿಗಲಿದೆಯಾ?. ಪ್ರಧಾನಿ ಬಳಿ ಯಾವ ಸಂಸದರನ್ನೂ ಬಿಡದಂತೆ ನೋಡಿಕೊಂಡಿದ್ದಾರೆ. ಲಿಂಗಾಯತ ಸಂಸದರು ತಿಳಿದು ಆಡಳಿತ ಮಾಡಿದರೆ, ಜೋಶಿ ತುಳಿದು ಆಡಳಿತ ಮಾಡಿದರು" ಎಂದು ಆರೋಪಿಸಿದರು.

"ಈಗ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಬದಲಿಸಿ, ನನಗೆ ಟಿಕೆಟ್ ನೀಡುವ ನಿರ್ಧಾರ ಮಾಡಿದಲ್ಲಿ, ಆಗ ಆ ಬಗ್ಗೆ ವಿಚಾರ ಮಾಡಲಾಗುತ್ತದೆ. ಸದ್ಯಕ್ಕೆ ಸ್ವತಂತ್ರ ಅಭ್ಯರ್ಥಿ ಆಗಿ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ" ಎಂದು ದಿಂಗಾಲೇಶ್ವರ ಶ್ರೀಗಳು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನು ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ, ಮುಂದೆ ಪ್ರಧಾನಿಯಾಗಲೂಬಹುದು; ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ - Samyuktha Patil

Last Updated :Apr 8, 2024, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.