ETV Bharat / state

ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿ ತಲೆ ಕಡಿದು ಕೊಲೆ; ಆರೋಪಿಗಾಗಿ ಪೊಲೀಸರ​ ಶೋಧ - Kodagu Girl Murder

author img

By ETV Bharat Karnataka Team

Published : May 10, 2024, 8:38 PM IST

ಕೊಡಗಿನಲ್ಲಿ ನಡೆದ ಅಪ್ರಾಪ್ತೆ ಕೊಲೆ ಪ್ರಕರಣದ ಆರೋಪಿಗಾಗಿ ಶೋಧ ಮುಂದುವರೆದಿದೆ. ಗುರುವಾರ ಸೋಮವಾರಪೇಟೆ ತಾಲೂಕಿನಲ್ಲಿ ಭೀಕರ ಹತ್ಯೆ ನಡೆದಿತ್ತು.

kodagu girl murder
ಪ್ರಕಾಶ್ (ETV Bharat)

ಕೊಡಗು: ಸೋಮವಾರಪೇಟೆಯಲ್ಲಿ ನಿಶ್ಚಿತಾರ್ಥ ಮುಂದೂಡಿಕೆಯಾದ ಕೋಪದಲ್ಲಿ 16 ವರ್ಷದ ಬಾಲಕಿಯ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಕಾಶ್ (35) ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಯುವಕನ ಶವ ಪತ್ತೆಯಾಗಿದೆ ಎಂಬುದು ವದಂತಿ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್​​ಪಿ, ಬಾಲಕಿ ಕೊಲೆ ಮಾಡಿ ರುಂಡ ತೆಗೆದುಕೊಂಡು ಹೋಗಿರುವ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ. ಈ ನಡುವೆ ಯುವಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಹರಡಿದೆ. ಆದರೆ, ಆತ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮದುವೆ ನಿಶ್ಚಿತಾರ್ಥ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಕುಪಿತಗೊಂಡ ಆರೋಪಿ ಪ್ರಕಾಶ್​​, ಗುರುವಾರ ಬಾಲಕಿಯ ತಲೆ ಕಡಿದು ಕೊಲೆ ಮಾಡಿದ್ದ. ಬಳಿಕ ಆರೋಪಿಯು ಪರಾರಿಯಾಗಿದ್ದಾನೆ. ಸೋಮವಾರಪೇಟೆಯ ಸೂರ್ಲಬ್ಬಿ ಗ್ರಾಮದ ಹಮ್ಮಿಯಾಲದಲ್ಲಿ ಘಟನೆ ನಡೆದಿತ್ತು. ಎಸ್​ಎಸ್​ಎಲ್​ಸಿ ಫಲಿತಾಂಶ ಬಂದ ಸಂಭ್ರಮದಲ್ಲಿದ್ದ ಬಾಲಕಿ ಯುವಕನ ಕೋಪಕ್ಕೆ ಬಲಿಯಾಗಿದ್ದಳು. ಬಾಲಕಿಯ ರುಂಡ ಕೂಡ ಇನ್ನೂ ಪತ್ತೆಯಾಗಿಲ್ಲ, ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣದ ವಿವರ: ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ, ಅಪ್ರಾಪ್ತೆಯ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಎರಡೂ ಕಡೆಯ ಪೋಷಕರನ್ನು ಮನವೊಲಿಸಿದ್ದರು. ಬಾಲಕಿ 18 ವರ್ಷ ದಾಟಿದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡುವುದಾಗಿ ಎರಡೂ ಮನೆಯ ಪೋಷಕರು ಒಪ್ಪಿದ್ದರು. ಬಳಿಕ ಅಧಿಕಾರಿಗಳು ಮತ್ತು ಯುವಕನ ಮನೆಯವರು ಬಾಲಕಿಯ ಮನೆಯಿಂದ ತೆರಳಿದ್ದರು.

ಆದರೆ, ನಿಶ್ಚಿತಾರ್ಥ ನಡೆಯದ್ದರಿಂದ ಯುವಕ ಕೋಪಗೊಂಡಿದ್ದು, ಸಂಜೆ ವೇಳೆಗೆ ಬಾಲಕಿಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಬಾಲಕಿಯನ್ನು ಮನೆಯಿಂದ 100 ಮೀಟರ್​​ ದೂರದವರೆಗೆ ಎಳೆದೊಯ್ದು, ಆಕೆಯ ತಲೆ ಕಡಿದು ಕೊಲೆ ಮಾಡಿದ್ದಾನೆ. ತದನಂತರ ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರಿಗೆ ಚಿಕಿತ್ಸೆ, ಭದ್ರತೆ: ''ಆಸ್ಪತ್ರೆಯಲ್ಲಿರುವ ಮೀನಾ ತಂದೆ ಸುಬ್ರಹ್ಮಣಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೈಗೆ ಏಟು ಬಿದ್ದು ಗಂಭೀರ ಗಾಯಾಳುವಾಗಿರುವ ಮೀನಾ ತಾಯಿ ಜಾನಕಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೂರ್ಲಬ್ಬಿ, ಮುಟ್ಲು ಗ್ರಾಮದಲ್ಲಿಯೂ 8 ಶಸಸ್ತ್ರ ತಂಡದ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಆರೋಪಿ ಪ್ರಕಾಶ್ ಮತ್ತೆ ಮನೆ ಮಂದಿಯ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸುವ ಸಾಧ್ಯತೆ ಹಿನ್ನೆಲೆ ಪೊಲೀಸ್​​ ಭದ್ರತೆ ಕಲ್ಪಿಸಲಾಗಿದೆ. ಕೃತ್ಯದ ವೇಳೆ ಆರೋಪಿ ಪ್ರಕಾಶ್ ಜತೆಗೆ ಮತ್ತೋರ್ವನಿದ್ದ, ಆತ ಮತ್ತು ಪ್ರಕಾಶ್ ಬಳಸಿದ್ದ ವಾಹನದ ಪತ್ತೆಗೂ ಕ್ರಮ ವಹಿಸಲಾಗಿದೆ'' ಎಂದು ಎಸ್​​ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿಯಲ್ಲಿ ಪಾಸ್​ ಆಗಿದ್ದ ಬಾಲಕಿ: ಮೃತ ಬಾಲಕಿಯು ಗುರುವಾರ ಪ್ರಕಟವಾದ ಎಸ್ಎಸ್​ಎಲ್​ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದಿದ್ದಳು. ಆದರೆ, ಪರೀಕ್ಷೆ ಫಲಿತಾಂಶದ ಖುಷಿಯಲ್ಲಿದ್ದಾಗಲೇ ಕೊಲೆಯಾಗಿದ್ದಳು.

ಇದನ್ನೂ ಓದಿ: ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಆರೋಪಿ ಪರಾರಿ - Kodagu Girl Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.