ETV Bharat / state

ನಮ್ಮ ಶಿಕ್ಷಣ ಸಂಸ್ಥೆಗಳು ವಿಶ್ವ ದರ್ಜೆಯ ಕೌಶಲ್ಯ ಜ್ಞಾನ ಒದಗಿಸಬೇಕು: ಥಾವರ್ ಚಂದ್ ಗೆಹ್ಲೋಟ್

author img

By ETV Bharat Karnataka Team

Published : Mar 3, 2024, 5:57 PM IST

KSOU 9th Convocation
ಕೆಎಸ್ಒಯು 9ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು.

ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಡಾ.ಎಚ್.ಸಿ.ಸತ್ಯನ್​, ಕೆ.ಎಂ.ವೀರೇಶ್ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು.

ಮೈಸೂರು: ನಮ್ಮ ಶಿಕ್ಷಣ ಸಂಸ್ಥೆಗಳು ಭಾರತದ ಭವಿಷ್ಯದ ಪೀಳಿಗೆಗಾಗಿ ವಿಶ್ವ ದರ್ಜೆಯ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುವ ಜೊತೆಗೆ ಉತ್ತಮ ಮಾರ್ಗದರ್ಶನವನ್ನು ಸಹ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತವನ್ನು ಜ್ಞಾನದ ಸೂಪರ್ ಪವರ್ ಮಾಡುವುದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯ ಮಹತ್ವದ್ದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ನಾವೀನ್ಯತೆ ಕುರಿತು ವಿದ್ಯಾರ್ಥಿಗಳನ್ನು ಉತ್ತೇಜಿಸುವುದರಿಂದ ಇದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಈ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಎಚ್.ಸಿ. ಸತ್ಯನ್​, ಕೆ.ಎಂ. ವೀರೇಶ್ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಸನ್ಮಾನಿಸಲಾಗಿದೆ. ದೇಶದ ಪ್ರಗತಿಗೆ ಕೊಡುಗೆ ನೀಡಿದ ಇಂಥ ಮಹಾನ್ ವ್ಯಕ್ತಿಗಳನ್ನು ವಿಶ್ವವಿದ್ಯಾಲಯ ಗುರುತಿಸಿರುವುದು ಸಂತೋಷದ ಸಂಗತಿ. ಡಾಕ್ಟರೇಟ್ ಸ್ವೀಕರಿಸಿದ ಗಣ್ಯರಿಗೆ ಅಭಿನಂದಿಸುತ್ತ, ಸಮಾಜ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಸಾಧಕರು ಹೀಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದರು.

Graduate students from Karnataka Open University
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು

ಪ್ರಾಚೀನ ಕಾಲದಿಂದ ಭಾರತ ವಿಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿ: ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕರಿಸುತ್ತದೆ. ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಪ್ರಾಚೀನ ಕಾಲದಿಂದಲೂ ಭಾರತವು ಜ್ಞಾನ, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು. ಅದಕ್ಕಾಗಿ ನಾವು ವಿಶ್ವ ನಾಯಕರೆಂದು ಪರಿಗಣಿಸಲ್ಪಟ್ಟಿದ್ದೇವೆ. ನಮ್ಮ ಆರ್ಥಿಕತೆ ಪ್ರಬಲವಾಗಿತ್ತು. ಅದಕ್ಕಾಗಿ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯಲಾಯಿತು ಎಂದು ಹೇಳಿದರು.

ಜೀವನದ ಯಶಸ್ಸಿನಲ್ಲಿ ಶಿಕ್ಷಣವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉಪಯುಕ್ತವಾಗಿದೆ. ಒಬ್ಬ ವ್ಯಕ್ತಿಯು ಶಿಕ್ಷಣ ಪಡೆದಾಗ ಅವನ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಶಿಕ್ಷಣವು ನಮಗೆ ಆಲೋಚನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಭಾರತ ಯುವಕರ ದೇಶ. ಭಾರತದ ಜನಸಂಖ್ಯೆ ಸುಮಾರು 65 ಪ್ರತಿಶತದಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಯುವಕರು ದೇಶದ ಭವಿಷ್ಯ ಹಾಗೂ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ. ಯುವಕರು ದೇಶದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕೆಂದು ನಿರೀಕ್ಷಿಸಲಾಗಿದೆ.

ವಿಶ್ವದ ಅತಿದೊಡ್ಡ ಆರ್ಥಿಕತೆ: ಸ್ವಾತಂತ್ರ್ಯದ ನಂತರ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ದೇಶವನ್ನು ಮತ್ತಷ್ಟು ಬಲಪಡಿಸುವ ಮೂಲಕ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಮಾಡಲು ನಿರ್ಧರಿಸಲಾಗಿದೆ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ, ಪರಿಸರ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಯುವಕರ ಪಾತ್ರ ಮತ್ತು ಭಾಗವಹಿಸುವಿಕೆ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಾರಂಭದಿಂದಲೂ, ಉನ್ನತ ಶಿಕ್ಷಣದ ರಾಷ್ಟ್ರೀಯ ಉದ್ದೇಶಗಳನ್ನು ಸಾಧಿಸಲು ಬದ್ಧವಾಗಿದೆ. ಕೆಎಸ್ಒಯು ಎಲ್ಲ ವಯಸ್ಸಿನ ವ್ಯಕ್ತಿಗಳಿಗೆ ದೂರ ಶಿಕ್ಷಣದ ಮೂಲಕ ಪದವಿ ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಇತ್ತೀಚೆಗೆ 67 ವರ್ಷದ ವೃದ್ಧನಿಗೆ ಪದವಿ ಪ್ರದಾನ ಮಾಡುವ ಮೂಲಕ ಶೈಕ್ಷಣಿಕ ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೆಎಸ್ಒಯು ದೇಶದ ಮೊದಲ ಮುಕ್ತ ವಿಶ್ವವಿದ್ಯಾಲಯ: NAAC ನಿಂದ A+ ಗ್ರೇಡ್ ಪಡೆದಿರುವ ಈ ವಿಶ್ವವಿದ್ಯಾನಿಲಯವು ಯುಜಿಸಿ-ದೂರ ಶಿಕ್ಷಣ ಬ್ಯೂರೋದಿಂದ ಅನೇಕ ಕಾರ್ಯಕ್ರಮಗಳ ಆದೇಶವನ್ನು ನೀಡಿದೆ. ಕೆಎಸ್ಒಯು ದೇಶದ ಮೊದಲ ಮುಕ್ತ ವಿಶ್ವವಿದ್ಯಾಲಯವಾಗಿದೆ. 45 ಆಫ್‌ಲೈನ್ ಮತ್ತು 10 ಆನ್‌ಲೈನ್ ಮಾನ್ಯತೆ ಪಡೆದ ಕಾರ್ಯಕ್ರಮಗಳನ್ನು ಹೊಂದಿದೆ. ಶೈಕ್ಷಣಿಕ ಉತ್ಕೃಷ್ಟತೆ, ಮೂಲಸೌಕರ್ಯ ವರ್ಧನೆ, ಅಧ್ಯಾಪಕರ ಬೆಂಬಲ ಮತ್ತು ಕಲಿಕಾ ಕೇಂದ್ರಿತ ಉಪಕ್ರಮಗಳು ಹೊಂದಿದೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಕುಲಪತಿ ಪ್ರೊ. ಶರಣಪ್ಪ ವಿ. ಹಲ್ಸೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂಓದಿ:ಮೈಸೂರು ವಿವಿ ಘಟಿಕೋತ್ಸವ: ಎಸ್.ಎಂ.ಕೃಷ್ಣ, ಜಾವಗಲ್ ಶ್ರೀನಾಥ್ ಸೇರಿ ನಾಲ್ವರಿಗೆ ಗೌರವ ಡಾಕ್ಟರೇಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.