ETV Bharat / state

ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮೈಸೂರು ಜಿಲ್ಲೆ: ಉಪನಿರ್ದೇಶಕರು ಹೇಳಿದ್ದೇನು? - SSLC exam result

author img

By ETV Bharat Karnataka Team

Published : May 9, 2024, 6:28 PM IST

ಎಸ್​ ಎಸ್​ ಎಲ್​ ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ಈ ಬಾರಿ 7ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುವ ಕುರಿತು ಡಿಡಿಪಿಐ ಎಚ್ ಕೆ ಪಾಂಡು ಅವರು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

DDPI HK Pandu spoke to ETV Bharat.
ಡಿಡಿಪಿಐ ಎಚ್ ಕೆ ಪಾಂಡು ಈಟಿವಿ ಭಾರತ್​ದೊಂದಿಗೆ ಮಾತನಾಡಿದರು. (Etv Bharat)

ಮೈಸೂರು: ಈ ಬಾರಿ SSLC ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನ ಪಡೆದಿದ್ದು, ಕಳೆದ ಬಾರಿ 19ನೇ ಸ್ಥಾನದಿಂದ ಈ ಬಾರಿ 7ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್ ಕೆ ಪಾಂಡು ಈಟಿವಿ ಭಾರತ ಜೊತೆ ಈ ಸಾಧನೆ ಹಿಂದಿನ ಗುಟ್ಟನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಹಳೆ ಮೈಸೂರು ಶಿಕ್ಷಣ ಕಾಶಿ ಎಂದು ಒಂದು ಕಾಲದಲ್ಲಿ ಹೆಸರು ಪಡೆದಿದ್ದ ಮೈಸೂರು ಜಿಲ್ಲೆ ಕಳೆದ 2-3 ವರ್ಷದಿಂದ SSLC ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿತ್ತು. ಈ ಬಗ್ಗೆ ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ KDP ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಉತ್ತಮ ಫಲಿತಾಂಶ ಬರುವ ಕಡೆ ಗಮನಹರಿಸಿ ಎಂಬ ಮಾತನ್ನು ಸಹ ಹೇಳಿದ್ದರು. ಅದೇ ರೀತಿ ಈ ಬಾರಿ ಮೈಸೂರು ಜಿಲ್ಲೆ SSLC ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.

19ರಿಂದ 7ನೇ ಸ್ಥಾನಕ್ಕೆ ಜಿಗಿದ ಮೈಸೂರು ಜಿಲ್ಲೆ : 2023 ಹಿಂದಿನ ವರ್ಷ ಮೈಸೂರು ಜಿಲ್ಲೆಯು SSLC ಪರೀಕ್ಷೆ ಫಲಿತಾಂಶದಲ್ಲಿ 19ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈ ವರ್ಷ 7ನೇ ಸ್ಥಾನಕ್ಕೆ ಜಿಗಿದು ಉತ್ತಮ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 38,175 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದು, ಅದರಲ್ಲಿ 32,639 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ 85.5 ರಷ್ಟು ಫಲಿತಾಂಶ ಬಂದಿರುವುದು ಉತ್ತಮ ಸಾಧನೆ ಆಗಿದೆ. ಅದರಲ್ಲಿ ಮೈಸೂರಿನ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಧನ್ವಿ 625 ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕಾರ್ಯ ಯೋಜನೆ ರೂಪಿಸಿದ್ದೆವು: ಉಪನಿರ್ದೇಶಕ ಪಾಂಡು
ಮುಖ್ಯಮಂತ್ರಿಗಳ ತವರು ಜಿಲ್ಲೆ ಆಗಿರುವುದರಿಂದ ಎಸ್​ ಎಸ್​ ಎಲ್ ಸಿಯಲ್ಲಿ ಈ ಸಾರಿ ಒಂದು ಒಳ್ಳೇ ಫಲಿತಾಂಶ ತರಬೇಕು ಎಂದು ಜಿಲ್ಲಾ ತಂಡಗಳನ್ನು ರಚಿಸಿ ಕಾರ್ಯಯೋಜನೆ ಹಮ್ಮಿಕೊಂಡಿದ್ದೆವು. ಹಿಂದಿನ ಬಾರಿ 19ನೇ ಸ್ಥಾನದಲ್ಲಿದ್ದೆವು, ಈ ಬಾರಿ ಏನಾದ್ರೂ ಮಾಡಿ 5ನೇ ಸ್ಥಾನದ ಒಳಗಡೆ ತರಬೇಕೆಂದು ನಿರ್ಧಾರ ತೆಗೆದುಕೊಂಡಿದ್ದೆವು ಎಂದರು.

ಇದಕ್ಕೆ ಸಂಬಂಧಪಟ್ಟ ಒಳ್ಳೆ ಮಾರ್ಗದರ್ಶನ ಕೊಟ್ಟಿದ್ದು ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ತಾಲೂಕುಗಳ ಶಾಸಕರು ಸಪೋರ್ಟ್ ಕೊಟ್ಟರು. ಅದರ ಜೊತೆಗೆ ನಮ್ಮ ಶಿಕ್ಷಣ ಅಧಿಕಾರಿಗಳು ಉತ್ತಮವಾದ ಸಂಪನ್ಮೂಲ ಕೈಪಿಡಿ ಎಲ್ಲವನ್ನೂ ಸಪೋರ್ಟ್ ಮಾಡಿದ್ದರು. ಆದ್ದರಿಂದ ನಮೆಗೆ ಈ ಸಾರಿ ಉತ್ತಮ ಫಲಿತಾಂಶ ಬರಲು ಸಹಕಾರ ಆಗಿದೆ ಎಂದು ಡಿಡಿಪಿಐ ಹೆಚ್ ಕೆ ಪಾಂಡು ಮಾಹಿತಿ ನೀಡಿದರು.

ನಮ್ಮ ಜಿಲ್ಲಾ ತಂಡಗಳು ಶಿಕ್ಷಣ ಅಧಿಕಾರಿಗಳು ಉತ್ತಮ ತಂಡಗಳನ್ನು ರಚಿಸಿ ವಿವಿಧ ಯೋಜನೆ ಹಮ್ಮಿಕೊಂಡಿದ್ದೆವು. ಅದು ಸಫಲತೆ ಕಾಣುವುದಕ್ಕೆ ಅನುಕೂಲವಾಗಿದೆ. ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಪೂರ್ವ ಸಿದ್ಧತೆ ಪರೀಕ್ಷೆಯನ್ನು ಪರಿಶೀಲನೆ ಮಾಡಿದ್ದೆವು. ನಮ್ಮ ಜಿಲ್ಲೆ ಈ ರೀತಿ ಬರುತ್ತೆ, 5ನೇ ಸ್ಥಾನದ ಒಳಗಡೆ ಹೋಗ್ತೀವಿ ಎಂಬ ನಂಬಿಕೆ ಇತ್ತು.

38,175 ಮಕ್ಕಳು ಏನು ಇದ್ದಾರೆ, ಆ ಮಕ್ಕಳೆಲ್ಲಾ ಪಾಸ್ ಆಗಬೇಕು ಎಂದುಕೊಂಡಿದ್ದೆವು. ಆದರೆ ಯಾರು ಪಾಸ್ ಆಗ್ತಾರೆ ಅವರನ್ನು ಒಂದು ಕಡೆ ಇಟ್ಟಿದ್ದೆವು, ಫೇಲ್ ಆಗೋ ತರ ಇರುವವರನ್ನು ನಾವು ಟ್ಯಾಕಲ್ ಮಾಡಿಕೊಂಡೆವು. ಅದೇ ಪ್ರಕಾರ ಟೀಂ ರಚಿಸಿ ಕೆಲಸ ಮಾಡಿದ್ದೆವು. ಆದರೆ ನಮ್ಮ ಜಿಲ್ಲೆಯಲ್ಲಿ ಓರ್ವ ವಿದ್ಯಾರ್ಥಿನಿ 623 ಮಾರ್ಕ್ಸ್ ತೆಗೆದುಕೊಂಡಿದ್ದಾಳೆ ಎಂದರು.

ಮುಖ್ಯವಾಗಿ ಮಕ್ಕಳು ಓದಲು ಪೋಷಕರು ಉತ್ತಮವಾದ ಶ್ರಮ ಹಾಕಿದ್ದಾರೆ. ಎಲ್ಲಾ ಸಂಘದವರು ಸಹಕಾರ ಕೊಟ್ಟಿದ್ದಾರೆ. ಎಲ್ಲ ಟೀಚರ್ಸ್ ಹಾಗೂ ಸರ್ಕಾರಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಎಲ್ಲರೂ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅವರಿಗೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಡಿಪಿಐ ಹೇಳಿದರು.

ನಾವು ಸುಮಾರು ಏಳೆಂಟು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಪೂರ್ವಸಿದ್ಧತೆ ಪರೀಕ್ಷೆ, ಯುನಿಟ್ ಪರೀಕ್ಷೆಗೆ ಮುಖ್ಯಶಿಕ್ಷಕರು, ಸಹಶಿಕ್ಷಕರಿಂದ ದೃಢೀಕರಣ ತೆಗೆದುಕೊಂಡೆವು. ಮುಖ್ಯಮಂತ್ರಿಗಳು KDP ಮೀಟಿಂಗ್ ಅಲ್ಲಿ ನಮಗೆ ಒಂದು ಟಾಸ್ಕ್ ಕೊಟ್ಟಿದ್ದರು. ಮೈಸೂರು ಜಿಲ್ಲೆ ಬರಬೇಕು, ಇತಿಹಾಸ ಇರುವ ಮೈಸೂರು ಮಹಾರಾಜರು ಆಳ್ವಿಕೆ ಮಾಡಿರುವ ಜಿಲ್ಲೆ ಇದು. ಸಾಹಿತ್ಯ, ಸಂಸ್ಕೃತಿ ಇದೆ. ವಿದ್ಯಾಭ್ಯಾಸದ ತವರೂರು. ಹಿಂದೆ ವಿದ್ಯಾಭ್ಯಾಸ ಮಾಡಬೇಕು ಅಂದರೆ ಮೈಸೂರಿಗೆ ಬರ್ತಾ ಇದ್ದರು ಇದು ಕುಂಠಿತವಾಗಬಾರದು ಎಂದು ಹೇಳಿದ್ದರು ಎಂದರು.

ಇದನ್ನೂಓದಿ:SSLC ರಿಸಲ್ಟ್‌: ಶೇ.73.40ರಷ್ಟು ಫಲಿತಾಂಶ, ಉಡುಪಿ ಫಸ್ಟ್, ಬಾಲಕಿಯರ ಮೇಲುಗೈ - SSLC Result

ETV Bharat Logo

Copyright © 2024 Ushodaya Enterprises Pvt. Ltd., All Rights Reserved.