ETV Bharat / state

ಏಳು ಸಲ ಗೆದ್ದಿದ್ದೇನೆ, ಹಲವರನ್ನು ಶಾಸಕರನ್ನಾಗಿ ಮಾಡಿದ್ದೇನೆ: ಅಸಮಧಾನಿತರ ಟೀಕೆಗೆ ಉತ್ತರಿಸಲ್ಲ ಎಂದ ಮುನಿಯಪ್ಪ - Kolar Congress ticket issue

author img

By ETV Bharat Karnataka Team

Published : Mar 27, 2024, 2:33 PM IST

Updated : Mar 27, 2024, 4:10 PM IST

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತು ಹೈಡ್ರಾಮಾ ನಡೆಯುತ್ತಿದ್ದು, ಶಾಸಕರ ರಾಜೀನಾಮೆ ವಿಚಾರವನ್ನು ಅವರನ್ನೇ ಕೇಳಿ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

KOLAR CONGRESS TICKET CIRCUS  LOK SABHA ELECTION 2024  KOLAR POLITICAL DRAMA  MUNIYAPPA
ಶಾಸಕರ ರಾಜೀನಾಮೆ ವಿಚಾರವನ್ನು ಅವರಿಗೆ ಕೇಳಿ ಎಂದ ಮುನಿಯಪ್ಪ

ಸಚಿವ ಮುನಿಯಪ್ಪ

ಬೆಂಗಳೂರು: ಚಿಕ್ಕಪೆದ್ದಣ್ಣರಿಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿ, ಕೋಲಾರ ಭಾಗದ ಶಾಸಕರ ರಾಜೀನಾಮೆ ವಿಚಾರವನ್ನು ಅವರನ್ನೇ ಕೇಳಿ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ವಿಚಾರವಾಗಿ ಅವರನ್ನೇ ಕೇಳಬೇಕು. ರಮೇಶ್ ಕುಮಾರ್ ಹಾಗು ನಾವು ಎಲ್ಲ ಒಟ್ಟಿಗಿದ್ದೇವೆ. ಸಚಿವರೂ ಜೊತೆಗಿದ್ದಾರೆ. ಒಟ್ಟಿಗೆ ತೀರ್ಮಾನವಾಗಿದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿ ಗೆಲ್ಲಿಸುವುದಾಗಿ ಹೇಳಿದ್ದೆವು. ಸಿಎಂ ಡಿಸಿಎಂ ಮುಂದೆ ಈ ರೀತಿ ಮಾತನಾಡಿದ್ದೇವೆ. ಇಷ್ಟಾದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಅದಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದರು.

ಅಸಮಾಧಾನಿತ ಶಾಸಕರ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಮುನಿಯಪ್ಪ, ಜನ ನನ್ನನ್ನು ಏಳು ಸಲ ಗೆಲ್ಲಿಸಿದ್ದಾರೆ. ನಾನೇ ಸಾಕಷ್ಟು ಜನರನ್ನು ಶಾಸಕರನ್ನಾಗಿ ಮಾಡಿದ್ದೇನೆ. ಕೋಲಾರ ಟಿಕೆಟ್ ವಿಚಾರ ಸಂಬಂಧ ಶಾಸಕರ ಟೀಕೆಗೆ ನಾನು ಉತ್ತರಿಸಲ್ಲ. ಎಲ್ಲವನ್ನೂ ಸಿಎಂ, ಡಿಸಿಎಂ ನಿರ್ಧಾರ ಮಾಡಲಿದ್ದಾರೆ ಎಂದಿದ್ದಾರೆ.

ಸಚಿವ ಸುಧಾಕರ್‌ ಸೇರಿದಂತೆ ಅಸಮಾಧಾನಿತ ಶಾಸಕರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು, ನಾವು ಎಲ್ಲಾ ಸ್ಥಾನ ಗೆಲ್ಲುವ ಕೆಲಸ ಮಾಡೋಣ. ಈಗ ನಾನು ಏನೂ ಹೇಳಲ್ಲ, ಸಿಎಂ ಹಾಗೂ ಡಿಸಿಎಂ ತೀರ್ಮಾನ ಮಾಡುತ್ತಾರೆ ಎಂದುಷ್ಟೇ ತಿಳಿಸಿದರು.

ಎಂಎಲ್ಸಿ ನಜೀರ್ ಅಹಮದ್ ಪದ ಬಳಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಮುನಿಯಪ್ಪ, ಕೋಪದಲ್ಲಿ ಸಣ್ಣತನದ ಮಾತನಾಡುತ್ತಾರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನಾನು ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡಿದ್ದೇನೆ, ಹತ್ತು ವರ್ಷ ಕೇಂದ್ರ ಸಚಿವನಾಗಿದ್ದೆ, ಅವರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ, ಅವರೆಲ್ಲರೂ ನಮಗೆ ಸಹಕಾರ ಮಾಡಬೇಕು, ನಮ್ಮ ಅಭ್ಯರ್ಥಿ ನೂರಕ್ಕೆ ನೂರು ಈ ಸಲ ಗೆದ್ದೆ ಗೆಲ್ಲುತ್ತಾರೆ, ಅಧ್ಯಕ್ಷರ‌ ಜೊತೆ ನಾನು ಮಾತುಕತೆ ನಡೆಸುತ್ತೇನೆ, ಎಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.

ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ಎಲ್ಲರೂ ಹೇಳಿದ್ದರು, ರಮೇಶ್ ಕುಮಾರ್ ಮತ್ತು ಅವರ ಸಂಗಡಿಗರು ಕೂಡಾ ಅದೇ ಮಾತು‌ ಹೇಳಿದ್ದರು. ಆ ಸಭೆಯಲ್ಲಿ ಎಲ್ಲರೂ ಇದ್ದರು. ಅಹಿತಕರ ಘಟನೆ ನಡೆದಿದ್ದರೆ ಮರೆಯೋಣ ಅಂತಾ ಆ ಸಭೆಯಲ್ಲಿ ನಾನು ಹೇಳಿದ್ದೆ. ಕೋಲಾರದಲ್ಲಿ ಕಾಂಗ್ರೆಸ್ ಬಹಳ ಭದ್ರವಾಗಿದೆ, ಜಾಫರ್ ಶರೀಫ್, ಶಂಕರಾನಂದ ಬಳಿಕ ಏಳು ಸಲ ಗೆದ್ದಿದ್ದು ನಾನೇ. ಅವಕಾಶ ಕೊಟ್ಟರೆ ಗೆದ್ದುಕೊಂಡು ಬರುತ್ತೇನೆ, ಸುಧಾಕರ್ ಮಂತ್ರಿ ಇದ್ದಾರೆ. ಅವರವರಿಗೆ ಇಷ್ಟ ಬಂದಿದ್ದು ತೀರ್ಮಾನ ತೆಗೆದುಕೊಳ್ಳಲಿ. ರಾಜೀನಾಮೆ ಕೊಡಲು ಹೋದವರ ಬಗ್ಗೆ ನಾನು ಚಕಾರ ಎತ್ತುವುದಿಲ್ಲ. ಎಲ್ಲವನ್ನೂ ಸಿಎಂ ಮತ್ತು ಅಧ್ಯಕ್ಷರು ಸೇರಿ ತೀರ್ಮಾನ ಮಾಡುತ್ತಾರೆ, ನಾನು ಯಾರಿಗೂ ತೊಂದರೆ ಮಾಡಿಲ್ಲ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.

ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್​ನ ಐವರು ಶಾಸಕರು ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಶಾಸಕ ಕೆ ವೈ ನಂಜೇಗೌಡ, ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್‌, ಪರಿಷತ್‌ ಸದಸ್ಯ ಅನಿಲ್‌ ಕುಮಾರ್‌ ಹಾಗೂ ನಜೀರ್‌ ಅಹ್ಮದ್‌ ರಾಜೀನಾಮೆ ಬೆದರಿಕೆ ಹಾಕಿದ್ದು, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡದಂತೆ ಪಟ್ಟು ಹಿಡಿದಿದ್ದಾರೆ.

ಈಗಾಗಲೇ ರಾಜೀನಾಮೆ ನೀಡುವ ಕುರಿತು ವಿಧಾನಸೌಧಕ್ಕೆ ತೆರಳಿ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ರಾಜೀನಾಮೆ ಪತ್ರವನ್ನು ಮಂಗಳೂರಿಗೆ ತೆರಳಿ ಸ್ಪೀಕರ್ ಯು ಟಿ ಖಾದರ್​ಗೆ ಖುದ್ದಾಗಿ ಸಲ್ಲಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ ಟಿಕೆಟ್​ ಹಂಚಿಕೆ ಬಿಕ್ಕಟ್ಟು; ರಾಜೀನಾಮೆಗೆ ಮುಂದಾದ ಶಾಸಕರು - Lok Sabha election 2024

Last Updated : Mar 27, 2024, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.