ETV Bharat / state

ಸದನದಲ್ಲಿ ಕೇಳಿದ್ದ ಪ್ರಶ್ನೆಗೆ ಈಗಲೂ ಉತ್ತರ ನೀಡದಿದ್ದರೆ ಬಿಡಿಎ ಎದುರು ಧರಣಿ: ಸ್ಪೀಕರ್​ಗೆ ಶಾಸಕ ಸುರೇಶ್ ಕುಮಾರ್ ಪತ್ರ - Suresh Kumar

author img

By ETV Bharat Karnataka Team

Published : Apr 11, 2024, 10:07 AM IST

ಫೆಬ್ರವರಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದಿದ್ದರೆ ಬಿಡಿಎ ಎದುರು ಧರಣಿ ನಡೆಸುವುದಾಗಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸ್ಪೀಕರ್​ಗೆ ಪತ್ರ ಬರೆದಿದ್ದಾರೆ.

ಶಾಸಕ ಸುರೇಶ್ ಕುಮಾರ್
ಶಾಸಕ ಸುರೇಶ್ ಕುಮಾರ್

ಬೆಂಗಳೂರು : ನಾವ್ಯಾರೂ ಸಹ ಕಾಸಿಗಾಗಿ ಪ್ರಶ್ನೆ ಕೇಳುವ ಜಾಯಮಾನದವರಲ್ಲ. ನಾಗರಿಕರ ಹಿತಕ್ಕಾಗಿ, ಒಟ್ಟು ರಾಜ್ಯದ ಒಳಿತಿಗಾಗಿ ಪ್ರಶ್ನೆ ಕೇಳಿದಾಗ ಇಲಾಖೆಗಳು ಉತ್ತರ ನೀಡದ ಪ್ರವೃತ್ತಿ ನನ್ನಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ನನ್ನ ಪ್ರಶ್ನೆಗಳಿಗೆ ಮೇ 8ರ ಬುಧವಾರ ದಂದು ಉತ್ತರ ನೀಡಿಲ್ಲದಿದ್ದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಂದೆ ಉತ್ತರ ಪಡೆಯಲು ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ವಿಧಾನಸಭೆ ಅಧ್ಯಕ್ಷರಿಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಸ್ವೀಕರ್​ಗೆ ಪತ್ರ ಬರೆದಿರುವ ಸುರೇಶ್ ಕುಮಾರ್, " ಶಾಸಕಾಂಗ" ಕುರಿತು ಸರ್ಕಾರದ ಇಲಾಖೆಗಳಿಗೆ ಇರುವ ಉದಾಸೀನ ಪ್ರವೃತ್ತಿಯ ಒಂದು ತಾಜಾ ಉದಾಹರಣೆಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ವರ್ಷದಲ್ಲಿ ನೂರು ದಿನ ಅಧಿವೇಶನ ನಡೆಯಬೇಕು ಎಂಬುದು ಅಲಿಖಿತ ನಿಯಮ. ವರ್ಷದಲ್ಲಿ ಕೊನೆಯ ಪಕ್ಷ 60 ದಿನಗಳಾದರೂ ವಿಧಾನಮಂಡಲದ ಅಧಿವೇಶನ ನಡೆಯಬೇಕು ಎನ್ನುವುದು ಎಲ್ಲರ ಸದಿಚ್ಚೆ. ಆದರೆ, ವರ್ಷಕ್ಕೆ ಕೇವಲ 30 ರಿಂದ 35 ದಿನ ಅಧಿವೇಶನ ನಡೆಯುವುದು ವಾಡಿಕೆಯಾಗಿದೆ.

ಅಧಿವೇಶನದ ಪ್ರತಿದಿನ ಪ್ರಶ್ನೋತ್ತರ ಕಾಲ ಇರುತ್ತದೆ. ಮೊದಲ ಒಂದು ಗಂಟೆ (ಕೆಲವೊಮ್ಮೆ ಇದು ಎರಡು ಗಂಟೆಗಳ ಕಾಲ ಬೆಳೆದದ್ದೂ ಉಂಟು) ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರಿಂದ ನೇರವಾಗಿ ಉತ್ತರ ಪಡೆದು ಉಪ ಪ್ರಶ್ನೆಗಳನ್ನು ಕೇಳಲು ಅವಕಾಶ ಇರುತ್ತದೆ. ಇದಾದ ನಂತರ ಲಿಖಿತ ಮೂಲಕ ಅಂದರೆ ಚುಕ್ಕೆ ರಹಿತ ಪ್ರಶ್ನೆಗಳಿಗೆ ಉತ್ತರ ನೀಡುವುದು ನಡೆದುಕೊಂಡು ಬಂದಿರುವ ಪದ್ಧತಿ.

ಶಾಸಕರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಲು "ಚುಕ್ಕೆ ಸಹಿತ" ಮತ್ತು "ಚುಕ್ಕೆ ರಹಿತ" ಪ್ರಶ್ನೆಗಳ ಮೂಲಕ ಪ್ರಯತ್ನಿಸುತ್ತಾರೆ. ಆದರೆ, ನಿಮಗೂ ಗೊತ್ತಿರುವಂತೆ ಹಲವು ಪ್ರಶ್ನೆಗಳಿಗೆ ಸದನದ ಅವಧಿಯಲ್ಲಿ ಉತ್ತರ ಸಿಗುವುದಿಲ್ಲ. ತಿಂಗಳುಗಟ್ಟಲೇ ಸಹ ಉತ್ತರವೇ ಸಿಗದಿರುವುದು ಇಲಾಖೆಗಳಿಗೆ ಸದನ ಕುರಿತು ಇರುವ ತಿರಸ್ಕಾರದ ಮನಸ್ಥಿತಿ ತೋರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಒಂದು ಸ್ವಂತ ಉದಾಹರಣೆ ನೀಡುತ್ತೇನೆ ಎಂದು ಪತ್ರದಲ್ಲಿ ಬರೆದಿರುವ ಸುರೇಶ್ ಕುಮಾರ್, ಫೆಬ್ರವರಿ 2024 ರಲ್ಲಿ ನಡೆದ ನಮ್ಮ ವಿಧಾನಸಭೆಯ ಅಧಿವೇಶನದಲ್ಲಿ ದಿನಾಂಕ 20.2 2024 ರಂದು ನನ್ನ ಮೂರು ಚುಕ್ಕೆ ರಹಿತ ಪ್ರಶ್ನೆಗಳು ಇದ್ದವು. ಉತ್ತರ ಕೊಡಬೇಕಾಗಿದ್ದವರು ರಾಜ್ಯದ ಉಪಮುಖ್ಯಮಂತ್ರಿಗಳು. ಇಂದು ದಿನಾಂಕ 10.04.2024. ಅಂದರೆ ಸುಮಾರು 50 ದಿನಗಳು ಕಳೆದಿವೆ. ನನ್ನ ಆ ಮೂರು ಪ್ರಶ್ನೆಗಳಿಗೆ ಉತ್ತರ ಇದುವರೆಗೂ ಬಂದಿಲ್ಲ. ಇಲಾಖೆಗಳ ಅಧಿಕಾರಿಗಳ ಈ ಧೋರಣೆ ಪ್ರಜಾತಂತ್ರ ವ್ಯವಸ್ಥೆಗೆ ತೋರುವ ತೀವ್ರ ಅಗೌರವ ತಂದಿದೆ ಎಂದಿದ್ದಾರೆ.

ಉತ್ತರ ಬರದಿರುವ ಪ್ರಶ್ನೆಗಳ ವಿವರ:

ಕೆಂಪೇಗೌಡ ಬಡಾವಣೆಯ ಆಟದ ಮೈದಾನಗಳು: 947 (572) : ಉಪಮುಖ್ಯಮಂತ್ರಿಗಳು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೇ?

  • ಬೆಂಗಳೂರು ನಗರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸಿಎ, ಉದ್ಯಾನ ಮತ್ತು ಆಟದ ಮೈದಾನಗಳ ನಿರ್ಮಾಣ ಯೋಜನೆಯಂತೆ ಆಗದೇ ಇರುವುದರ ತನಿಖೆ ಯಾವ ಹಂತದಲ್ಲಿದೆ.
  • ಈ ಬಡಾವಣೆಯ ಆಲ್ಕಾನ್ಸ್ ಪರಿಶೋಧನೆ ಯಾವ ಹಂತದಲ್ಲಿದೆ? ಈ ತನಿಖೆಯು ಯಾವಾಗ ಪೂರ್ಣಗೊಳ್ಳುತ್ತದೆ: ಈ ಸಂಬಂಧ ವರದಿ ಯನ್ನು ಪಡೆದು ಅಂತಿಮ ಅನುಮೋದನೆ, ವರದಿಯನ್ನು ಕಾರ್ಯರೂಪಕ್ಕೆ ತರುವ ಯೋಜನೆಯ ವಿವರ ನೀಡುವುದು.
  • ತನಿಖೆ ಪೂರ್ಣಗೊಂಡಿದ್ದರೆ, ವರದಿಗಳಲ್ಲಿರುವ ಅಂಶಗಳು ಯಾವವು? ಮುಂದೆ ಸರ್ಕಾರ ಕೈಗೊಳ್ಳುವ ಕ್ರಮಗಳು ಯಾವುವು?
  • ಬಡಾವಣೆಯ ಸಿಡಿಪಿ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಯಾವಾಗ ಕೈಗೆತ್ತಿಕೊಳ್ಳಲಾಗುವುದು?

ನಿವೇಶನಗಳು: 949 (574) ಉಪಮುಖ್ಯಮಂತ್ರಿಗಳು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೇ?

  • ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದ ಅನೇಕ ಹಂಚಿಕೆದಾರರು ಅರಣ್ಯ ಇಲಾಖೆ ಬಫರ್ ವಲಯ ಎಂದು ಘೋಷಿಸಿರುವುದರಿಂದ ಇದುವರೆಗೂ ಮನೆಗಳನ್ನು ನಿರ್ಮಾಣ ಮಾಡಲು ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
  • ಈ ಬಡಾವಣೆಯಲ್ಲಿರುವ ಬ್ಲಾಕ್ ವಾರು ಈ ರೀತಿ ತೊಂದರೆಗೀಡಾಗಿರುವ ನಿವೇಶನಗಳ ಸಂಖ್ಯೆ ಎಷ್ಟು ; (ವಿವರ ನೀಡುವುದು)
  • ಬನಶಂಕರಿ ಆರನೇ ಹಂತದಲ್ಲಿ ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಸೇರಿದ ಭೂಮಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ನಿವೇಶನಗಳನ್ನು ಹಂಚಿರುವುದು ನಿಜವೇ? (ವಿವರಗಳನ್ನು ನೀಡುವುದು)
  • ಈ ನಿವೇಶನಗಳ ಪೈಕಿ ಎಷ್ಟು ನಿವೇಶನಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ?
  • ಬಫರ್ ವಲಯ ಮತ್ತು ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ನಿವೇಶನ ಪಡೆದಿರುವ ಹಂಚಿಕೆದಾರರಿಗೆ ಬದಲಿ ನಿವೇಶನ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯಾವ ಪರ್ಯಾಯ ಯೋಜನೆ ರೂಪಿಸಿದೆ?

ನಾಡಪ್ರಭು ಕೆಂಪೇಗೌಡ ಬಡಾವಣೆಯ ನಕ್ಷೆಗಳು: 950 (575) ಉಪಮುಖ್ಯಮಂತ್ರಿಗಳು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೇ

  • ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿರ್ಮಾಣ ಅಧಿಕೃತವೇ? ಎಲ್ಲ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆಗಳನ್ನು ಪಡೆದಿರುವ ವಿವರವನ್ನು ನೀಡುವುದು.
  • ವಿವಾದ ರಹಿತ ಪ್ರದೇಶದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಪ್ರಸ್ತುತ ನಕ್ಷೆಗಳು ನಗರ ಮತ್ತು ಪಟ್ಟಣ ಯೋಜನೆ ಕಾಯ್ದೆ ನಿಯಮಾವಳಿಗಳಂತೆ ನಗರ ಯೋಜನಾ ಸದಸ್ಯರಿಂದ ಅನುಮೋದನೆಗಳನ್ನು ಪಡೆದು ನಂತರ ನಿರ್ಮಿಸಲಾಗಿದೆಯೇ?
  • ಸದರಿ ಬಡಾವಣೆಯಲ್ಲಿ 2015 ರಿಂದ ಇಲ್ಲಿಯವರೆಗೆ ಅಭಿಯಂತರ ವಿಭಾಗ ಎಷ್ಟು ಬಾರಿ ನಕ್ಷೆಗಳನ್ನು ಪರಿಷ್ಕರಣೆ ಮಾಡಿದೆ? ಪ್ರತಿಯೊಂದು ಪರಿಷ್ಕರಣೆಗೂ ನಗರ ಮತ್ತು ಪಟ್ಟಣ ಯೋಜನೆ ಕಾಯ್ದೆ, ನಿಯಮಾವಳಿಗಳಂತೆ ನಗರ ಯೋಜನಾ ಸದಸ್ಯರಿಂದ ಅನುಮೋದನೆಗಳನ್ನು ಪಡೆದಿರುವ ಪ್ರತಿಗಳನ್ನು ನೀಡುವುದು.
  • ವಿವಾದ ರಹಿತ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸದರಿ ಬಡಾವಣೆಯಲ್ಲಿ ನಗರ ಮತ್ತು ಪಟ್ಟಣ ಯೋಜನಾ ಕಾಯ್ದೆ ನಿಯಮಾವಳಿಗಳಂತೆ ಒಟ್ಟಾರೆ 10% ಸಿ ಎ, 15% ಆಟದ ಮೈದಾನ, ಉದ್ಯಾನವನಗಳು, ತೆರೆದ ಪ್ರದೇಶಗಳ ಅನುಪಾತವನ್ನು ಅಭಿಯಂತರ ವಿಭಾಗವು ಪಾಲಿಸಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲು ನಗರ ಯೋಜನೆ ವಿಭಾಗವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ?(ವಿವರಗಳನ್ನು ನೀಡುವುದು).

ಇದನ್ನೂ ಓದಿ : ದಿಂಗಾಲೇಶ್ವರ ಶ್ರೀಗಳೊಂದಿಗೆ ಯಡಿಯೂರಪ್ಪನವರೂ ಮಾತನಾಡಿದ್ದಾರೆ: ಬಿ.ವೈ.ವಿಜಯೇಂದ್ರ - B Y Vijayendra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.