ETV Bharat / state

'ಜ್ಞಾನ ದೇಗುಲವಿದು - ಧೈರ್ಯವಾಗಿ ಪ್ರಶ್ನಿಸಿ' ಘೋಷವಾಕ್ಯಕ್ಕೆ ಸಚಿವ ಹೆಚ್ ಸಿ ಮಹದೇವಪ್ಪ ಸ್ಪಷ್ಟನೆ

author img

By ETV Bharat Karnataka Team

Published : Feb 19, 2024, 7:53 PM IST

ಡಾ ಹೆಚ್ ಸಿ ಮಹದೇವಪ್ಪ
ಡಾ ಹೆಚ್ ಸಿ ಮಹದೇವಪ್ಪ

ಜ್ಞಾನ ದೇಗುಲವಿದು - ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ 'ವಿಚಾರ ಕ್ರಾಂತಿಗೆ ಆಹ್ವಾನ' ಪ್ರಬಂಧದ ಆಶಯವೇ ಆಗಿದೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರು : ಜ್ಞಾನ ದೇಗುಲವಿದು ಎಂಬ ಘೋಷವಾಕ್ಯಕ್ಕೆ ಸಂಬಂಧಿಸಿದಂತೆ ಬೆಳಗಿನಿಂದ ಮಾಧ್ಯಮಗಳಲ್ಲಿ ಸುದ್ದಿಯು ಬಿತ್ತರವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಸೃಜನಾತ್ಮಕ ಕಲಿಕೆಯ ದೃಷ್ಟಿಯಿಂದ ಮಕ್ಕಳಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಮೂಡಿಸಿ ಅವರಲ್ಲಿ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಚರ್ಚೆಯನ್ನು ನಡೆಸಿದ್ದು, 'ಜ್ಞಾನ ದೇಗುಲವಿದು - ಧೈರ್ಯವಾಗಿ ಪ್ರಶ್ನಿಸಿ' ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ? ಎಂಬ ಆಲೋಚನೆಯನ್ನು ಕೆಲವರು ಮುಂದಿಟ್ಟಾಗ, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಉತ್ತಮ ಆಲೋಚನೆಯನ್ನು ಹೊಂದಿದ ಈ ಸಾಲನ್ನು ಕೆಲವರು ಶಾಲೆಗಳಲ್ಲೂ ಬಳಸಿರುತ್ತಾರೆ. ಅಂದಹಾಗೆ ಜ್ಞಾನ ದೇಗುಲವಿದು - ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ 'ವಿಚಾರ ಕ್ರಾಂತಿಗೆ ಆಹ್ವಾನ' ಪ್ರಬಂಧದ ಆಶಯವೇ ಆಗಿದ್ದು, ಕುವೆಂಪು ಅವರಿಗೆ ಅವಮಾನ ಎಸಗುವ ಯಾವುದೇ ಪ್ರಮಾದವು ಇಲ್ಲಿ ಜರುಗಿರುವುದಿಲ್ಲ ಎಂದಿದ್ದಾರೆ. ಶಿಕ್ಷಣದ ಉದ್ದೇಶವೇ ಮಕ್ಕಳಲ್ಲಿ ವೈಚಾರಿಕತೆಯ ಜೊತೆಗೆ, ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸುವುದಾಗಿದೆ.

ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್​ಸ್ಟೀನ್​ನಿಂದ ಹಿಡಿದು ಬಹಳಷ್ಟು ವಿಜ್ಞಾನಿಗಳು ಇದನ್ನೇ ಪ್ರತಿಪಾದಿಸಿದ್ದು, ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ ಎಂದು ಪ್ರಕಟಣೆ ಮೂಲಕ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಇದನ್ನೂ ಓದಿ : 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಪುನಃ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.