ETV Bharat / state

ಫ್ಯಾಕ್ಟರಿ ನೀಡಿದ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥ: ಆಸ್ಪತ್ರೆಗೆ ದಾಖಲು - Tender Coconut

author img

By ETV Bharat Karnataka Team

Published : Apr 11, 2024, 8:11 AM IST

Etv Bharat
Etv Bharat

ಫ್ಯಾಕ್ಟರಿಯವರು ನೀಡಿದ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮಂಗಳೂರು: ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥರಾದ ಘಟನೆ ನಡೆದಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ ಅಡ್ಯಾರ್​​ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಸುತ್ತಮುತ್ತಲಿನ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿದ್ದರು. ಇದನ್ನು ಕುಡಿದ ನಂತರ ಮಂಗಳವಾರ ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ.

ಈ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್​​ಗೆ 40 ರೂಪಾಯಿಯಂತೆ ನೀಡಲಾಗಿತ್ತು. ವಾಂತಿ, ಭೇದಿಯಿಂದ ಬಳಲಿದವರಲ್ಲಿ ಮೂವರು ಸ್ಥಳೀಯ ವೈದ್ಯರುಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೇ, ನಗರದ ಪಳ್ನೀರ್​​ನಲ್ಲಿರುವ ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಉಳಿದ 12 ಮಂದಿ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಇತರೆಡೆ ಹೊರ ರೋಗಿಗಳಾಗಿ ಹೆಚ್ಚಿನ ಔಷಧೋಪಚಾರ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರದಂದು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗೆ ವಾಟ್ಸ್​ಆ್ಯಪ್ ಮುಖಾಂತರ ದೂರು ಸಲ್ಲಿಕೆಯಾಗಿದೆ. ಬಳಿಕ ಅವರು ಅಡ್ಯಾರ್​​ನಲ್ಲಿರುವ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ, ಎಳನೀರಿನ ಸ್ಯಾಂಪಲ್​ ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ. ಇದೀಗ ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ.

ಅಧಿಕಾರಿಗಳು ಪಳ್ನೀರ್​​ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿ, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ವೈದ್ಯರೊಂದಿಗೆ ಚರ್ಚೆ ಮಾಡಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ತಂಡವೂ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯದ ಕುರಿತಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು - Students Fall Sick

ETV Bharat Logo

Copyright © 2024 Ushodaya Enterprises Pvt. Ltd., All Rights Reserved.